ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಸಾರ್ವಜನಿಕ ಶೌಚಾಲಯಗಳ ದುರವಸ್ಥೆ: ಹೈಕೋರ್ಟ್‌ ಗರಂ

Published 8 ಆಗಸ್ಟ್ 2023, 22:52 IST
Last Updated 8 ಆಗಸ್ಟ್ 2023, 22:52 IST
ಅಕ್ಷರ ಗಾತ್ರ

ಬೆಂಗಳೂರು: 'ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯ ಹಾಗೂ ರಾಜ್ಯ ಸರ್ಕಾರದ ಮೌನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಅವುಗಳ ಸ್ಥಿತಿಗತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ಹೊಸದಾಗಿ ವಿವರವಾದ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಖಡಕ್‌ ನಿರ್ದೇಶನ ನೀಡಿದೆ.

ಈ ಸಂಬಂಧ ‘ಲೆಟ್ಸ್‌ ಕಿಟ್ ಫೌಂಡೇಷನ್‘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ  ಮಂಗಳವಾರ ವಿಚಾರಣೆ ನಡೆಸಿ, ‘ಪ್ರಕರಣ 2018ರಿಂದ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರ ಈವರೆಗೆ ಈ ವಿಚಾರವಾಗಿ ಒಂದೇ ಒಂದು ಪ್ರಮಾಣಪತ್ರ ಸಲ್ಲಿಸಿಲ್ಲ‘ ಎಂದು ಅಚ್ಚರಿ ವ್ಯಕ್ತಪಡಿಸಿತು.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್; ಶೌಚಾಲಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಸಲ್ಲಿಸಿದ ವರದಿಯಲ್ಲಿದ್ದ ನ್ಯೂನ್ಯತೆಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.

ವರದಿ ಪರಿಶೀಲಿಸಿದ ನ್ಯಾಯಪೀಠವು ಗರಂ ಆಯಿತಲ್ಲದೆ, ಸಾರ್ವಜನಿಕ ಶೌಚಾಲಯಗಳ ಸುಧಾರಣೆಗೆ ಸಾಕಷ್ಟು ಕೆಲಸ ಆಗಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ವರದಿಯಲ್ಲಿ ಆಗಿರುವುದಕ್ಕಿಂತ ಆಗದಿರುವುದೇ ಹೆಚ್ಚಿದೆ‘ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

‘ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಏನೂ ಹೇಳಿಲ್ಲ. ಎಲ್ಲದ್ದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಶೌಚಾಲಯಗಳು ಶುಚಿತ್ವದಿಂದ ಕೂಡಿವೆ ಎಂಬ ಸಿದ್ಧ ಉತ್ತರ ನೀಡಲಾಗಿದೆ. ಒಂದೊಮ್ಮೆ ಒಳ್ಳೆಯ ಕೆಲಸ ಮಾಡಿದ್ದರೆ ಅದನ್ನು ಹೇಳಲು ಬಿಬಿಎಂಪಿಯನ್ನು ತಡೆದವರು ಯಾರು? ಯಾರು ಅಧಿಕಾರಿಗಳ ಕೈ ಕಟ್ಟಿ ಹಾಕಿದ್ದಾರೆ‘ ಎಂದು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತು.

‘ಮೂರು ವಾರಗಳಲ್ಲಿ ಹೊಸದಾಗಿ ವಿವರವಾದ ವರದಿ ಸಲ್ಲಿಸಬೇಕು. ಅದರಲ್ಲಿ ಶೌಚಾಲಯ ನಿರ್ವಹಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳೇನು? ಒಂದೊಮ್ಮೆ ಕ್ರಮಗಳನ್ನು ರೂಪಿಸಿದ್ದರೆ ಅದಕ್ಕೆ ನೀಡಲಾದ ಕಾಲಮಿತಿ ಏನು? ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಬಿಬಿಎಂಪಿ ಬಳಿ ಸಲಹೆಗಳೇನಾದರೂ ಇದ್ದರೆ ಅದನ್ನು ವರದಿಯಲ್ಲಿ ಸೇರಿಸಬೇಕು‘ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT