ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಮಾರ್ಗಸೂಚಿಗೆ ಹೈಕೋರ್ಟ್‌ ನಿರ್ದೇಶನ

ನಿಮ್ಹಾನ್ಸ್‌ ಆವರಣ, ವಸತಿ ಸಂಕೀರ್ಣದಲ್ಲಿ ಬೀದಿ ನಾಯಿಗಳ ಹಾವಳಿ
Last Updated 23 ಆಗಸ್ಟ್ 2022, 20:21 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ನಿಮ್ಹಾನ್ಸ್‌ (ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ) ಆಸ್ಪತ್ರೆ ಮತ್ತು ಅದರ ವಸತಿ ಸಂಕೀರ್ಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ನಿಮ್ಹಾನ್ಸ್ ಹೈಕೋರ್ಟ್‌ಗೆ ತಿಳಿಸಿವೆ.

‘ನಿಮ್ಹಾನ್ಸ್‌ ಸಂಕೀರ್ಣದಲ್ಲಿನ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು’ ಎಂದು ಕೋರಿಬೀದಿ ನಾಯಿ ಕಡಿತಕ್ಕೆ ತುತ್ತಾಗಿದ್ದ 9 ವರ್ಷದ ಬಾಲಕಿ ಜಿಷ್ಣು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಮತ್ತು ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆ ವಿವರಣೆ ಸಲ್ಲಿಸಿದರು. ‘ನಿಮ್ಹಾನ್ಸ್ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ಕುರಿತು ಈಗಾಗಲೇ ದೂರು ಸ್ವೀಕರಿಸಲಾಗಿದೆ. ಸ್ಥಳಕ್ಕೆ ಖುದ್ದು ಭೇಟಿ ನೀಡಿ ನಾಯಿಗಳನ್ನು ಹಿಡಿಯಲು, ಅವುಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲು ಮತ್ತು ಅವುಗಳ ಸಂತಾನಶಕ್ತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಅಂತೆಯೇ ನಿಮ್ಹಾನ್ಸ್ ನಿರ್ದೇಶಕರು ಇದೇ ವೇಳೆ ಸಲ್ಲಿಸಿದ ಹೇಳಿಕೆಯಲ್ಲಿ, ‘ವಸತಿ ಸಂಕೀರ್ಣದ ಆವರಣದಲ್ಲಿನ ಬೀದಿ ನಾಯಿಗಳ ಮೇಲೆ ನಿಗಾ ವಹಿಸಲಾಗಿದೆ. ಅವುಗಳ ಸಂತಾನಶಕ್ತಿ ನಿಯಂತ್ರಣ ಮತ್ತು ಲಸಿಕೆ ನೀಡುವ ಉಸ್ತುವಾರಿಗೆ 2021ರ ಅಕ್ಟೋಬರ್ 27ರಂದು ಸಮಿತಿ ರಚಿಸಲಾಗಿದೆ.ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಲಾಗಿದೆ.

ಎರಡೂ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಪ್ರಾಣಿಗಳ ಜನನ ನಿಯಂತ್ರಣ ನಿಯಮ–2001ರ ಅನುಸಾರ ರೋಗಗ್ರಸ್ಥ ಅಥವಾ ಕಿವುಡ ಬೀದಿ ನಾಯಿಗಳನ್ನು ಸಾಯುವತನಕ ಐಸೋಲೇಷನ್ ಕೇಂದ್ರಗಳಲ್ಲಿ ಇರಿಸಬೇಕು. ಬೀದಿ ನಾಯಿ ಕಡಿತಕ್ಕೆ ತುತ್ತಾದವರಿಗೆ ಪರಿಹಾರ ನೀಡುವ ಸಂಬಂಧ ಸೂಕ್ತ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು’ ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿ ಅರ್ಜಿ ವಿಲೇವಾರಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT