ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮ ನಿರ್ದೇಶಿತ ಸದಸ್ಯರ ಮತ ಚಲಾವಣೆಗೆ ಹೈಕೋರ್ಟ್ ಅಸ್ತು: ಫಲಿತಾಂಶ ಪ್ರಕಟಣೆಗೆ ತಡೆ

Last Updated 9 ಡಿಸೆಂಬರ್ 2021, 9:38 IST
ಅಕ್ಷರ ಗಾತ್ರ

ಬೆಂಗಳೂರು:ಆನೇಕಲ್‌, ಅತ್ತಿಬೆಲೆ ಮತ್ತು ಮಹದೇವಪುರ ಪುರಸಭೆಗೆ ನಾಮ ನಿರ್ದೇಶನಗೊಂಡಿರುವ 15 ಸದಸ್ಯರು, ಬೆಂಗಳೂರು ನಗರ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಆಯ್ಕೆಯ ಚುನಾವಣೆಯಲ್ಲಿ ಮತದಾನ ಮಾಡಲು ಹೈಕೋರ್ಟ್ ಅವಕಾಶ ನೀಡಿದೆ.

ಈ ಸಂಬಂಧ, '15 ನಾಮ ನಿರ್ದೇಶಿತ ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ನಿರ್ದೇಶಿಸಬೇಕು’ ಎಂದು ಕೋರಿ ಬೆಂಗಳೂರು ನಗರ ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯೂಸುಫ್‌ ಷರೀಫ್‌ (ಕೆಜಿಎಫ್‌ ಬಾಬು) ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

'ಚುನಾವಣೆಗೆ ಯಾವುದೇ ಅಡೆತಡೆ ಬೇಡ'ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, 'ಪ್ರತಿವಾದಿ 15 ಜನ ನಾಮ ನಿರ್ದೇಶಿತ ಸದಸ್ಯರು ತಮ್ಮ ಮತಗಳನ್ನು ಚಲಾಯಿಸಬಹುದು. ಆದರೆ, ಇವರ ಮತದಾನವನ್ನು ಮುಚ್ಚಿದ ಲಕೋಟೆಯಲ್ಲಿ ಹಾಕಿ ಪ್ರತ್ಯೇಕ ಮತಪೆಟ್ಟಿಗೆಯಲ್ಲಿ ಇರಿಸಬೇಕು ಮತ್ತು ಫಲಿತಾಂಶವನ್ನು ಪ್ರಕಟಿಸುವಂತಿಲ್ಲ'ಎಂದು ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, 'ನಾಮ ನಿರ್ದೇಶಿತ ಸದಸ್ಯರಿಗೆ ಪರಿಷತ್‌ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡಿರುವುದು ಮತ್ತು ಮತದಾನದ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆ ಮಾಡಿರುವುದು ಸಂವಿಧಾನ ಬಾಹಿರವಾಗಿದ್ದು ಅವರ ಹೆಸರುಗಳನ್ನು ಮತದಾರರ ಯಾದಿಯಿಂದ ಕೈಬಿಡುವಂತೆ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಬೇಕು' ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ಜಿಲ್ಲಾ ಚುನಾವಣಾಧಿಕಾರಿ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಅರ್ಜಿದಾರರ ಮನವಿಯನ್ನು ಬಲವಾಗಿ ಆಕ್ಷೇಪಿಸಿದರು.

ಬೆಳಗಿನ ಕಲಾಪದಲ್ಲಿ ಸುದೀರ್ಘ ಅವಧಿಯವರೆಗೆ ನಡೆದ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಕಾಯ್ದಿರಿಸಿ ಮಧ್ಯಂತರ ಆದೇಶ ನೀಡಿ ಮುಂದೂಡಿದೆ.

ಆಕ್ಷೇಪಣೆ ಏನು?
ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿರುವುದು ಕಾನೂನು ಬಾಹಿರವಾಗಿದೆ. ಇದು ಜನತಾ ಪ್ರತಿನಿಧಿ ಕಾಯ್ದೆ ಮತ್ತು ಸಂವಿಧಾನದ 243 (ಆರ್‌) (2) (a)(i) ವಿಧಿಗೆ ವಿರುದ್ಧವಾಗಿದೆ. ಆದ್ದರಿಂದ, ನಾಮ ನಿರ್ದೇಶಿತ ಪರಿಷತ್‌ ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ನಿರ್ದೇಶಿಸಬೇಕು ಎಂಬುದು ಅರ್ಜಿದಾರರ ಕೋರಿಕೆ.

ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯುಕ್ತರು, ಬೆಂಗಳೂರು ನಗರ ಜಿಲ್ಲೆಯ ವಿಧಾನ ಪರಿಷತ್ ಚುನಾವಣಾಧಿಕಾರಿಯೂ ಸೇರಿದಂತೆ ಒಟ್ಟು 15 ನಾಮನಿರ್ದೇಶಿತ ಸದಸ್ಯರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ನಾಮ ನಿರ್ದೇಶಿತ ಸದಸ್ಯರು: ಎಂ.ಜನಾರ್ದನ, ಕೆ.ಮಂಜುನಾಥ, ಕೆ.ಸುಧಾ ಜಾಧವ್‌, ಆರ್.ಜಗದೀಶ್‌, ವಿ.ನಿತಿನ್‌, ಕೆ.ಪ್ರಭಾಕರ್‌, ಕೆ.ನಟರಾಜ್‌, ಎಂ.ವೆಂಕಟೇಶ ರೆಡ್ಡಿ, ನರಸಿಂಹ ಸ್ವಾಮಿ, ಎ.ಎಂ.ರಾಜಪ್ಪ, ರಘು, ಪ್ರಕಾಶ್‌, ಬಿ.ಆರ್. ಪ್ರಸನ್ನಕುಮಾರ್, ಬಿ.ಎಂ.ಪ್ರವೀಣ್‌ ಕುಮಾರ್ ಹಾಗೂ ಕೆ.ಎಸ್‌. ಪ್ರದೀಪ್‌. ಅರ್ಜಿದಾರರ ಪರ ಬಿ.ಎನ್.ಸುರೇಶ್ ಬಾಬು ವಕಾಲತ್ತು ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT