ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೀಮ್ಸ್‌ ಇನ್ಫ್ರಾ ಕಂಪನಿ ವಿರುದ್ಧ ಕ್ರಮ ರದ್ದು

Last Updated 28 ಮೇ 2021, 22:12 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆ ಅಡಿಯಲ್ಲಿ ಡ್ರೀಮ್ಸ್‌ ಇನ್ಫ್ರಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕೈಗೊಂಡಿದ್ದ ಕ್ರಮವನ್ನು ಹೈಕೋರ್ಟ್‌ ರದ್ದುಪಡಿಸಿದೆ. ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಈ ಕಂಪನಿಯ ಎಲ್ಲ ಸ್ವತ್ತುಗಳನ್ನು ವಶಕ್ಕೆ ಪಡೆದಿರುವುದನ್ನು ಗಮನಿಸಿದ ಪೀಠ, ಈ ಆದೇಶವನ್ನು ಹೊರಡಿಸಿತು.

3,668 ಠೇವಣಿದಾರರಿಗೆ₹386 ಕೋಟಿ ವಾಪಸ್ ಕೊಡಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಕೆಪಿಐಡಿ ಕಾಯ್ದೆಯಡಿ ಪ್ರಾಧಿಕಾರವೊಂದನ್ನು ರಚಿಸಿತ್ತು. ಕಂಪನಿಯಿಂದ ಮನೆಗಳನ್ನು ಖರೀದಿಸಲು ಕಂಪನಿಗೆ ಮುಂಗಡ ಹಣವನ್ನು ಅಷ್ಟೂ ಮಂದಿ ಪಾವತಿಸಿದ್ದರು. ಮನೆಗಳನ್ನು ವಿತರಿಸದ್ದರಿಂದ ಹೂಡಿಕೆದಾರರು ಆತಂಕ ವ್ಯಕ್ತಪಡಿಸಿದ ಕಾರಣ ಈ ಸಮಸ್ಯೆ ಉದ್ಭವಿಸಿತು. ಒಪ್ಪಂದದ ಪ್ರಕಾರ ಮನೆಗಳನ್ನು ವಿತರಿಸಬೇಕು ಎಂದು ಠೇವಣಿದಾರರು ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಿದ್ದರು.

ಕಂಪನಿಯ ಆಸ್ತಿ ಮುಟ್ಟುಗೋಲು ಆದೇಶ ಹೊರಡಿಸಿದ್ದ ಪ್ರಾಧಿಕಾರ, ಸ್ವತ್ತಿನ ಮೌಲ್ಯಮಾಪನ ಮತ್ತು ಠೇವಣಿ ಹೊಣೆಗಾರಿಕೆ ನಿಗದಿ ಮಾಡಲು ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಈ ಕ್ರಮ ಪ್ರಶ್ನಿಸಿ ಕಂಪನಿಯು ಹೈಕೋರ್ಟ್ ಮೆಟ್ಟಿಲೇರಿತ್ತು.

‘ಕಂಪನಿ ದಿವಾಳಿಯಾಗಿದೆ ಎಂದು ಘೋಷಿಸಲು ಕೋರಿ ಮೂವರು ಖರೀದಿದಾರರು ಎನ್‌ಸಿಎಲ್‌ಟಿ ಮೊರೆ ಹೋಗಿದ್ದಾರೆ. ಅಶೋಕ್ ಕೃಪಲಾನಿ ಎಂಬುವರನ್ನು ಮಧ್ಯಂತರ ರೆಸಲ್ಯೂಷನಲ್ ಪ್ರೊಫೆಷನಲ್ (ಐಆರ್‌ಪಿ) ಆಗಿ 2019ರ ಆಗಸ್ಟ್‌ನಲ್ಲಿ ಎನ್‌ಟಿಸಿಎಲ್‌ ನೇಮಿಸಿದೆ. ಕಂಪನಿಗೆ ಸಂಬಂಧಿಸಿದ ಎಲ್ಲ ಸ್ವತ್ತುಗಳನ್ನು ಐಆರ್‌ಪಿ ವಶಕ್ಕೆ ಪಡೆದುಕೊಂಡಿದೆ’ ಎಂದು ಕಂಪನಿ ತಿಳಿಸಿದೆ.

‘ಕೇಂದ್ರ ಸರ್ಕಾರದ ದಿವಾಳಿ ಸಂಹಿತೆ ಕಾಯ್ದೆ ಅಡಿಯಲ್ಲಿ ಎನ್‌ಸಿಎಲ್‌ಟಿ ಸ್ವತ್ತುಗಳನ್ನು ವಶಕ್ಕೆ ಪಡೆದಿರುವ ಕಾರಣ ರಾಜ್ಯದ ಕೆಪಿಐಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT