ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕ ಸಮಾಜದ ಕಟ್ಟಡ ಬಳಕೆಗೆ ಹೈಕೋರ್ಟ್‌ ಅನುಮತಿ

Last Updated 20 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ಹಡ್ಸನ್ ವೃತ್ತದ ಬಳಿಯಿರುವ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಸಂಸ್ಥೆಯ ಕಟ್ಟಡದ (ಹಾಪ್ ಕಾಮ್ಸ್ ಎಂದೇ ಹೆಸರುವಾಸಿ) ಉಪಯೋಗಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

‘ಕಬ್ಬನ್ ಉದ್ಯಾನದ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಿಸಲಾಗಿದೆ‘ ಎಂದು ಆರೋಪಿಸಿ ‘ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ’ದ ಅಧ್ಯಕ್ಷ ಎಸ್.ಉಮೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಎಸ್‌.ಎಸ್.ಮಹೇಂದ್ರ, ಈ ಸಂಬಂಧ ಬೆಂಗಳೂರು ನಗರ ಸರ್ವೇ ವಲಯದ ಸಹಾಯಕ ನಿರ್ದೇಶಕರ ಅನುಪಾಲನಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

‘ಹೈಕೋರ್ಟ್ ಕಳೆದ ತಿಂಗಳ 25ರಂದು ನೀಡಿದ್ದ ಆದೇಶದಂತೆ ಇದೇ 4ರಂದು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪಕ್ಷಗಾರರ ಸಮ್ಮುಖದಲ್ಲಿ ಕೃಷಿಕ ಸಮಾಜದ ಕಟ್ಟಡದ ಜಾಗದ ಸರ್ವೇ ನಡೆಸಲಾಗಿದೆ. ಸರ್ವೇ ಅನುಸಾರ ಕೃಷಿಕ ಸಮಾಜದ ಕಟ್ಟಡವು ಕಬ್ಬನ್ ಪಾರ್ಕ್ ಪ್ರದೇಶದ ವ್ಯಾಪ್ತಿಯಿಂದ ಹೊರಗಿದೆ’ ಎಂದು ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಸರ್ವೇ ವರದಿಯನ್ನು ಪರಿಗಣಿಸಿದರೆ ಕಟ್ಟಡ ಉಪಯೋಗಿಸಲು ಕೃಷಿಕ ಸಮಾಜಕ್ಕೆ ಅನುಮತಿ ನೀಡಬಹುದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಈ ಅನುಮತಿ ಅರ್ಜಿಯ ಕುರಿತಂತೆ ಈ ಕೋರ್ಟ್‌ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ‘ ಎಂದೂ ಇದೇ ವೇಳೆ ಸ್ಪಷ್ಪಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT