ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಮೆಗೆ ಅಡ್ಡಿಯಾಗದ ಅಂಧತ್ವ: ಕುರ್ಚಿ ರಿಪೇರಿ ಕಾಯಕದಲ್ಲಿ ತೊಡಗಿರುವ ಅಂಧರ ತಂಡ

30 ವರ್ಷಗಳಿಂದ ಕುರ್ಚಿ ರಿಪೇರಿ ಕಾಯಕದಲ್ಲಿ ತೊಡಗಿರುವ ಅಂಧರ ತಂಡ
Last Updated 9 ಫೆಬ್ರುವರಿ 2022, 20:31 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾವಲಂಬಿಯಾಗಿ ಬದುಕುವ ಛಲಕ್ಕೆ ಅಂಧತ್ವ ಇವರಿಗೆ ಎಂದಿಗೂ ಅಡ್ಡಿಯಾಗಲಿಲ್ಲ. ಸಂಕಷ್ಟಗಳಿಗೆ ಎದೆಗುಂದಲಿಲ್ಲ. ಆತ್ಮಸ್ಥೈರ್ಯದಿಂದ ತಮ್ಮ ಕೈ ಕೌಶಲದಿಂದಲೇ ಬದುಕನ್ನು ಕಟ್ಟಿಕೊಂಡ ಬಗೆ ಮಾದರಿಯೇ ಸರಿ. ಅವರ ದುಡಿಮೆಗೆ ಅಂಧತ್ವ ಎಂದಿಗೂ ಅಡ್ಡಿಯಾಗಲಿಲ್ಲ.

ಕಳೆದ 30 ವರ್ಷಗಳಿಂದ ಕುರ್ಚಿಗಳ ರಿಪೇರಿ ಕಾಯಕದಲ್ಲಿ ತೊಡಗಿರುವ ವಿ. ಲಕ್ಷ್ಮೀನಾರಾಯಣ, ಮಲಿಯಪ್ಪ ಮತ್ತು ಮುಜಾಹೀದ್‌ ಅಲಿ ಅವರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಕುರ್ಚಿಗಳ ಮರು ಹೆಣಿಗೆಯಲ್ಲಿ (ರಿಕೇನಿಂಗ್‌) ಪ‍ರಿಣತಿ ಮತ್ತು ಕೌಶಲ ಪಡೆದಿರುವ ಇವರಿಗೆ, ಸ್ಪರ್ಶ ಜ್ಞಾನವೇ ಬದುಕಿಗೆ ಮಾರ್ಗ ತೋರಿದೆ. ಸ್ಪರ್ಶ ಜ್ಞಾನದಿಂದ ಪ್ಲಾಸ್ಟಿಕ್‌ ವೈರ್‌ಗಳ ಕುರ್ಚಿಗಳನ್ನು ಇವರು ಹೊಲಿದು ಜೋಡಿಸಿಕೊಡುತ್ತಾರೆ. 1989–90ರಲ್ಲಿ ‘ನ್ಯಾಷನಲ್‌ ಅಸೋಸಿಯೇಷನ್ ಫಾರ್‌ ಬ್ಲೈಂಡ್’ನಲ್ಲಿ ಒಂದು ವರ್ಷ ಪಡೆದಿದ್ದ ‘ರಿಕೇನಿಂಗ್‌’ ತರಬೇತಿ ಇವರಿಗೆ ನೆರವಾಗಿದೆ.

ಈಗ ಮೊದಲಿನಂತೆ ವೈರ್‌ ಕುರ್ಚಿಗಳಿಗೆ ಬೇಡಿಕೆ ಕುಸಿದಿದೆ. ಕುಷನ್‌ ಕುರ್ಚಿಗಳಿಂದಾಗಿ ಇವರ ಉದ್ಯೋಗದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿದೆ. ಪ್ರತಿನಿತ್ಯ ಕೆಲಸ ಸಿಗುವುದು ಕಷ್ಟವಾಗುತ್ತಿದೆ ಎನ್ನುವುದು ಇವರ ಅಳಲು.

‘ಬೆಂಗಳೂರಿನಲ್ಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳಲ್ಲಿನ ಬಹುತೇಕ ಕುರ್ಚಿಗಳನ್ನು ನಾವೇ ರಿಪೇರಿ ಮಾಡಿಕೊಟ್ಟಿದ್ದೇವೆ. ವಿಧಾನಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿನ ಕಚೇರಿಗಳಲ್ಲಿನ ಕುರ್ಚಿಗಳನ್ನು ರಿಪೇರಿ ಮಾಡಿದ್ದೇವೆ. ಆದರೆ, ಇತ್ತೀಚೆಗೆ ಕೆಲವೇ ಮಂದಿ ವೈರಿಂಗ್‌ ಕುರ್ಚಿಗೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ, ಈಗ ಕೆಲಸ ಸಿಗದೆ ತೊಂದರೆಯಾಗುತ್ತಿದೆ’ ಎಂದು 60 ವರ್ಷದ ಲಕ್ಷ್ಮೀನಾರಾಯಣ ಅವರು ಹೇಳುತ್ತಾರೆ.

‘ಸರ್ಕಾರ ಸಹ ರಿಪೇರಿ ಕಾರ್ಯವನ್ನು ಗುತ್ತಿಗೆದಾರರಿಗೆ ಕೊಡುತ್ತಿದೆ. ಗುತ್ತಿಗೆದಾರರು ನಮ್ಮನ್ನು ಕರೆದು ಕೆಲಸ ಕೊಡುತ್ತಾರೆ. ಇದರಿಂದ, ನಮಗೆ ಕಡಿಮೆ ಹಣ ದೊರೆಯುತ್ತಿದೆ. ನೇರವಾಗಿ ನಮಗೆ ಕೆಲಸ ನೀಡಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ.

’ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ಸಮಸ್ಯೆ ಇತ್ತು. 8ನೇ ತರಗತಿಯಲ್ಲಿದ್ದಾಗ ಸಂಪೂರ್ಣ ಕುರುಡನಾದೆ. ಎರಡು ಬಾರಿ ಶಸ್ತ್ರಚಿಕಿತ್ಸೆ ಸಹ ನಡೆದಿದೆ. ನರಗಳ ಸಮಸ್ಯೆಯಿಂದ ಬೇರೆ ಕಣ್ಣುಗಳನ್ನು ಸಹ ಅಳವಡಿಸಲು ಸಾಧ್ಯವಿಲ್ಲ ಎನ್ನುವುದನ್ನು ವೈದ್ಯರು ತಿಳಿಸಿದ್ದಾರೆ‘ ಎಂದು ವಿವರಿಸುತ್ತಾರೆ.

‘ಸರ್ಕಾರ ಪಿಂಚಣಿ ರೂಪದಲ್ಲಿ ₹1400 ನೀಡುತ್ತಿದೆ. ಆದರೆ, ಸೂರಿಗಾಗಿ ನಾವು ಅಲೆದಾಡುತ್ತಿದ್ದೇವೆ. ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 30 ಅಂಧರಿಗೆ ಆಶ್ರಯ ಮನೆ ಮಂಜೂರು ಮಾಡುವಂತೆ ರಾಜೀವ ಗಾಂಧಿ ವಸತಿ ನಿಗಮಕ್ಕೆ ಸೂಚಿಸಿದ್ದರು. ಆದರೆ, ಇನ್ನೂ ಕಾರ್ಯಗತವಾಗಿಲ್ಲ. ಈಗಲಾದರೂ ಸರ್ಕಾರ ಸೂರು ಕಲ್ಪಿಸಿದರೆ ನೆರವಾಗುತ್ತದೆ’ ಎಂದು ಅವರು ಹೇಳುತ್ತಾರೆ.

’ರಿಕೇನಿಂಗ್‌ ಕಾರ್ಯಕ್ಕೆ ತಾಳ್ಮೆ ಮತ್ತು ಏಕಾಗ್ರತೆ ಬೇಕು. ಪ್ಲಗ್‌ ಸಹಾಯದಿಂದ ಹೆಣಿಗೆ ಹಾಕುತ್ತೇವೆ. ತಪ್ಪು ಹೆಣಿಗೆ ಹಾಕಿದರೆ ರಿಪೇರಿ ಸರಿಯಾಗುವುದಿಲ್ಲ. ಈ ಕೆಲಸದಿಂದ ನನ್ನ ಕುಟುಂಬಕ್ಕೆ ನೆರವಾಗಿದೆ‌‘ ಎಂದು 55 ವರ್ಷದ ಮಲಿಯಪ್ಪ ಹೇಳುತ್ತಾರೆ. ಮೂಲತಃ ತಮಿಳುನಾಡಿನ ಕೃಷ್ಣಗಿರಿಯ ಮಲಿಯಪ್ಪ (55) ಅವರು ಈಗ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.

‘ಒಂದು ದಿನಕ್ಕೆ 3–4 ಕುರ್ಚಿಗಳ ಹೆಣಿಗೆ ಮಾಡುತ್ತಿದ್ದೇವು. ಆದರೆ, ಈಗ ವಯಸ್ಸಾಗುತ್ತಿರುವುದರಿಂದ ಕೆಲಸವನ್ನು ವೇಗದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಶೇಕಡ 50ರಷ್ಟು ಕೆಲಸ ಕಡಿಮೆಯಾಗಿದೆ. ಪ್ರತಿ ಕುರ್ಚಿ ರಿಪೇರಿಗೆ ₹350 ನೀಡಲಾಗುತ್ತದೆ. ಇದರಲ್ಲಿ ಸಾಮಗ್ರಿಗಳಿಗೆ ₹80ರಿಂದ 100 ಖರ್ಚಾಗುತ್ತದೆ’ ಎಂದು ಮುಜಾಹೀದ್‌ ಅಲಿ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT