ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ಯತೆ ಹಿಂಪಡೆದಿದ್ದ ಆದೇಶ ರದ್ದುಪಡಿಸಿದ ಹೈಕೋರ್ಟ್

Last Updated 3 ಅಕ್ಟೋಬರ್ 2020, 18:42 IST
ಅಕ್ಷರ ಗಾತ್ರ

ಬೆಂಗಳೂರು: ಭದ್ರಾವತಿ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಮಾನ್ಯತೆ ಹಿಂಪಡೆದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

2018ರ ನವೆಂಬರ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟು, 24 ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಪೂರ್ವಾನುಮತಿ ಪಡೆಯದೇ ವಿದ್ಯಾರ್ಥಿಗಳನ್ನು ಕರೆದೊಯ್ದಿರುವ ಶಿಕ್ಷಣ ಸಂಸ್ಥೆ ಬೇಜವಾಬ್ದಾರಿ ವಹಿಸಿದೆ ಎಂದು ಆರೋಪಿಸಿ ಮಾನ್ಯತೆಯನ್ನು ವಾಪಸ್ ಪಡೆಯಲಾಗಿತ್ತು.

‘ಮಾನ್ಯತೆ ಹಿಂತೆಗೆದುಕೊಳ್ಳುವ ಆದೇಶದಲ್ಲಿ ಸಕಾರಣಗಳನ್ನು ಶಿಕ್ಷಣ ಇಲಾಖೆ ನೀಡಿಲ್ಲ. ದುರಾದೃಷ್ಟಕರ ಅಪಘಾತ ನಡೆದಿರುವುದನ್ನು ಶಿಕ್ಷಣ ಕಾಯ್ದೆಯ ಸೆಕ್ಷನ್ 39ರ ವ್ಯಾಪ್ತಿಗೆ ತರಲು ಆಗುವುದಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

‘ಅಪಘಾತದಲ್ಲಿ ಗಾಯಗಳಾದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಚಿಕಿತ್ಸೆಗಾಗಿ ₹22 ಲಕ್ಷವನ್ನು ಸಂಸ್ಥೆ ಖರ್ಚು ಮಾಡಿದೆ. ಈ ಸಂಬಂಧ ಎಲ್ಲಾ ದಾಖಲೆಗಳನ್ನು ಸಲ್ಲಿಸಿದರೂ ಶಿಕ್ಷಣ ಇಲಾಖೆಯ ಶಿವಮೊಗ್ಗ ಉಪನಿರ್ದೇಶಕರು 2019ರ ಮೇ ನಲ್ಲಿ ಸಂಸ್ಥೆಯ ಮಾನ್ಯತೆ ಹಿಂದಕ್ಕೆ ಪಡೆದಿದ್ದಾರೆ’ ಎಂದು ಸಂಸ್ಥೆಯ ಪರ ವಕೀಲರು ತಿಳಿಸಿದರು.

2011 ಜನವರಿ 27ರಲ್ಲಿ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರಕಾರ, ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮಾತ್ರ ಪ್ರವಾಸಕ್ಕೆ ಬಳಸಬೇಕು. ಅವುಗಳನ್ನು ಪಾಲಿಸುವಲ್ಲಿ ಈ ಸಂಸ್ಥೆ ವಿಫಲವಾಗಿದೆ ಎಂದು ಇಲಾಖೆ ತಿಳಿಸಿತು.

ಈ ಆದೇಶ ರದ್ದುಗೊಳಿಸಿದ ನ್ಯಾಯಮೂರ್ತಿ ಆರ್. ದೇವದಾಸ್, ‘ಸುತ್ತೋಲೆಯನ್ನು ಪಾಲಿಸುವಲ್ಲಿ ಶಿಕ್ಷಣ ಸಂಸ್ಥೆ ವಿಫಲವಾಗಿದ್ದರೂ ಮಾನ್ಯತೆ ಹಿಂಪಡೆಯುವಂತಹ ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಇದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT