ಮಂಗಳವಾರ, ನವೆಂಬರ್ 29, 2022
20 °C

ಬಾಗಮನೆ ಒತ್ತುವರಿ ತೆರವು ಪ್ರಕರಣ: ಲೋಕಾಯುಕ್ತರ ನಡೆಗೆ ಹೈಕೋರ್ಟ್ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಗಮನೆ ಟೆಕ್‌ಪಾರ್ಕ್‌ ಬಳಿಯ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೊಂಡ ಕಾರ್ಯಾಚರಣೆ ವಿರುದ್ಧದ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತರ ನಡೆಗೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಂಬಂಧ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್‌)  ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಸಲ್ಲಿಸಿರುವ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್‌.ಬಸವರಾಜ್‌, ‘ಲೋಕಾಯುಕ್ತ ಸರ್ಕಾರಿ ನೌಕರರ ಭ್ರಷ್ಟಾಚಾರದ ಆರೋಪಗಳ ಬಗ್ಗೆ ದಾಖಲಾಗುವ ದೂರುಗಳ ಕುರಿತು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಆಡಳಿತವನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು. ಆದರೆ, ಈಗಿರುವ ಲೋಕಾಯುಕ್ತರು ತಮ್ಮ ಮಿತಿಯನ್ನು ಮೀರಿ,
ಅಸಾಂವಿಧಾನಿಕವಾಗಿ ನಡೆದು
ಕೊಂಡಿದ್ದಾರೆ ಮತ್ತು ಸಾಂವಿಧಾನಿಕ ವಾಗಿ ಸ್ಥಾಪಿತವಾದ ಹೈಕೋರ್ಟ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಿದ್ದಾರೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಬಾಗಮನೆ ಬಿಲ್ಡರ್ ಭಾನುವಾರದಂದು ಲೋಕಾಯುಕ್ತದ ಮೊರೆ ಹೋಗಿದ್ದಾರೆ. ಒತ್ತುವರಿ ತೆರವಿನ ತಡೆಗೆ ಅಂದೇ ಆದೇಶ ನೀಡಲಾಗಿದೆ. ಲೋಕಾಯುಕ್ತದಲ್ಲಿ ಏನಾಗುತ್ತಿದೆ, ಕರ್ನಾಟಕ ಲೋಕಾಯುಕ್ತ ಕಾಯ್ದೆ–1984ರ ಅಡಿಯಲ್ಲಿ ಈ ರೀತಿ ತಡೆ ನೀಡುವ ಅಧಿಕಾರವಿದೆಯೇ’ ಎಂದು ಖಾರವಾಗಿ ಪ್ರಶ್ನಿಸಿತು.

‘ಒತ್ತುವರಿ ತೆರವಿಗೆ ಲೋಕಾಯುಕ್ತ ಕಚೇರಿಯೇ ತಡೆ ನೀಡಬಹುದೇನು, ಹಾಗಿದ್ದರೆ ಜನರು ಕೋರ್ಟ್ ಬದಲಿಗೆ ಲೋಕಾಯುಕ್ತಕ್ಕೆ ಹೋಗಬಹು
ದಲ್ಲವೇ’ ಎಂದು ಕಿಡಿ ಕಾರಿತಲ್ಲದೆ, ‘ವ್ಯಾಪ್ತಿ ಮೀರಿದ ಆದೇಶ ನೀಡಲು ನಾವು ಅವಕಾಶ ನೀಡುವುದಿಲ್ಲ’
ಎಂದು ಸ್ಪಷ್ಟಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನಡೆಸುತ್ತಿರುವ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ.

ಪ್ರತಿವಾದಿಗಳಾದ ಕರ್ನಾಟಕ ಲೋಕಾಯುಕ್ತ, ರಾಜ್ಯ ಸರ್ಕಾರ ಮತ್ತು ಬಾಗಮನೆ ಡೆವಲಪರ್ಸ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು