ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್.ಟಿ ಪಟ್ಟಿಯಿಂದ ‘ವಾಲ್ಮೀಕಿ’ ಹೊರಗೆ: ಪಿಐಎಲ್ ವಜಾ

Published 26 ಡಿಸೆಂಬರ್ 2023, 15:52 IST
Last Updated 26 ಡಿಸೆಂಬರ್ 2023, 15:52 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಪಂಗಡದಿಂದ (ಎಸ್‌ಟಿ) ನಾಯಕ, ನಾಯ್ಕ್‌, ಬೇಡ, ಬೇಡರ, ವಾಲ್ಮೀಕಿ, ತಳವಾರ ಸಮುದಾಯಗಳನ್ನು ಕೈ ಬಿಡಬೇಕು’ ಎಂದು ಕೋರಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ‘ಡಾ.ಬಿ.ಆರ್. ಅಂಬೇಡ್ಕರ್‌ ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಪರವಾಗಿ ಮಹೇಂದ್ರ ಕುಮಾರ್‌ ಮಿತ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠವು, ‘ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಲು ಬಯಸುವುದಿಲ್ಲ’ ಎಂದು ಅರ್ಜಿ ತಿರಸ್ಕರಿಸಿದೆ.

‘ಯಾವ ಸಮುದಾಯನ್ನು ಪರಿಶಿಷ್ಟ ಜಾತಿ ಅಥವಾ ಪಂಗಡವನ್ನಾಗಿ ಸೇರ್ಪಡೆ ಮಾಡಬೇಕು ಎಂಬುದು ಶಾಸನಸಭೆಯ ನೀತಿಯ ಭಾಗ. ಇದರ ಮೌಲ್ಯಮಾಪನವನ್ನು ನ್ಯಾಯಾಲಯ ಕೈಗೆತ್ತಿಗೊಳ್ಳಲು ಆಗದು. ಪಿಐಎಲ್‌ ವ್ಯಾಪ್ತಿಯು ಸಮುದ್ರದಷ್ಟು ವ್ಯಾಪಕವಾಗಿದೆ ಎಂಬುದು ಎಷ್ಟು ಸತ್ಯವೋ ಹಾಗೆಯೇ ಕಡಲಿಗೂ ಒಂದು ದಂಡೆಯಿದೆ ಎಂಬುದು ಅಷ್ಟೇ ಸತ್ಯ ಎನ್ನುವುದನ್ನು ಮರೆಯಬಾರದು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಅಸಹಾಯಕ ಸಮುದಾಯಗಳನ್ನು ಮೇಲೆತ್ತಲು ಸಾಂವಿಧಾನಿಕ ನಿಬಂಧನೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾಂವಿಧಾನಿಕ (ಪರಿಶಿಷ್ಟ ಪಂಗಡಗಳು) ಆದೇಶ ಕಾಯ್ದೆಯಲ್ಲಿ ಯಾವೆಲ್ಲಾ ಸಮುದಾಯಗಳನ್ನು ಸೇರ್ಪಡೆ ಮಾಡಬೇಕು ಮತ್ತು ಕೈಬಿಡಬೇಕು ಎಂಬುದಕ್ಕೆ ಶಾಸನ ರೂಪಿಸುವುದು ಸಂಸತ್‌ನ ವಿಶೇಷ ಅಧಿಕಾರವಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯಗಳು ಸಂಸತ್‌ ಅಥವಾ ವಿಧಾನ ಮಂಡಲದ ಜೊತೆ ಅಭಿಪ್ರಾಯಗಳ ಪೈಪೋಟಿ ನಡೆಸಲಾಗದು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಎಲ್ಲಿಯವರೆಗೆ ನಾಯಕ, ನಾಯ್ಕ್‌, ಬೇಡ, ಬೇಡರ, ವಾಲ್ಮೀಕಿ ಮತ್ತು ತಳವಾರ ಸಮುದಾಯಗಳು ಶಾಸನಾತ್ಮಕವಾಗಿ ಮುಂದುವರಿಯಲಿವೆಯೋ ಅಲ್ಲಿಯವರೆಗೆ ಆ ಸಮುದಾಯಗಳ ಸದಸ್ಯರು ಸಕ್ಷಮ ಪ್ರಾಧಿಕಾರದಿಂದ ಸಾಮಾಜಿಕ ಸ್ಥಿತಿಗತಿಯ ಪ್ರಮಾಣಪತ್ರ ಪಡೆಯಲು ಅರ್ಹರು. ಇದು ಶಿಕ್ಷಣ, ಉದ್ಯೋಗ, ಚುನಾವಣೆ ಮತ್ತು ಇತ್ಯಾದಿ ಮೀಸಲಾತಿಗೂ ಅನ್ವಯಿಸುತ್ತದೆ. ಇದೇ ಕಾರಣಕ್ಕಾಗಿಯೇ ಅವರು 1989ರ ಕಾಯ್ದೆ ಅಡಿ ದೌರ್ಜನ್ಯದಿಂದ ರಕ್ಷಣೆ ಪಡೆಯಲು ಅರ್ಹರಾಗಿದ್ದಾರೆ’ ಎಂದು ನ್ಯಾಯಪೀಠ ತಿಳಿಸಿದೆ.

ಕೋರಿಕೆ ಏನಿತ್ತು?: ‘ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಅಡಿ ಪರಿಶಿಷ್ಟ ಜಾತಿಗಳ ಸದಸ್ಯರು ನೀಡಿದ ದೂರಿನ ಮೇರೆಗೆ ಪರಿಶಿಷ್ಟ ಪಂಗಡಗಳಿಂದ ಹೊರತಾದ ನಾಯಕ, ನಾಯ್ಕ್‌, ಬೇಡ, ಬೇಡರ, ವಾಲ್ಮೀಕಿ ಮತ್ತು ತಳವಾರ ಸಮುದಾಯಗಳ ವಿರುದ್ಧ ಪ್ರಕರಣ ದಾಖಲಿಸದಂತೆ ನಿರ್ದೇಶಿಸಬೇಕು. ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ನೀಡದಂತೆ, ಅವರಿಗೆ ಶಿಕ್ಷಣ, ಉದ್ಯೋಗ, ಚುನಾವಣೆ ಅಥವಾ ಇತ್ಯಾದಿಗಳಲ್ಲಿ ಮೀಸಲಾತಿ ಸೌಕರ್ಯ ಕಲ್ಪಿಸಬಾರದು. ಭಾರತೀಯ ಮತ್ತು ರಾಜ್ಯ ಚುನಾವಣಾ ಆಯೋಗಗಳು ಈ ಸಮುದಾಯಗಳಿಗೆ ನೀಡಿದ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಸ್ವೀಕರಿಸದಂತೆ ನಿರ್ದೇಶಿಸಬೇಕು, ಅಲ್ಲದೆ, ಎಸ್‌ಸಿ-ಎಸ್‌ಟಿ ದೌರ್ಜನ್ಯ ನಿಷೇಧ ಕಾಯ್ದೆ ಅಡಿ ಇವರು ಪ್ರಕರಣ ದಾಖಲಿಸಲು ಮುಂದಾದರೆ ಅದನ್ನು ತಡೆಯಬೇಕು ಹಾಗೂ ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಸಮುದಾಯಗಳಿಂದ ಹೊರಗಿಡಬೇಕು’ ಎಂದು ಅರ್ಜಿದಾರರು ಕೋರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT