ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ ಡೆನ್ಸಿಟಿ ಕಾರಿಡಾರ್‌: ಚರಂಡಿ, ಫುಟ್‌ಪಾತ್‌ಗಳ ಮರು ಅಭಿವೃದ್ಧಿ

ನಿರ್ವಹಣೆ ಅವಧಿಯಲ್ಲಿರುವ ವೈಟ್‌ಟಾಪಿಂಗ್‌ ರಸ್ತೆಗಳಲ್ಲೇ ಬಿಬಿಎಂಪಿಯಿಂದ ಮತ್ತೆ ಕಾಮಗಾರಿ
Published 11 ಜೂನ್ 2023, 22:10 IST
Last Updated 11 ಜೂನ್ 2023, 22:10 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ಟಾಪಿಂಗ್‌, ಟೆಂಡರ್‌ ಶ್ಯೂರ್ ಯೋಜನೆಯಡಿ ಅಭಿವೃದ್ಧಿಯಾಗಿರುವ ರಸ್ತೆಗಳು, ನಮ್ಮ ಮೆಟ್ರೊ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲೇ ‘ಹೈ ಡೆನ್ಸಿಟಿ ಕಾರಿಡಾರ್’ ಹೆಸರಿನಲ್ಲಿ ಚರಂಡಿ, ಫುಟ್‌ಪಾತ್‌, ಡಾಂಬರಿಗೆ ₹237 ಕೋಟಿ ವೆಚ್ಚ ಮಾಡಲು ಬಿಬಿಎಂಪಿ ಮುಂದಾಗಿದೆ.

ವಿಧಾನಸಭೆ ಚುನಾವಣೆಗೆ ಮುನ್ನ ತರಾತುರಿಯಲ್ಲಿ ಹೈ ಡೆನ್ಸಿಟಿ ಕಾರಿಡಾರ್‌ ಟೆಂಡರ್‌ಗೆ ಅನುಮೋದನೆ ಪಡೆಯಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ– ‘ಚರಂಡಿ, ಫುಟ್‌ಪಾತ್‌ಗಳ ಸುಧಾರಣೆ ಮತ್ತು ಡಾಂಬರು ಹಾಕುವುದು’ ಎಂದು ಹೇಳಲಾಗಿದೆ. ಆದರೆ, ಈಗಾಗಲೇ ಅಭಿವೃದ್ಧಿಯಾಗಿರುವ, ನಿರ್ವಹಣೆಯ ಅವಧಿಯಲ್ಲಿರುವ, ನಮ್ಮ ಮೆಟ್ರೊ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಈ ಕಾಮಗಾರಿ ಮಾಡುವ ವಿವರಣೆ ಇದೆ. ಅಲ್ಲದೆ ಇದೇ ರಸ್ತೆಗಳಲ್ಲಿ ಮೇಲ್ಸೇತುವೆ, ಅಂಡರ್‌ಪಾಸ್‌ಗಳ ಯೋಜನೆಯೂ ಇದೆ. 

ರಸ್ತೆಗಳಲ್ಲಿ ವಾಹನ ದಟ್ಟಣೆ ನಿವಾರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ‘ಹೈ ಡೆನ್ಸಿಟಿ ಕಾರಿಡಾರ್‌‍’ ಹೆಸರಿನಲ್ಲಿ 12 ರಸ್ತೆಗಳನ್ನು ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಆದರೆ, ಟೆಂಡರ್‌ ಕರೆಯುವಾಗ ಮೂರು ರಸ್ತೆಗಳನ್ನು ಕೈಬಿಟ್ಟು 9 ರಸ್ತೆಗಳನ್ನು ಅಂತಿಮಗೊಳಿಸಲಾಯಿತು. ₹226 ಕೋಟಿ ಅಂದಾಜು ಮೊತ್ತವಾಗಿದ್ದರೂ, ಹೆಚ್ಚಿನ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ.

ಬಳ್ಳಾರಿ ರಸ್ತೆ
ಬಳ್ಳಾರಿ ರಸ್ತೆ

ಕೆ.ಆರ್‌. ಪುರದಿಂದ ಗೊರಗುಂಟೆಪಾಳ್ಯ ವರ್ತುಲ ರಸ್ತೆ, ಮೈಸೂರು ರಸ್ತೆಯಲ್ಲಿ ಆಜಾದ್‌ನಗರದಿಂದ ಗಾಳಿ ಆಂಜನೇಯ ದೇವಸ್ಥಾನದವರೆಗೆ, ಹೊಸೂರು ರಸ್ತೆಯಲ್ಲಿ ಸಿಲ್ಕ್ ಬೋರ್ಡ್‌ನಿಂದ ವೆಲ್ಲಾರ ಜಂಕ್ಷನ್‌, ಫೋರಂ ಮಾಲ್‌ ಆಡುಗೋಡಿವರೆಗೆ ವೈಟ್‌ಟಾಪಿಂಗ್‌ ಮಾಡಲಾಗಿದೆ. ಎಲ್ಲೆಲ್ಲಿ ವೈಟ್‌ಟಾಪಿಂಗ್‌ ಆಗಿದೆಯೋ ಅಲ್ಲೆಲ್ಲ ಪ್ರತಿ 30 ಮೀಟರ್‌ಗೆ ಒಂದು ಕ್ರಾಸ್‌ ಡಕ್ಟ್‌ ಹಾಕಲಾಗಿದೆ. ಈಗ ‘ಹೈ ಡೆನ್ಸಿಟಿ ಕಾರಿಡಾರ್‌’ ಯೋಜನೆಯಲ್ಲೂ ಅವೇ ಕಾಮಗಾರಿಯನ್ನು ತೋರಿಸಲಾಗಿದೆ. ಫುಟ್‌ಪಾತ್‌ ನೆಲಹಾಸು ಹಾಗೂ ಚರಂಡಿ ಸೈಟ್‌ವಾಲ್‌ಗಳನ್ನು ಕಿತ್ತು ಮರು ನಿರ್ಮಿಸುವುದಾಗಿ ಕಾಮಗಾರಿ ವಿವರಣೆಯಲ್ಲಿ ತಿಳಿಸಲಾಗಿದೆ.

‘ಈ ಕಾರಿಡಾರ್‌ಗಳಲ್ಲಿನ ಬಹುತೇಕ ರಸ್ತೆಗಳಲ್ಲಿ ಚರಂಡಿ ಮತ್ತು ಪಾದಚಾರಿ ಮಾರ್ಗಗಳನ್ನು ಸುಧಾರಣೆ ಮಾಡುವ ಕಾಮಗಾರಿ ಇದೆ. ವೈಟ್‌ಟಾಪಿಂಗ್‌ ಸೇರಿದಂತೆ ಹಲವು ಯೋಜನೆಗಳಲ್ಲಿ ಈ ರಸ್ತೆಗಳ ಅಭಿವೃದ್ಧಿಯಾಗಿದ್ದು, ಅದರಲ್ಲಿ ಚರಂಡಿ, ಪಾದಚಾರಿ ಮಾರ್ಗವನ್ನೂ ಅಭಿವೃದ್ಧಿ ಮಾಡಲಾಗಿದೆ. ಅವುಗಳು ನಿರ್ವಹಣೆ ಅವಧಿಯಲ್ಲಿವೆ. ಅದನ್ನೇ ಕಿತ್ತು, ಮತ್ತೆ ಅದೇ ಕೆಲಸವನ್ನು ಮಾಡಲಾಗುತ್ತಿದೆ. ಹಿಂದೆ ಕೆಲಸ ಮಾಡಿ, ನಿರ್ವಹಣೆ ಜವಾಬ್ದಾರಿ ಹೊಂದಿರುವ ಗುತ್ತಿಗೆದಾರರಿಂದಲೇ ಮಾಡಿಸಬಹುದು. ಆದರೆ ಅನಗತ್ಯವಾಗಿ ವೆಚ್ಚ ಮಾಡಲಾಗುತ್ತಿದೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳೇ ಹೇಳುತ್ತಾರೆ.

ಹೈ ಡೆನ್ಸಿಟಿ ಕಾರಿಡಾರ್ ಕಾಮಗಾರಿಯ ನೇತೃತ್ವ ವಹಿಸಿಕೊಂಡಿರುವ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಯನ್ನೂ ಹೊಂದಿರುವ ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಅವರು ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

ಓಕಳೀಪುರದಿಂದ ರಾಜಾಜಿನಗರ ಪ್ರವೇಶ ದ್ವಾರದವರೆಗೆ ಇತ್ತೀಚೆಗೆ ಪೂರ್ಣಗೊಂಡಿರುವ ಮೇಲ್ಸೇತುವೆ ರಸ್ತೆ
ಓಕಳೀಪುರದಿಂದ ರಾಜಾಜಿನಗರ ಪ್ರವೇಶ ದ್ವಾರದವರೆಗೆ ಇತ್ತೀಚೆಗೆ ಪೂರ್ಣಗೊಂಡಿರುವ ಮೇಲ್ಸೇತುವೆ ರಸ್ತೆ

27 ದಿನದಲ್ಲೇ ಕಾರ್ಯಾದೇಶ!

ಹೈ ಡೆನ್ಸಿಟಿ ಕಾರಿಡಾರ್‌ಗೆ ಟೆಂಡರ್‌ ಪ್ರಕಟಣೆಯಿಂದ ಕಾರ್ಯಾದೇಶದವರೆಗಿನ ಎಲ್ಲ ಪ್ರಕ್ರಿಯೆಯನ್ನು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ 27 ದಿನಗಳಲ್ಲಿ ಪೂರೈಸಿವೆ. ಮಾರ್ಚ್‌ 1ರಂದು ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲಾಗಿದ್ದು 20ರಂದೇ ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನವನ್ನು ಮುಗಿಸಲಾಗಿದೆ. ಹೆಚ್ಚುವರಿ ಮೊತ್ತಕ್ಕೆ ಬಿಡ್‌ ಮಾಡಿದವರೊಂದಿಗೆ ಸಂಧಾನವನ್ನೂ ನಡೆಸಿ ರಾಜ್ಯ ಸರ್ಕಾರಕ್ಕೆ ಅನುಮೋದನೆಗೆ ಬಿಬಿಎಂಪಿ ಸಲ್ಲಿಸಿದೆ. ಮಾರ್ಚ್‌ 23ರಂದು ಸರ್ಕಾರ ಹೆಚ್ಚುವರಿ ಮೊತ್ತದ ಟೆಂಡರ್‌ಗೆ ಅನುಮೋದನೆಯನ್ನೂ ನೀಡಿದೆ. ನಂತರ ಬಿಬಿಎಂಪಿ ಕಾರ್ಯಾದೇಶವನ್ನೂ ನೀಡಿದೆ. ಆದರೆ ಈವರೆಗೆ ಕೆಲಸ ಆರಂಭವಾಗಿಲ್ಲ. 11 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕೆಂಬ ಷರತ್ತು ಇದೆ. ಈಜಿಪುರ ಮೇಲ್ಸೇತುವೆಗೆ ವಿಳಂಬ ಈಜಿಪುರ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತು ಮೂರು ವರ್ಷಗಳಿಂದ ನಾಲ್ಕನೇ ಬಾರಿ ಟೆಂಡರ್‌ ಕರೆಯಲಾಗಿದ್ದರೂ ಅದನ್ನು ಸರ್ಕಾರದ ಅನುಮೋದನೆಗೆ ಬಿಬಿಎಂಪಿ ಎಂಜಿನಿಯರ್‌ಗಳು ಕಳುಹಿಸಿಲ್ಲ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರಿಗೆ ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ‘ಈಜಿಪುರದ ಟೆಂಡರ್‌ ಇನ್ನೂ ಪರಿಶೀಲನೆಯಲ್ಲಿದೆ’ ಎಂದು ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಹೇಳುತ್ತಾರೆ. ಆದರೆ ಹೈ ಡೆನ್ಸಿಟಿ ಕಾರಿಡಾರ್‌ಗೆ ಮಾತ್ರ ಅತಿತುರ್ತಾಗಿ ಎಲ್ಲ ಪ್ರಕ್ರಿಯೆಯನ್ನೂ ಮುಗಿಸಿದ್ದಾರೆ.

- ಹೆಸರಿಟ್ಟರಷ್ಟೇ ಸಾಕೇ?

‘ಹೈ ಡೆನ್ಸಿಟಿ ಕಾರಿಡಾರ್‌ ಎಂಬುದನ್ನು ವಿದೇಶಗಳಿಂದ ಆಮದು ಮಾಡಿಕೊಂಡಿರುವುದು. ಅದು ಹೇಗಿರುತ್ತದೆ ಎಂತಹ ವ್ಯವಸ್ಥೆ ಇರಬೇಕು ರಸ್ತೆ ಹೇಗಿರಬೇಕು ಎಂಬುದನ್ನೆಲ್ಲ ಅರಿತು ಸಮಗ್ರವಾಗಿ ಅಳವಡಿಸಿಕೊಳ್ಳಬೇಕು. ಹೆಚ್ಚು ವಾಹನಗಳು ಓಡಾಡುವ ರಸ್ತೆಗಳಲ್ಲಿ ತಡೆರಹಿತ ಸಂಚಾರಕ್ಕೆ ಅನುವು ಮಾಡಿಕೊಡುವುದೇ ಈ ವ್ಯವಸ್ಥೆ. ಆದರೆ 2 ಕಿ.ಮೀಗೆ ಒಂದು ಸಿಗ್ನಲ್ ಅಕ್ಕಪಕ್ಕ ವಾಹನ ನಿಲುಗಡೆ ಸೇರಿದಂತೆ ಮೂಲಸೌಕರ್ಯವನ್ನು ನೀಡದೆ ‘ಹೈ ಡೆನ್ಸಿಟಿ’ ಹೆಸರಿನಲ್ಲಿ ಅಭಿವೃದ್ಧಿಯ ಸಬೂಬು ನೀಡುವುದು ಅನಗತ್ಯ ಹಾಗೂ ಅರ್ಥಹೀನ. ಚರಂಡಿ ಹೂಳೆತ್ತಿ ಫುಟ್‌ಪಾತ್‌ ಕಲ್ಲು ತೆಗೆದು ಮತ್ತೆ ಹೊಸ ಕಲ್ಲು ಹಾಕಿದರೆ ಅದರಿಂದ ಏನೂ ಪ್ರಯೋಜನ ಆಗುವುದಿಲ್ಲ. ಬಿಲ್‌ ಮಾಡಿಕೊಳ್ಳಬಹುದು ಅಷ್ಟೇ. ಹೊಸ ಕೆಲಸಕ್ಕಿಂತ ರಸ್ತೆಗಳನ್ನು ನಿರ್ವಹಣೆ ಮಾಡುವುದೇ ಅತಿಮುಖ್ಯ’ ಎಂದು ಸಂಚಾರ ತಜ್ಞ ಶ್ರೀಹರಿ ಅಭಿಪ್ರಾಯಪಟ್ಟರು.

2016ರಲ್ಲೇ ಪ್ರಸ್ತಾಪ!

ನಗರದಲ್ಲಿ 12 ಹೈ ಡೆನ್ಸಿಟಿ ಕಾರಿಡಾರ್‌ಗಳ ನಿರ್ಮಾಣ ಸಂಬಂಧ 2016ರಲ್ಲಿ ಸರ್ಕಾರ ಘೋಷಿಸಿತ್ತು. ಕೆಆರ್‌ಐಡಿಎಲ್‌ಗೆ ಸಾವಿರಕ್ಕೂ ಹೆಚ್ಚು ಕೋಟಿ ವೆಚ್ಚದ ಕಾಮಗಾರಿಯನ್ನು ವಹಿಸಲು ಯೋಜಿಸಲಾಗಿತ್ತು. ತಡೆರಹಿತ ಸಂಚಾರ ರಸ್ತೆಗಳಲ್ಲಿ ಕ್ಯಾಮೆರಾ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳ ಯೋಜನೆ ಇದಾಗಿತ್ತು. ಆದರೆ ಇದೀಗ ತರಾತುರಿಯಲ್ಲಿ ಅನುಮೋದನೆಗೊಂಡಿರುವ ಹೈ ಡೆನ್ಸಿಟಿ ಕಾರಿಡಾರ್‌ ಯೋಜನ ಚರಂಡಿ ಫುಟ್‌ಪಾತ್ ಮರು ಸುಧಾರಣೆ ಹಾಗೂ ಡಾಂಬರೀಕರಣಕ್ಕೇ ಮೀಸಲಾಗಿದೆ.

₹226 ಕೋಟಿ ಸರ್ಕಾರ ನಿಗದಿಪಡಿಸಿದ್ದ ವೆಚ್ಚ

₹237 ಕೋಟಿ ಗುತ್ತಿಗೆಗೆ ನೀಡಿರುವ ಮೊತ್ತ 11 ತಿಂಗಳು ಕಾಮಗಾರಿ ಮುಗಿಯಬೇಕಾದ ಅವಧಿ ಕಾರಿಡಾರ್‌ಗಳು; ವೆಚ್ಚ ಪ್ಯಾಕೇಜ್‌ 1;₹77.55 ಕೋಟಿ ಬಳ್ಳಾರಿ ರಸ್ತೆಯಿಂದ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಹೊರ ವರ್ತುಲ ರಸ್ತೆಯಿಂದ ಗೊರಗುಂಟೆಪಾಳ್ಯ ಜಂಕ್ಷನ್‌ ಮೂಲಕ ಕೆ.ಆರ್‌. ಪುರ ಪ್ಯಾಕೇಜ್‌ 2;₹76.69 ಕೋಟಿ ಹಳೆ ಮದ್ರಾಸ್‌ ರಸ್ತೆ ಕಾರಿಡಾರ್‌– ಟ್ರಿನಿಟಿ ವೃತ್ತ ಹಲಸೂರು ಕೆರೆ ಒಎಂಆರ್‌ ಬೆನ್ನಿಗಾನಹಳ್ಳಿ ಕೆ.ಆರ್‌. ಪುರ ಎನ್‌ಎಚ್‌–648ರ ಮೂಲಕ ಹೂಡಿ ಐಟಿಪಿಎಲ್‌ ಕೆ.ಆರ್‌. ರೈಲುನಿಲ್ದಾಣದಿಂದ ಮೂಲಕ ಮೇಡಿಹಳ್ಳಿ. ಹಳೆ ವಿಮಾನ ರಸ್ತೆ ಕಾರಿಡಾರ್‌– ಎಎಸ್‌ಸಿ ಕೇಂದ್ರದಿಂದ ದೊಮ್ಮಲೂರು ಮಾರತಹಳ್ಳಿ ಕುಂದಲಹಳ್ಳಿ ವರ್ತೂರು ಮೂಲಕ ಕಾಡುಗೋಡಿ ಪ್ಯಾಕೇಜ್‌ 3;₹83.64 ಕೋಟಿ ಹೊಸೂರು ರಸ್ತೆ ಕಾರಿಡಾರ್‌– ವೆಲ್ಲಾರ ಜಂಕ್ಷನ್‌ನಿಂದ ಕೇಂದ್ರ ರೇಷ್ಮೆ ಮಂಡಳಿ ಮೂಲಕ ಆಡುಗೋಡಿ ಫೋರಂ ಮಾಲ್– ಮಡಿವಾಳ ಕನಕಪುರ ರಸ್ತೆ ಕಾರಿಡಾರ್‌– ಕೆ.ಆರ್‌. ರಸ್ತೆಯಿಂದ ಬನಶಂಕರಿ–ಸಾರಕ್ಕಿಯಿಂದ ನೈಸ್‌ ರಸ್ತೆವರೆಗೆ. ಮೈಸೂರು ರಸ್ತೆ ಕಾರಿಡಾರ್– ಹಡ್ಸನ್‌ ವೃತ್ತದಿಂದ ಟೌನ್‌ಹಾನ್‌ ನಾಯಂಡಹಳ್ಳಿ ಜ್ಞಾನಭಾರತಿ ಕೆಂಗೇರಿಯಿಂದ ನೈಸ್‌ ರಸ್ತೆವರೆಗೆ. ಮಾಗಡಿ ರಸ್ತೆ ಕಾರಿಡಾರ್‌– ಹಳೆ ಬಿನ್ನಿಮಿಲ್‌ನಿಂದ ಟೋಲ್‌ಗೇಟ್‌ ಜಂಕ್ಷನ್‌ ಜೈಮುನಿರಾವ್‌ ವೃತ್ತ ಹೌಸಿಂಗ್‌ ಬೋರ್ಡ್‌ ಕಾಮಾಕ್ಷಿಪಾಳ್ಯ ಶ್ರೀಗಂಧದಕಾವಲ್‌ ಸುಂಕದಕಟ್ಟೆ ಅಂಜನಾನಗರದಿಂದ ನೈಸ್‌ ರಸ್ತೆವರೆಗೆ. ತುಮಕೂರು ರಸ್ತೆ ಕಾರಿಡಾರ್‌– ಸಂಗೊಳ್ಳಿರಾಯಣ್ಣ ವೃತ್ತದಿಂದ ಓಕಳಿಪುರಂ ಡಾ.ರಾಜ್‌ಕುಮಾರ್‌ ರಸ್ತೆ ಸೋಪ್‌ ಫ್ಯಾಕ್ಟರ್‌ ಜಂಕ್ಷನ್‌ನಿಂದ ಯಶವಂತರಪುರ ಗೊರಗುಂಟೆಪಾಳ್ಯ ಜಂಕ್ಷನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT