ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮತದಾರರ 53 ಗುರುತಿನ ಚೀಟಿ ನಕಲಿ; ಹೆಬ್ಬಾಳ ಪೊಲೀಸರಿಂದ ಮೂವರ ಬಂಧನ

ಎಂ.ಎಸ್.ಎಲ್ ಟೆಕ್ನೊ ಸಲ್ಯೂಷನ್ಸ್ ಮಳಿಗೆಯಲ್ಲಿ ಅಕ್ರಮ
Published 27 ಅಕ್ಟೋಬರ್ 2023, 16:40 IST
Last Updated 27 ಅಕ್ಟೋಬರ್ 2023, 16:40 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಟಿ. ನಗರ ಬಳಿಯ ಕನಕನಗರದ ಸುಲ್ತಾನ್ ಪಾಳ್ಯ ಮುಖ್ಯರಸ್ತೆಯಲ್ಲಿರುವ ಎಂ.ಎಸ್.ಎಲ್ ಟೆಕ್ನೊ ಸಲ್ಯೂಷನ್ಸ್ ಮಳಿಗೆಯಲ್ಲಿ ಪತ್ತೆಯಾಗಿದ್ದ ಮತದಾರರ 53 ಗುರುತಿನ ಚೀಟಿಗಳು ನಕಲಿ ಎಂಬುದಾಗಿ ಗೊತ್ತಾಗಿದ್ದು, ಮಳಿಗೆ ಮಾಲೀಕ ಮೌನೇಶ್‌ ಕುಮಾರ್ ಸೇರಿ ಮೂವರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸಿಸಿಬಿ ಪೊಲೀಸರು ನೀಡಿದ್ದ ದೂರು ಆಧರಿಸಿ ಅ. 19ರಂದು ಎಫ್‌ಐಆರ್ ದಾಖಲಿಸಿಕೊಂಡು ಮಳಿಗೆ ಮೇಲೆ ದಾಳಿ ಮಾಡಲಾಗಿತ್ತು. ಗುರುತಿನ ಚೀಟಿಗಳು, ಆಧಾರ್ ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು. ಮೌನೇಶ್‌ಕುಮಾರ್, ಕೃತ್ಯಕ್ಕೆ ಸಹಕರಿಸುತ್ತಿದ್ದ ಭಗತ್ ಹಾಗೂ ರಾಘವೇಂದ್ರನನ್ನು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಳಿಗೆಯಲ್ಲಿ ಸಿಕ್ಕಿದ್ದ ಮತದಾರರ ಗುರುತಿನ ಚೀಟಿಗಳ ನೈಜತೆ ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆಲಾಗಿತ್ತು. ಇದೀಗ ವರದಿ ಬಂದಿದ್ದು, 53 ಗುರುತಿನ ಚೀಟಿಗಳು ನಕಲಿ ಎಂಬುದು ಗೊತ್ತಾಗಿದೆ. ಹೀಗಾಗಿ, ಮೌನೇಶ್‌ಕುಮಾರ್, ಭಗತ್ ಹಾಗೂ ರಾಘವೇಂದ್ರನನ್ನು ಬಂಧಿಸಲಾಗಿದೆ. ಸದ್ಯ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ತಿಳಿಸಿವೆ.

ಗುರುತಿನ ಚೀಟಿ ಮಾರಾಟ: ‘ ಆರೋಪಿಗಳು ಹೊರ ರಾಜ್ಯ ಹಾಗೂ ಜಿಲ್ಲೆಗಳ ಹಲವರಿಂದ ಹಣ ಪಡೆದು ಮತದಾರರ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಿ ಕೊಡುತ್ತಿದ್ದರು. ಇವನ್ನು ಬಳಸಿಕೊಂಡು ಹಲವರು, ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದರು. ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದರು. ಕೆಲವರು, ವೇಶ್ಯಾವಾಟಿಕೆ ದಂಧೆಯಲ್ಲೂ ತೊಡಗಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಅಸಲಿ ಮತದಾರರ ಗುರುತಿನ ಚೀಟಿಗಳನ್ನು ಆರೋಪಿಗಳು ಕಂಪ್ಯೂಟರ್‌ನಲ್ಲಿ ಸ್ಕ್ಯಾನ್‌ ಮಾಡಿಟ್ಟುಕೊಂಡಿದ್ದರು. ಯಾರಾದರೂ ಗುರುತಿನ ಚೀಟಿ ಕೇಳಿದರೆ, ಫೋಟೊಶಾಪ್ ಮೂಲಕ ಬದಲಾವಣೆ ಮಾಡಿ ನಕಲಿ ಚೀಟಿ ನೀಡುತ್ತಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ಹಲವರಿಗೆ ನೋಟಿಸ್: ‘ಮತದಾರರ ನಕಲಿ ಗುರುತಿನ ಚೀಟಿಗಳಲ್ಲಿರುವ ಹೆಸರು ಹಾಗೂ ವಿಳಾಸಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ನಕಲಿ ಗುರುತಿನ ಚೀಟಿ ಪಡೆದಿದ್ದ ಕೆಲವರಿಗೆ ನೋಟಿಸ್ ನೀಡಲಾಗಿದ್ದು, ಅವರ ವಿಚಾರಣೆ ನಡೆಸಬೇಕಿದೆ’ ಎಂದು ಹೇಳಿವೆ.

ಆಧಾರ್ ಅನುಮತಿ: ‘ಆಧಾರ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಆರೋಪಿಗಳು ಅನುಮತಿ ಪಡೆದಿರುವುದಾಗಿ ಗೊತ್ತಾಗಿದೆ. ಮಳಿಗೆಯಲ್ಲಿ ಸಿಕ್ಕಿರುವ ಆಧಾರ್‌ಗಳನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ (ಯುಐಡಿಎಐ) ಪತ್ರ ಬರೆಯಲಾಗಿದೆ. ಅದಕ್ಕೆ ಪ್ರತಿಕ್ರಿಯೆ ಬರಬೇಕಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT