ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬೆಂಗಳೂರು, ಕತ್ತಲ ಜಗತ್ತಿನ ಕರಾಳ ಮುಖ

Last Updated 12 ಸೆಪ್ಟೆಂಬರ್ 2020, 3:43 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವ ವೈವಿಧ್ಯವನ್ನು ತನ್ನ ಒಡಲೊಳಗೆ ಅಡಗಿಸಿಕೊಂಡು ದೂರದವರನ್ನು ಬರಸೆಳೆಯುವ ಚುಂಬಕ ಶಕ್ತಿ ಹೊಂದಿದ ಬೆಂಗಳೂರು ಮೋಡ ಕವಿದಾಗ ತನ್ನ ಸಂಗಾತಿಯನ್ನು ಸರಸಕ್ಕೆ ಕರೆಯಲು ನರ್ತಿಸುವಂತಹ ಗಂಡು ನವಿಲಿನಂತಹ ಸೊಗಸುಗಾರ. ವಾಹನಗಳೇ ಮರಗಟ್ಟಿಹೋಗುವಷ್ಟು ನಿಂತು ನಿಂತು ಸಾಗಬೇಕಾದಾಗಗಿಜಿಗಿಡುವ ವಾಹನಗಳ ಸಂದಣಿ ಇದ್ದರೂ ರಾಜಧಾನಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಇಂತಿಪ್ಪ ಮಹಾನಗರ ರಾತ್ರಿಯಾದಂತೆ ತನ್ನ ಕರಾಳ ಮುಖವನ್ನು ಒಂದೊಂದಾಗಿ ಬಿಚ್ಚಿಡತೊಡಗುತ್ತದೆ. ದುಡ್ಡಿದ್ದವರಿಗೆ ಸ್ವರ್ಗವನ್ನೇ ಧರೆಗಿಳಿಸುವ ಮೈಮಾಟ ಹೊತ್ತ ನಗರ, ದರಿದ್ರರ ಪಾಲಿಗೆ ಆಸರೆಯೂ ಹೌದು. ಹೊಟ್ಟೆಪಾಡಿಗಾಗಿ ಕತ್ತಲನ್ನೇ ಕಾಯುವ ಮಂದಿಗೆ ರೌರವ ನರಕ. ರೋಚಕವೆನ್ನಿಸುವ ಹೊತ್ತಿನೊಳಗೆ ಭಯಾನಕವೆನ್ನಿಸುವ ಮತ್ತೊಂದು ಮುಖವೂ ತೆರೆಮರೆಯಲ್ಲೇ ಅಡಗಿರುವುದು ಇಲ್ಲಿಯ ವೈಚಿತ್ರ್ಯ.

ಮಹಾತ್ಮಗಾಂಧಿ ರಸ್ತೆಗೆ ಅಂಟಿಕೊಂಡಂತೆ ಡಿಕನ್‌ ಸನ್ ರಸ್ತೆ, ಅದರ ಅಂಚಿಗೆ ಮಣಿಪಾಲ ಸೆಂಟರ್ ಕಟ್ಟಡ ಇದೆ. ಡಿಕನ್ ಸನ್‌ ರಸ್ತೆಯುದ್ದಕ್ಕೂ ಸೈನಿಕರ ವಸತಿಗೃಹಗಳು, ಆತಿಥ್ಯ ಗೃಹಗಳು, ರಕ್ಷಣಾ ಇಲಾಖೆಯ ಕಚೇರಿಗಳೇ ಆವರಿಸಿಕೊಂಡಿರುವುದರಿಂದ ಸಂಜೆಯ ಮೇಲೆ ಜನ ಓಡಾಟ ವಿರಳ. ಈ ರಸ್ತೆಯ ಇಕ್ಕೆಲದಲ್ಲೂ ಅರೆಬರೆ ಮೈ ತೋರಿಸುತ್ತಾ, ‘ಗಿರಾಕಿ’ಗಳನ್ನು ಕರೆಯುತ್ತಾ ಇರುವವರು ಅಲ್ಲಲ್ಲಿ ನಿಂತಿರುವುದು ಸಾಮಾನ್ಯ. ಯಾವುದೋ ಕಾರು ನಿಧಾನವಾಗಿ ಬಂದರೆ, ಆಟೋ ತೂಕಡಿಸುತ್ತಾ ಸಾಗಿದರೆ ತಮ್ಮನ್ನೇ ಹುಡುಕಿಕೊಂಡು ಬಂದರೋ ಎಂಬಂತೆ ಅಂದಿನ ಊಟದ ಕಾಸು ಗಿಟ್ಟುತ್ತದೆಯೋ ಎಂಬ ಭರವಸೆಯಲ್ಲಿರಸ್ತೆಗಳಿದು ವಾಹನದಲ್ಲಿದ್ದವರನ್ನು ಮಾತನಾಡಿಸುವುದು ರೂಢಿ. ಒಂದು ರಾತ್ರಿ ಬಿಎಂಟಿಸಿ ಬಸ್‌ಗಾಗಿ ಕಾಯುತ್ತಾ ನಿಂತಿದ್ದಾಗ, ಆಟೋದಲ್ಲಿ ಬಂದ 2–3 ಜನ ಒಬ್ಬಾಕೆಯನ್ನು ಎಳೆದು ಬಡಿದು ಮಾಡುತ್ತಲೇ ಇದ್ದರು. ಜತೆಗಿದ್ದವರು ಆರಂಭದಲ್ಲಿ ರಕ್ಷಣೆಗೆ ನಿಂತರೂ ಆಟೋದಲ್ಲಿ ಬಂದ ದುಷ್ಟರು ಬಲಿಷ್ಠರಾಗಿದ್ದರಿಂದ ಅವರೆಲ್ಲ ಜೀವರಕ್ಷಣೆಗಾಗಿ ಓಡಿದರು. ಸಿಕ್ಕಿಕೊಂಡವರು ಹೇಗೋ ಬಿಡಿಸಿಕೊಂಡು ಪರಾರಿಯಾದರು.

ಮುಂದೊಮ್ಮೆ ಲೈಂಗಿಕ ಕಾರ್ಯಕರ್ತೆಯರು, ಲೈಂಗಿಕ ಅಲ್ಪಸಂಖ್ಯಾತರ (ಎಲ್‌ಜಿಬಿಟಿ– ಲೆಸ್ಬಿಯನ್‌‌, ಗೇ, ಬೈ ಸೆಕ್ಸ್ಯುಯಲ್‌‌, ಟ್ರಾನ್ಸ್‌ಜೆಂಡರ್‌) ಸಮಸ್ಯೆಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿದಾಗ, ಅವರ ದಾರುಣ ಬದುಕಿನ ಕತೆಯೇ ಕಣ್ಣ ಮುಂದೆ ಬಂದು ನಿಂತಿತು. ಆಗಲೇ ಗೊತ್ತಾಗಿದ್ದು; ಹಾಗೆ ರಸ್ತೆ ಪಕ್ಕ ನಿಲ್ಲುವ ಬಹುತೇಕರ ಪೈಕಿ ಎಲ್ಲರೂ ಮಹಿಳೆಯರಲ್ಲ ಎಂಬುದು. ಅವರಲ್ಲಿ ಬಹುತೇಕರು ಲಿಂಗಪರಿವರ್ತನೆ ಮಾಡಿಕೊಂಡವರು( ಅಂದರೆ ಹಿಜರಾ, ಹಿಜಡಾ, ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆ ಮಾಡಿಕೊಂಡವರು). ದೈಹಿಕ–ಮಾನಸಿಕ ಬದಲಾವಣೆ ಕಾರಣಕ್ಕೆ ಈ ರೂಪ ತಾಳಿಕೊಂಡವರು ಸಾಮಾಜಿಕ ಅವಮಾನವನ್ನು ಎದುರಿಸಲಾರದೇ, ಅವರಿಗೆ ಉದ್ಯೋಗವೂ ಸಿಗದೇ ಇರುವುದರಿಂದ ಹೊಟ್ಟೆ ಹೊರೆಯಲು ಲೈಂಗಿಕ ಕಾರ್ಯಕರ್ತರ ಕೆಲಸ ಮಾಡುತ್ತಾರೆ ಎಂಬುದು ಅವರೊಂದಿಗೆ ಮಾತನಾಡಿದಾಗ ಗೊತ್ತಾದ ಸತ್ಯ.

ಹೀಗೆ ಮಾತಿಗೆ ಕುಳಿತಾಗ ಅವರು ಹೇಳಿದ್ದೆಂದರೆ; ಚಿಕ್ಕಂದಿನಿಂದಲೇ ಅಂಗಡಿಯ ಗಲ್ಲದ ಮುಂದೆ ಕುಳಿತು ವ್ಯಾಪಾರ ಮಾಡುವುದನ್ನು ಕಲಿತ ಒಂದು ಸಮುದಾಯದ ಗಿರಾಕಿ ಸಿಕ್ಕಿದರೆ ಮಾತ್ರ ದುಡ್ಡು ಸಿಗುತ್ತದೆ; ಅವರು ಕಾಟವನ್ನೂ ಕೊಡುವುದಿಲ್ಲ. ಉಳಿದವರು ಬರುವುದು ಹಿಂಸೆ ಕೊಡುವುದಕ್ಕೆ. ದುಡ್ಡು ಕೊಡುವುದಾಗಿ ಹೇಳಿ ಕರೆದೊಯ್ದವರು ಸಿಗರೇಟಿನಿಂದ ಸುಡುವುದು, ಅನಗತ್ಯವಾಗಿ ಹಿಂಸೆ ಕೊಡುವ ಕ್ರೂರಿಗಳಾಗಿರುತ್ತಾರೆ. ಅಂತಹವರಿಂದ ಪದೇ ಪದೇ ಹಿಂಸೆ ಅನುಭವಿಸಿ ನಮ್ಮಲ್ಲಿ ಕೆಲವರು ಹೀಗೆ ವಿಚಿತ್ರವಾಗಿ ಆಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ ಎಂದು ಹೇಳುತ್ತಾ ತಮ್ಮ ನೋವು ತೆರೆದಿಟ್ಟರು.

ಲೈಂಗಿಕ ಅಲ್ಪಸಂಖ್ಯಾತರ ಪೈಕಿ ಎಲ್ಲರೂ ಲೈಂಗಿಕ ಕಾರ್ಯಕರ್ತರ ಕೆಲಸವನ್ನೇ ಮಾಡುವುದಿಲ್ಲ; ಅವರಲ್ಲೂ ಭಿಕ್ಷೆ ಬೇಡಿ ತಿನ್ನುವ ಕಸುಬು ಮಾಡಲೇಬೇಕಾದ ಆಚರಣೆಯನ್ನು ಅನುಸರಿಸುವವರೂ ಇದ್ದಾರೆ. ಅವರದ್ದು ಮತ್ತೊಂದು ಕತೆ. ಲೈಂಗಿಕ ಕಾರ್ಯಕರ್ತೆಯರ ಬದುಕಿನ ಬವಣೆಗಳ ಸುತ್ತಲೇ ಇರುವವರದ್ದು ಮಾತ್ರ ಯಮಯಾತನೆಯ ಬದುಕು.

ಬೆಂಗಳೂರಿನಲ್ಲಿ ಒಂದು ಕಾಲಕ್ಕೆ ಲೈವ್ ಬ್ಯಾಂಡ್, ಡ್ಯಾನ್ಸ್ ಬಾರ್‌ಗಳು ಯಥೇಚ್ಛವಾಗಿದ್ದವು. ಅದನ್ನೆಲ್ಲ ನಡೆಸುವವರು ಉತ್ತರ ಭಾರತದ ಅನೇಕ ರಾಜ್ಯಗಳಿಂದ ಯುವತಿಯರನ್ನು ಕರೆತಂದಿದ್ದರು. ದೂರದಲ್ಲಿರುವ ತಮ್ಮ ಕುಟುಂಬವನ್ನು ಸಲುಹಲು, ಅಪ್ಪ–ಅಮ್ಮನ ಕಾಯಿಲೆಗೆ ದುಡ್ಡು ಹೊಂದಿಸಲು, ನಂಬಿಕೊಂಡು ಮದುವೆಯಾದ ಗಂಡ ಕೈಕೊಟ್ಟಿದ್ದರಿಂದಲೋ, ಪ್ರೀತಿಸಿದವನು ಮಾರಿದ್ದರಿಂದಲೋ ಹೀಗೆ ನಾನಾ ಕಾರಣಗಳಿಂದ ಅನೇಕರು ಈ ಉದ್ಯೋಗ ಕಂಡುಕೊಂಡಿದ್ದರು. ಇವರಿಗೆ ಪರ್ಯಾಯ ಉದ್ಯೋಗದ ದಾರಿಯನ್ನೇ ತೋರಿಸದೇ ಅಥವಾ ಊರಿಗೆ ಮುಟ್ಟಿಸುವ ಹೊಣೆಯನ್ನೂ ಹೊರದೇ ಸರ್ಕಾರ ಏಕಾಏಕಿ ಲೈವ್ ಬ್ಯಾಂಡ್‌, ಡ್ಯಾನ್ಸ್ ಬಾರ್‌ಗಳನ್ನು ನಿಷೇಧಿಸಿತು. ಕೆಲವು ಷರತ್ತು(ವಸ್ತ್ರಸಂಹಿತೆ, ಸಿ.ಸಿ ಕ್ಯಾಮರಾ ಕಡ್ಡಾಯ, ಡ್ಯಾನ್ಸ್ ಮಾಡುವಂತಿಲ್ಲ)ಗಳನ್ನು ವಿಧಿಸಿದ ಸರ್ಕಾರ ಕೆಲವು ಕಡೆ ಗ್ರಾಹಕರಿಗೆ ಆಹಾರ ಪೂರೈಸುವುದಕ್ಕೆ( ವೆಯ್ಟರ್‌, ಸಪ್ಲೈಯರ್‌) ಯುವತಿಯರನ್ನು ನೇಮಿಸಲು ಅವಕಾಶ ನೀಡಿತು.

ಹೀಗೆ ಲೈವ್‌ಬ್ಯಾಂಡ್ ಮುಚ್ಚಿದ್ದರಿಂದಾಗಿ ಬೀದಿಗೆ ಬಿದ್ದವರದ್ದು ಒಬ್ಬೊಬ್ಬರದ್ದು ಒಂದೊಂದು ಕತೆ. ಇವರಲ್ಲಿ ಕೆಲವರು ಬೇರೆ ಉದ್ಯೋಗ ಹುಡುಕಿಕೊಂಡರೆ ಅರ್ಧಕ್ಕಿಂತ ಹೆಚ್ಚುಜನ ಲೈಂಗಿಕ ವೃತ್ತಿ ಅಥವಾ ಮಸಾಜ್ ಪಾರ್ಲರ್‌ ಕಡೆ ಮುಖ ಮಾಡಿ ತಿನ್ನುವ ಗಂಜಿಗೆ ದಾರಿ ಮಾಡಿಕೊಂಡರು. ಇಲ್ಲಿ ಅನುಭವಿಸುವ ಕ್ರೌರ್ಯ ಮತ್ತೊಂದು ಬಗೆಯದು ಎನ್ನುತ್ತಾರೆ ಈ ವೃತ್ತಿನಿರತರು.

ಇಲ್ಲಿ ಯಾವುದೂ ಅಧಿಕೃತವಾಗಿ ನಡೆಯುವಂತಿಲ್ಲ; ಆದರೆ ಎಲ್ಲವೂ ಪೊಲೀಸರ ಮರ್ಜಿಯಲ್ಲಿ ಹಾಗೂ ಸ್ಥಳೀಯ ಮಟ್ಟದ ರೌಡಿಗಳು, ಕೆಲವು ಪ್ರಭಾವಿಗಳ ಹಿಡಿತದಲ್ಲೇ ನಡೆಯುತ್ತವೆ. ದುಡಿದ ದುಡ್ಡೆಲ್ಲ ಅವರ ಪಾಲಾದರೆ, ಹಸಿದ ಹೊಟ್ಟೆಯಲ್ಲಿ ಅಷ್ಟೋ ಇಷ್ಟೋ ಕಾಸಿನೊಂದಿಗೆ ಮನೆಗೆ ಸಾಗುವುದು ಬಹುತೇಕರ ಬದುಕಿನ ಕಥೆ–ವ್ಯಥೆ.

ಪೊಲೀಸರ ಸುಪರ್ದಿಯಲ್ಲಿ:ಲೈಂಗಿಕ ಕಾರ್ಯಕರ್ತೆಯರ ಅಧ್ಯಯನ ಮಾಡುವ ಸಲುವಾಗಿ ಬೆಂಗಳೂರಿನಲ್ಲಿದ್ದ ಪಂಜಾಬಿನ ಮಹಿಳೆಯೊಬ್ಬರನ್ನು ಭೇಟಿಯಾದಾಗ ಅವರು ಹೇಳಿದ ಪ್ರಕರಣ ಇಲ್ಲಿದೆ. ‘ಆರ್.ಟಿ. ನಗರದಲ್ಲಿ (ಜಾಗದ ಹೆಸರು ಬದಲಾಯಿಸಲಾಗಿದೆ) ಒಂದು ದೊಡ್ಡ ಮನೆಯಲ್ಲಿ ನಾಲ್ಕೈದು ಕೊಠಡಿಗಳು, ಅತ್ಯಂತ ವೈಭವೋಪೇತ ಸೌಲಭ್ಯಗಳನ್ನಿಟ್ಟುಕೊಂಡು ಮಸಾಜ್ ಪಾರ್ಲರ್ ನಡೆಯುತ್ತಿತ್ತು. ಡ್ಯಾನ್ಸ್ ಬಾರ್ ಕೆಲಸ ಕಳೆದುಕೊಂಡ ಮೇಲೆ ಮಸಾಜ್ ಪಾರ್ಲರ್ ಸೇಫ್ ಎಂಬ ಕಾರಣಕ್ಕೆ ಅಲ್ಲಿ ಸೇರಿಕೊಂಡೆ. ಆಕರ್ಷಕ ಹಾಲ್‌, ಅದ್ದೂರಿ ಸೋಫಾ ನೋಡಿ ಉತ್ತಮದ ಕೆಲಸವೆಂದು ಹೋದೆ. 40–45 ಆಸುಪಾಸಿನ ವಯಸ್ಸಿನಲ್ಲಿದ್ದು, ನೋಡಲು ಸುಂದರ ಮೈಕಟ್ಟುಹೊಂದಿದ್ದ ಅದರ ಒಡತಿ ಅರಳು ಹುರಿದಂತೆ ಮಾತನಾಡಿ ಎಲ್ಲರನ್ನೂ ಮೆಚ್ಚಿಸುತ್ತಿದ್ದರು. ಬಂದವರು, ಇಲ್ಲಿ ಪೊಲೀಸ್ ದಾಳಿ ಆಗುವುದಿಲ್ಲವಲ್ಲ? ಎಂದು ಕೇಳಿದರೆ, ದೊಡ್ಡ ಪೊಲೀಸ್ ಅಧಿಕಾರಿಗಳೇ ಬರುತ್ತಾರೆ. ಪೊಲೀಸ್ ಕಮಿಷನರ್ ನನಗೆ ಅತ್ಯಂತ ಆಪ್ತರು ಎಂದು ಹೇಳುತ್ತಿದ್ದರು. ಬೇರೆ ರಾಜ್ಯದಿಂದ ವಿಮಾನದಲ್ಲಿ ಬಂದು ಸ್ಟಾರ್ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಲು ಹೋಗುತ್ತಿದ್ದ ಉದ್ಯಮಪತಿಗಳು, ಪ್ರಭಾವಿವ್ಯಕ್ತಿಗಳೇ ನಮ್ಮ ಗ್ರಾಹಕರಾಗಿದ್ದರು.ಇದ್ದಕ್ಕಿದ್ದಂತೆ ಕಮಿಷನರ್ ಬದಲಾಗಿ, ಅವರಿಗೆ ವಿರೋಧಿಯಾದವರು ಆ ಹುದ್ದೆಗೆ ಬಂದರು. ಹಗಲು ಹೊತ್ತಿನಲ್ಲೇ ದಾಳಿ ಆಯಿತು. ನಮ್ಮನ್ನೆಲ್ಲ ಜೀಪ್‌ನಲ್ಲಿ ಎತ್ತಾಕಿಕೊಂಡು ಹೋದರು. . .ಕಾಡುಗಳ್ಳರನ್ನೆಲ್ಲ ಹೊಡೆದು ಮೆರೆದಿದ್ದ ಅತ್ಯಂತ ಖಡಕ್ ಅಧಿಕಾರಿ ಎಂದು ಹೆಸರಿದ್ದ ವ್ಯಕ್ತಿಯೊಬ್ಬರ ಕೃಪಾಶೀರ್ವಾದಿಂದ ನಡೆಯುತ್ತಿದ್ದ ಮಸಾಜ್‌ ಪಾರ್ಲರ್ ಮುಚ್ಚಿಹೋಯಿತು. ಖಡಕ್ ಅಧಿಕಾರಿಯ ಸಮುದಾಯದವರೇ ಆಗಿರುವ, ಕಾಡುಗಳ್ಳರ ಹೆಡೆಮುರಿ ಕಟ್ಟಿದ್ದ ಇತಿಹಾಸ ಹೊಂದಿದ್ದವರು ಹೊಸದಾಗಿ ಕಮಿಷನರ್‌ ಹುದ್ದೆಗೆ ಬಂದಿದ್ದಕ್ಕೆ ದಾಳಿ ಆಗಿದ್ದಲ್ಲ. ಹಿಂದೆ ಇದ್ದ ಕಮಿಷನರ್‌ಗೆ ಇವರಿಗೆ ಆಗುತ್ತಿರಲಿಲ್ಲ; ಅದಕ್ಕಾಗಿ ಅವರ ಆಪ್ತರ(ಮಸಾಜ್ ಪಾರ್ಲರ್ ನಡೆಸುತ್ತಿದ್ದವರು) ಅಡ್ಡೆಗೆ ಕೈ ಹಾಕಿದರು. ಅಧಿಕಾರಿಗಳ ವೈಯಕ್ತಿಕ ಜಗಳ, ಪ್ರತಿಷ್ಠೆಯಿಂದ ನಾವೆಲ್ಲ ಸಿಕ್ಕಿಬಿದ್ದೆವು‘ ಎಂದು ಹೇಳುವಾಗ ಅವರಲ್ಲಿ ದುಃಖ ಮಡುಗಟ್ಟಿತ್ತು.

ಕ್ರೌರ್ಯದ ಪರಾಕಾಷ್ಠೆ

ಲೈಂಗಿಕ ಕಾರ್ಯಕರ್ತರ ಬದುಕಿನ ಅಧ್ಯಯನ ಹಾಗೂ ಅವರ ಬದುಕಿನ ಮೇಲೆ ಬೆಳಕು ಚೆಲ್ಲುವ ಯೋಜನೆಗಳಲ್ಲಿ ತೊಡಗಿಕೊಂಡಾಗ ಅವರ ಕಷ್ಟದ ದಿನಗಳನ್ನು ಆಲಿಸುವ ಅವಕಾಶ ಒದಗಿತ್ತು.

ಆನೇಕಲ್‌ನವರಾದ ಮಹಿಳೆ ಹೊರಗಿನವರು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಬುರ್ಖಾ(ಮುಸ್ಲಿಂ ಅಲ್ಲದಿದ್ದರೂ) ಹಾಕಿಕೊಂಡು ಓಡಾಡುತ್ತಿದ್ದರು. ಬುರ್ಖಾ ತೆಗೆದಾಗ, ಪಳಪಳ ಹೊಳೆಯುವ ಕಣ್ಣುಗಳ ತೇಜಸ್ಸು, ಮುಟ್ಟಿದರೆ ಕೆಂಪಾಗುವಂತಿದ್ದ ಬಿಳಿ ಬಣ್ಣ, ಕಟ್ಟುಮಸ್ತಾದ ಮೈಕಟ್ಟಿನಿಂದ ಆಕರ್ಷಕವಾಗಿದ್ದರು. ಬಡತನ, ಗಂಡ ಬಿಟ್ಟು ಓಡಿದ್ದರಿಂದಾಗಿ ಮಕ್ಕಳನ್ನು, ಆತನ ಪೋಷಕರನ್ನು ಸಾಕುವ ಹೊಣೆ ಬೆನ್ನಿಗೆ ಬಿದ್ದ ಕಾರಣಕ್ಕೆ ಲೈಂಗಿಕ ವೃತ್ತಿಗೆ ಇಳಿಯಲೇಬೇಕಾದ ಅನಿವಾರ್ಯವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ನಂತರ ಅವರು ಹೇಳಿದ್ದು ಇದು.

‘ಒಮ್ಮೆ ಹೋಟೆಲ್‌ನಲ್ಲಿದ್ದಾಗ ಪೊಲೀಸ್ ದಾಳಿ ಆಯಿತು. ಆಗಿನ್ನೂ ನಾನು ಬುರ್ಖಾ ಹಾಕುತ್ತಿರಲಿಲ್ಲ. ಐದಾರು ವರ್ಷದ ಹಿಂದೆ ಬೆಂಗಳೂರಿನ ಕೆಲವು ಉಪವಿಭಾಗಗಳಲ್ಲಿಎಸಿಪಿಯಾಗಿ ರೌಡಿಗಳ ಪಾಲಿಗೆ ದುಸ್ವಪ್ನವಾಗಿದ್ದ, ಹಿಡಿದ ಕೇಸುಗಳನ್ನು ಬಿಡದೇ ಜಾಲಾಡುತ್ತಿದ್ದ ಅಧಿಕಾರಿ ನನ್ನನ್ನು ಗಮನಿಸಿದರು. ಅವರದ್ದು ‘ಮೇಶ’ ರಾಶಿ ಇರಬೇಕು. ಅವರನ್ನು ನೋಡಿದರೆ ರೌಡಿಗಳು ನಡುಗುತ್ತಿದ್ದರು. ದಾಳಿ ಆಗಿ ಕೆಲವು ದಿನಗಳ ಬಳಿಕ ಪೊಲೀಸರ ಮೂಲಕ ನನ್ನನ್ನು ಸಂಪರ್ಕಿಸಿ ಬರಹೇಳಿದರು. ಮೊದಲ ಮಹಡಿಯಲ್ಲಿ ಅವರ ಚೇಂಬರ್ ಇತ್ತು. ಒಳಗೆ ಹೋದ ಮೇಲೆ, ನನ್ನನ್ನು ಬಿಟ್ಟು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಗಿಲು ಹಾಕಿಕೊಂಡು ಹೋಗಿ, ನಾನು ಕರೆಯುವವರೆಗೂ ಯಾರೂ ಬರಬೇಡಿ; ಯಾರನ್ನೂ ಬಿಡಬೇಡಿ. ವಿಚಾರಣೆ ಮಾಡುವುದಿದೆ ಎಂದರು. ಏನಪ್ಪಾ ವಿಚಾರಣೆ ಎಂದು ನಡುಗುತ್ತಾ ನಿಂತೆ. ಕುಳಿತಲ್ಲಿಂದಲೇ, ಏಯ್ ಬಟ್ಟೆ ಬಿಚ್ಚು ಎಂದರು. ಇದೇನು, ಪೊಲೀಸ್ ಠಾಣೆಯಲ್ಲಿ ಬಟ್ಟೆ ತೆಗೆ ಎಂತಿದ್ದಾರಲ್ಲ ಎಂದು ಬೆಚ್ಚಿದೆ. ಏಯ್‌ ಹೇಳಿದ್ದು ಕೇಳುವುದಿಲ್ವಾ ಬೋ. . . ಎಂದು ಪೊಲೀಸ್ ಭಾಷೆಯಲ್ಲಿ ಹೊರಬಂತು. ಬೆಳ್ಳಂಬೆಳಕಿನಲ್ಲಿ ಹೇಗಪ್ಪಾ ಬಟ್ಟೆ ಬಿಚ್ಚುವುದು ಎಂದು ಹೆದರುತ್ತಲೇ ಅವರನ್ನು ಎದುರಿಸಲಾಗದೇ ಒಂದೊಂದೆ ಬಿಚ್ಚಿದೆ. ಪೂರ್ತಿ ಬಿಚ್ಚುವವರೆಗೂ ’ಆ ರಾಕ್ಷಸ‘ ಬಿಡಲಿಲ್ಲ. ಸರಿ ಏನಾದರಾಗಲಿ ಎಂದು ಕಣ್ಣು ಮುಚ್ಚಿಕೊಂಡು ಅವರು ಹೇಳಿದಂತೆ ಮಾಡಿದೆ. ಪೊಲೀಸ್ ಅಧಿಕಾರಿಗಳ ಬಳಿ ಇರುವ ರೂಲರ್ ರೀತಿಯ ’ದಂಡ‘ದಿಂದ ಮುಟ್ಟಬಾರದ ಕಡೆಯಲ್ಲೆಲ್ಲ ಲಘುವಾಗಿ ಹೊಡೆಯಲಾರಂಭಿಸಿದರು. ಲೈಂಗಿಕ ವೃತ್ತಿಯನ್ನು ಮಾಡುವ ನನಗೆ ದೇಹ ಸುಖವನ್ನು ಪುಕ್ಕಟೆಯಾಗಿ ಕೊಡು ಎಂದರೆ ನಿರುಮ್ಮುಳವಾಗಿ ಕೊಟ್ಟು ಬಿಡುತ್ತಿದ್ದೆ ಅಥವಾ ₹500 ಕೊಟ್ಟರೂ ಅವರ ಗಂಟೇನೂ ಹೋಗುತ್ತಿರಲಿಲ್ಲ. ಆದರೆ, ಅಂದು ಅವರ ನಡೆದುಕೊಂಡ ರೀತಿ ನೆನಪಿಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಅದು ಅಲ್ಲಿಗೆ ಕೊನೆಯಾಗಲಿಲ್ಲ; ಅವರು ಆ ಉಪವಿಭಾಗದಲ್ಲಿ ಇರುವವರೆಗೂ ಪದೇ ಪದೇ ಇಂತಹ ಹಿಂಸೆ ನೀಡುತ್ತಿದ್ದರು’ ಎಂದು ಹೇಳಿದಾಗ ಮಹಿಳೆಯ ಕಣ್ಣಲ್ಲಿ ನೀರು ಇಳಿಯುತ್ತಿತ್ತು. ಎದುರಿಗೆ ಕುಳಿತು, ಈ ಭಯಾನಕ ಘಟನೆ ಕೇಳಿದಾಗ ಕಿವಿಗೆ ಕಾದ ಕಬ್ಬಿಣದ ರಸ ಸುರಿದಂತಾಗಿ, ಮೈಯೆಲ್ಲ ಸಿಟ್ಟು ಕುದಿಯ ತೊಡಗಿತ್ತು.

ಬೆತ್ತಲೆ–ಅರೆಬೆತ್ತಲೆ ಜಗತ್ತು

ಸರ್ಕಾರದ ಲೆಕ್ಕದಂತೆ ಬೆಂಗಳೂರಿನಲ್ಲೇನೂ ಡ್ಯಾನ್ಸ್ ಬಾರ್‌ ನಿಂತೇ ಹೋಯಿತು. ಆದರೆ, ಕತ್ತಲು ಹೊದ್ದು ಬೆಂಗಳೂರು ಮಲಗುತ್ತಿದ್ದಂತೆ ಮತ್ತೊಂದು ಜಗತ್ತು ಬೆತ್ತಲಾಗ ತೊಡಗುತ್ತದೆ.

2019ರ ಏಪ್ರಿಲ್‌ನಲ್ಲಿ ಬ್ರಿಗೇಡ್‌ ರಸ್ತೆಯಲ್ಲಿ ದಾಳಿ ಮಾಡಿದ ಸಿಸಿಬಿ ಪೊಲೀಸರು ಅನೇಕ ಯುವತಿಯರನ್ನು ರಕ್ಷಿಸಿದ್ದರು. ಕೆಲವು ಕಡೆ ದಾಳಿ ನಡೆಸಿ, ಬಚ್ಚಿಟ್ಟಿದ್ದ ಯುವತಿಯರನ್ನು ವಶಕ್ಕೆ ಪಡೆದಿದ್ದರು. ಲಾಕ್ ಡೌನ್‌ಗೆ ಪೂರ್ವದಲ್ಲಿ ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಇಂತಹ ಅನೇಕ ನೃತ್ಯಾವಳಿಗಳನ್ನು ನಡೆಸುವ ಬಾರ್‌ಗಳು ಇದ್ದವು ಎಂಬುದೇನೂ ರಹಸ್ಯವಲ್ಲ. ಅಷ್ಟೇ ಏಕೆ; ಪೊಲೀಸ್ ಕಮಿಷನರ್‌ ಕಚೇರಿಗೆ ಅಂಟಿಕೊಂಡಂತಿರುವ ಕನ್ನಿಂಗ್ ಹ್ಯಾಮ್‌ ರಸ್ತೆಯಲ್ಲೇ ಇಂತಹದೊಂದು ಬಾರ್‌ ನಡೆಯುತ್ತಿರುವುದು ಪೊಲೀಸರಿಗೆ ಗೊತ್ತಿಲ್ಲದ ಸಂಗತಿಯಲ್ಲ.

ಪೊಲೀಸರ ಕೃಪಾಶೀರ್ವಾದ, ರಾಜಕಾರಣಿಗಳ ನೆರವು, ಪ್ರಭಾವಿಗಳ ರಕ್ಷಣೆಯಿಂದ ಇಂತಹ ಕೆಲವು ಕೇಂದ್ರಗಳು ನಿರಂತರವಾಗಿ ನಡೆಯುತ್ತವೆ.

ಇಂದಿರಾನಗರ, ಜೀವನ್ ಭಿಮಾನಗರಗಳಲ್ಲಿ ಇದು ದೊಡ್ಡ ಮಟ್ಟದಲ್ಲಿ ನಡೆಯುತ್ತಿತ್ತು. ಸ್ಥಳೀಯರ ವಿರೋಧ ಹೆಚ್ಚತೊಡಗಿದ ಮೇಲೆ ಇವುಗಳಲ್ಲಿ ಕೆಲವು ಹೊರವಲಯಕ್ಕೆ ಸ್ಥಳಾಂತರಗೊಂಡಿತು.

ಡ್ಯಾನ್ಸ್‌ ಬಾರ್, ಲೈವ್‌ ಬ್ಯಾಂಡ್‌ ಗೆ ಸರ್ಕಾರ ನಿರ್ಬಂಧ ಹಾಕಿತು. ಆದರೆ ಅಹೋರಾತ್ರಿ ನಡೆಯುವ ಬೆತ್ತಲೆ ನೃತ್ಯಕೂಟಗಳದ್ದು ಮತ್ತೊಂದು ಕರಾಳ ಜಗತ್ತು. ಇಂದಿರಾನಗರದ ಹೊರವಲಯ, ಬೆಂಗಳೂರಿನ ಅಂಚಿನಲ್ಲಿರುವ ಕೆಲವು ರೆಸಾರ್ಟ್‌ಗಳಲ್ಲಿ ಲಾಕ್‌ಡೌನ್‌ ಪೂರ್ವದವರೆಗೂ ಬೆತ್ತಲೆ ನೃತ್ಯ ನಡೆಯುತ್ತಲೇ ಇತ್ತು. ಆದರೆ, ಇದು ಅಷ್ಟೆಲ್ಲ ಬಿಡುಬೀಸಾಗಿ, ರಾಜಾರೋಷವಾಗಿ ನಡೆಯುವುದಿಲ್ಲ. ಇಲ್ಲಿಗೆ ಹೋಗಬೇಕಾದರೆ ಅತಿ ನಂಬಿಗಸ್ತ ಮೂಲದಿಂದ ಪಾಸ್ ಪಡೆಯಬೇಕು. ನಿರ್ಬಂಧಿತ ಪ್ರವೇಶ ಇರುತ್ತದೆ. 1–2 ವರ್ಷದಿಂದ ಕಾಯಂ ಅಂತಹ ಬೆತ್ತಲೆಕೂಟದಲ್ಲಿ ಪಾಲ್ಗೊಳ್ಳುವವರು ಹೊಸಬರಿಗೆ ಪ್ರವೇಶ ಕೊಡಿಸಬಹುದು. ಹಾಗೆ ಪ್ರವೇಶಾವಕಾಶ ನೀಡುವ ಮೊದಲು ವ್ಯಕ್ತಿಯ ಪೂರ್ವಾಪರಗಳನ್ನು ತಿಳಿದುಕೊಂಡು ಪಾಸ್ ನೀಡುವ ಪರಿಪಾಟ ಇದೆ. ರಾತ್ರಿ 10ಗಂಟೆಗೆ ಶುರುವಾಗುವ ಬೆತ್ತಲೆ ಅಥವಾ ಅರೆಬೆತ್ತಲೆ ನೃತ್ಯಕೂಟಕ್ಕೆ ಅವರು ಕಳುಹಿಸಿದ ವಾಹನಗಳಲ್ಲೇ ಹೋಗಬೇಕು, ಮೊಬೈಲ್ ಬಳಸುವಂತಿಲ್ಲ ಎಂಬೆಲ್ಲ ನಿರ್ಬಂಧ ಹೇರಲಾಗುತ್ತದೆ ಎನ್ನುತ್ತವೆ ಪೊಲೀಸ್ ಮೂಲಗಳು.

ಹೊಟ್ಟೆ ಪಾಡಿಗೆ, ಹೆಗಲಿಗೆ ಬಿದ್ದ ಕುಟುಂಬ ಹೊರೆಯಲು ನಡೆಸುವ ಲೈಂಗಿಕ ಕಾರ್ಯಕರ್ತೆಯರ ಮೇಲೆ ಹದ್ದು ಕಣ್ಣಿಟ್ಟು ಹೊಡೆದು ಬಡಿಯುವ ಪೊಲೀಸರು, ಇಂತಹ ವೈಭವೋಪೇತ ಬೆತ್ತಲೆ ನೃತ್ಯಕೂಟಗಳತ್ತ ಕಣ್ಣನ್ನೂ ಹಾಯಿಸುವುದಿಲ್ಲ. ಹಗಲು ಥಕಥೈ ಎನ್ನುವ, ರಾತ್ರಿ 10ರವರೆಗೆ ಝಗಮಗಿಸುವ, ಮಧ್ಯರಾತ್ರಿ ಪುಟಿದೆದ್ದು ಕುಣಿಯುವ ಬೆಂಗಳೂರಿನ ಕರಾಳ ಜಗತ್ತಿನ ಮತ್ತೊಂದು ಮುಖ ತಿಳಿಯಬೇಕಾದರೆ ಒಂದು ಜೀವನ ಸಾಲದೇನೋ. . .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT