ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಕೋಳು ಕೆರೆಯಲ್ಲಿ ಹೆರಾನ್ ಗ್ರೇ

ಯುರೋಪ್, ಆಗ್ನೇಯ ಏಷ್ಯಾದಲ್ಲಿ ಕಂಡು ಬರುವ ಕೊಕ್ಕರೆ
Last Updated 21 ಫೆಬ್ರುವರಿ 2021, 22:01 IST
ಅಕ್ಷರ ಗಾತ್ರ

ಹೆಸರಘಟ್ಟ: ಯುರೋಪ್, ಆಗ್ನೇಯ ಏಷ್ಯಾ, ರಷ್ಯಾದ ಕೆಲವು ಭಾಗಗಳಲ್ಲಿ ಕಂಡು ಬರುವ ಹೆರಾನ್ ಗ್ರೇ ಕೊಕ್ಕರೆಯು ಹೋಬಳಿಯ ಕಾಕೋಳು ಕೆರೆಯಲ್ಲಿ ಕಂಡು ಬಂದಿದೆ.

ಸಾಮಾನ್ಯವಾಗಿ ಈ ಕೊಕ್ಕರೆಯು ಉದ್ದವಾದ ಕುತ್ತಿಗೆಯನ್ನು ಹೊಂದಿರುತ್ತದೆ. ಅದು ಇಂಗ್ಲಿಷ್‌ ಅಕ್ಷರದ ’S' ನ್ನು ಹೋಲುತ್ತದೆ. ತಂಪಾದ ಪ್ರದೇಶಗಳಲ್ಲಿ ವಾಸಿಸುವ ಈ ಕೊಕ್ಕರೆಯು ರಾತ್ರಿಯ ವೇಳೆಯಲ್ಲಿಯೂ ಸಕ್ರಿಯವಾಗಿರುತ್ತದೆ. ಸುಮಾರು 110 ಸೆ.ಮೀ. ಎತ್ತರ ಮತ್ತು 1ರಿಂದ ಎರಡು ಕೆ.ಜಿ. ತೂಕವಿರುತ್ತದೆ.

ಬಿಳಿ ಬಣ್ಣದ ಪುಕ್ಕಗಳ ಜೊತೆ ತುಸು ಬೂದಿ ಬಣ್ಣವನ್ನು ಹೊಂದಿರುವ ಇದು, ಫೆಬ್ರುವರಿಯಿಂದ ಜೂನ್‌ವರೆಗೆ ವಿಶ್ವದ ನಾನಾ ಪ್ರದೇಶಗಳಿಗೆ ವಲಸೆ ಹೋಗುತ್ತದೆ.

‘ಪ್ರಾಚೀನ ಕಾಲದಿಂದ 19ನೇ ಶತಮಾನದ ಮಧ್ಯಭಾಗದವರೆಗೂ ಈ ಕೊಕ್ಕರೆಯನ್ನು ನೋಡಿದರೆ ಅಪಶಕುನ ಎಂದು, ಬದುಕಿಗೆ ಹಾನಿಕರ ಎಂದು ಕೊಲ್ಲಲಾಗುತ್ತಿತ್ತು. ಚೀನೀ ಜಾನಪದ ಕಲೆಯಲ್ಲಿ ಈ ಕೊಕ್ಕರೆಯನ್ನು ಸಂತೋಷ ಮತ್ತು ಯೋಗಕ್ಷೇಮದ ಸಂಕೇತವಾಗಿ ಬಳಕೆ ಮಾಡುತ್ತಾರೆ. ಇದು ಮೂಗಿನಿಂದ ಸದ್ದು ಮಾಡುತ್ತದೆ’ ಎನ್ನುತ್ತಾರೆ ಪಕ್ಷಿ ತಜ್ಞ ಡಾ.ಮಹೇಂದ್ರಕುಮಾರ್.

‘ಆಳವಿಲ್ಲದ ನೀರಿನಲ್ಲಿ ಮೀನು, ವಿವಿಧ ಸಣ್ಣ ಕಶೇರುಕಗಳು, ಕಪ್ಪೆ, ಹಾವುಗಳನ್ನು ತಿನ್ನುತ್ತದೆ. ನೀರಿನಲ್ಲಿ ಅಲುಗಾಡದಂತೆ ಗಂಟೆಗಳ ಕಾಲ ನಿಂತು ಬೇಟೆಯಾಡುವ ವಿಶಿಷ್ಟ ಶಕ್ತಿ ಇದಕ್ಕಿದೆ. ಈ ಕೊಕ್ಕರೆಯು ರೆಕ್ಕೆ ಬಿಚ್ಚಿ ಹಾರುವಾಗ ತುಂಬಾ ಸುಂದರವಾಗಿ ಕಾಣುತ್ತದೆ’ ಎಂದೂ ಅವರು ಹೇಳಿದರು.

‘ವಿದೇಶಿ ಹಕ್ಕಿಗಳು ಕಾಕೋಳು ಕೆರೆಗೆ ವಲಸೆ ಬರುತ್ತವೆ. ನೂರಾರು ಹಕ್ಕಿಗಳು ಗೂಡು ಕಟ್ಟಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಆದರೆ ಕಾಕೋಳು ಕೆರೆಯನ್ನು ಅಭಿವೃದ್ದಿ ಪಡಿಸುವಲ್ಲಿ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ. ಕೆರೆಯ ಹೂಳು ತೆಗೆದು ನೀರು ಸಂಗ್ರಹವಾಗುವಂತೆ ಮಾಡಿದರೆ ಈ ಕೆರೆ ಅನೇಕ ಜೀವ ಸಂಕುಲದ ತಾಣವಾಗುತ್ತದೆ’ ಎನ್ನುತ್ತಾರೆ ಪಾಂಚಜನ್ಯ ಫೌಂಡೇಷನ್‌ನ ಮುರಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT