ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರಸ್ತೆ ಕಾಮಗಾರಿಗಳಲ್ಲಿ ಅಕ್ರಮದ ಆರೋಪ

ಕಾಂಗ್ರೆಸ್‌ನಿಂದ ಲೋಕಾಯುಕ್ತರಿಗೆ ದೂರು
Last Updated 31 ಜುಲೈ 2021, 7:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅತಿಯಾದ ಸಂಚಾರ ದಟ್ಟಣೆಯ 12 ಮಾರ್ಗಗಳಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಹೆಸರಿನಲ್ಲಿ ₹ 1,200 ಕೋಟಿ ವೆಚ್ಚದ ಯೋಜನೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರಿಗೆ ಕಾಂಗ್ರೆಸ್‌ ದೂರು ನೀಡಿದೆ.

ಮಾಜಿ ಮೇಯರ್‌ ಎಂ. ರಾಮಚಂದ್ರಪ್ಪ ಅವರು ಪಕ್ಷದ ಪರವಾಗಿ ಲೋಕಾಯುಕ್ತರಿಗೆ ಶುಕ್ರವಾರ ದೂರು ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿ ಎಂದು ದೂರಿನಲ್ಲಿ ಹೆಸರಿಸಲಾಗಿದೆ.

‘ಮೈಸೂರು ರಸ್ತೆಯಿಂದ ತುಮಕೂರು ರಸ್ತೆ, ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ, ಬಳ್ಳಾರಿ ರಸ್ತೆಯಿಂದ ಕೆ.ಆರ್‌.ಪುರ ರಸ್ತೆ, ಕೆ.ಆರ್‌. ಪುರ ರಸ್ತೆಯಿಂದ ಹೊಸೂರು ರಸ್ತೆಯವರಿಗಿನ ‘ಲಿಂಕ್‌’ ರಸ್ತೆಗಳು, ನಗರದ ಒಳ ಭಾಗದಲ್ಲಿರುವ ರಾಜಾಜಿನಗರ, ಮೇಖ್ರಿ ರಸ್ತೆ, ಮೈಸೂರು ರಸ್ತೆ ಸೇರಿದಂತೆ 190 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಬೃಹತ್‌ ಪ್ರಮಾಣದ ಅಕ್ರಮಕ್ಕೆ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಲಾಗಿದೆ.

190 ಕಿ.ಮೀ. ಉದ್ದದ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿಗಳಿಗೆ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ. ₹ 500 ಕೋಟಿ ರಸ್ತೆ ಅಭಿವೃದ್ಧಿಗೆ ಮತ್ತು ₹ 700 ಕೋಟಿ ನಿರ್ವಹಣೆಗೆ ಮೀಸಲಿಡಲಾಗಿದೆ. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳನ್ನೇ ಮತ್ತೆ ಕೈಗೊಳ್ಳಲು ಹೊರಟಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸದ ಕೋಟ್ಯಂತರ ರೂಪಾಯಿ ಲೂಟಿಗೆ ಅವಕಾಶವಾಗಲಿದೆ ಎಂದು ದೂರಿದ್ದಾರೆ.

ಈಗ ಟೆಂಡರ್‌ ನಡೆಸುತ್ತಿರುವ ಕಾಮಗಾರಿಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿದೆ. ಆದರೂ, ಮತ್ತೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಕಳಪೆ ಕಾಮಗಾರಿ ನಡೆಸಿ ಕಪ್ಪು ಪಟ್ಟಿಯಲ್ಲಿರುವ ಕೆಲವು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಟೆಂಡರ್‌ ದಾಖಲೆಗಳನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ಮುಖಂಡರಾದ ಮನೋಹರ್‌, ಸಲೀಂ ಇದ್ದರು.

ಈ ಕಾರಿಡಾರ್‌ ಕಾಮಗಾರಿಯ ಅಕ್ರಮದ ಬಗ್ಗೆ ’ಪ್ರಜಾವಾಣಿ‘ ಸರಣಿ ವರದಿಗಳನ್ನು ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT