ಶುಕ್ರವಾರ, ನವೆಂಬರ್ 15, 2019
22 °C
ದೊಡ್ಡಬಿದರಕಲ್ಲು ಕೆರೆ ಬಳಿಕ ಹೊಸಕೆರೆಹಳ್ಳಿಯ ಸರದಿ l ರಾತ್ರಿ 11.30ರ ವೇಳೆಗೆ ಒಡೆದ ಕೋಡಿ l 50 ಮನೆಗಳಿಗೆ ನುಗ್ಗಿದ ನೀರು

ಕೆರೆ ಕೋಡಿ ಒಡೆದು ಪುಷ್ಪಗಿರಿ ಬಡಾವಣೆ ಜಲಾವೃತ

Published:
Updated:
Prajavani

ಬೆಂಗಳೂರು: ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹೊಸಕೆರೆಹಳ್ಳಿಯ ಕೆರೆಯ ಕೋಡಿ ಒಡೆದು, ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿತು.

ಕಳೆದ ತಿಂಗಳು ದೊಡ್ಡಬಿದರ ಕಲ್ಲು ಕೆರೆಯ ಕೋಡಿ ಹರಿದು ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಅದರ ಬೆನ್ನಲ್ಲೇ, ಹೊಸಕೆರೆಹಳ್ಳಿ ಕೆರೆಯ ಕೋಡಿ ಒಡೆದಿದೆ.

ಕೆರೆಯ ಒಂದು ಭಾಗದಲ್ಲಿ ಕೊಳಚೆ ನೀರು ಹೊರಹಾಕಲು ಕೆಲ ದಿನಗಳ ಹಿಂದೆ ತೂತು ಮಾಡಲಾಗಿತ್ತು. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ 59 ಎಕರೆ ವಿಸ್ತೀರ್ಣದ ಕೆರೆಯಲ್ಲಿ ನೀರು ತುಂಬಿ, ರಾತ್ರಿ 11.30ರ ವೇಳೆ ಸಣ್ಣದಾಗಿ ಕೋಡಿ ಒಡೆದಿತ್ತು. 2.30ರ ವೇಳೆಗೆ ನೀರಿನ ಒತ್ತಡಕ್ಕೆ ಕೋಡಿ ಇನ್ನಷ್ಟು ಒಡೆಯಿತು. ಪರಿಣಾಮ ಪುಷ್ಪಗಿರಿ ಬಡಾವಣೆಯ 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿತು. ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಇಡೀ ರಾತ್ರಿ ಜಾಗರಣೆ ಮಾಡಬೇಕಾಯಿತು. 

ಕೆರೆಯ ಕೋಡಿಯ ಮಣ್ಣು ಹೊಸಕೆರೆಹಳ್ಳಿ–ನೈಸ್‌ ರಸ್ತೆಯ ಕೆಳಸೇತುವೆಯಲ್ಲಿ ರಾಶಿ ಬಿದ್ದ ಪರಿಣಾಮ ಭಾನುವಾರ ಹೊಸಕೆರೆಹಳ್ಳಿ ಹಾಗೂ ರಾಜರಾಜೇಶ್ವರಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತು.

ಕೆರೆಯ ಕೋಡಿಯಿಂದ ಹರಿಯುತ್ತಿದ್ದ ನೀರನ್ನು ತಡೆಯಲು ಬಿಬಿಎಂಪಿ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಕೋಡಿಯನ್ನು ಮುಚ್ಚಲು ಎರಡು ಜೆಸಿಬಿ, ಹಿಟಾಚಿ ಇಡೀ ದಿನ ಕಾರ್ಯನಿರ್ವಹಿಸಿದವು. ಅಂತಿಮವಾಗಿ ಕಲ್ಲು, ಮಣ್ಣನ್ನು ಹಾಕುವ ಮೂಲಕ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲಾಯತು. ಇಷ್ಟಾಗಿಯೂ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಲ್ಲಿದ್ದ ಆತಂಕ ದೂರವಾಗಿಲ್ಲ.

ಕೆರೆಯಲ್ಲಿ ಬಿಡಿಎ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕೊಳಚೆ ನೀರು ಹೊರಹಾಕಲು ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ. ‘ಗುತ್ತಿಗೆದಾರರು ನಿಧಾನಗತಿಯಲ್ಲಿ ಈ ಕಾಮಗಾರಿ ಮಾಡುತ್ತಿದ್ದಾರೆ. ಅವರು ಮಾಡಿದ ಲೋಪದಿಂದಲೇ ಕೆರೆಯ ಮಣ್ಣು ಕುಸಿದು, ಈ ಅವಘಡ ನಡೆದಿದೆ’ ಎಂದು ಸ್ಥಳೀಯರು ಆರೋಪಿಸಿದರು.

ನೈಸ್‌ ರಸ್ತೆಗಾಗಿ ಕೆರೆ ಮೀಸಲು ಪ್ರದೇಶವನ್ನು ಬಳಸಿಕೊಂಡಿದ್ದು ಸಹ ಈ ಸಮಸ್ಯೆಗೆ ಕಾರಣ ಎಂದು ದೂರಿದರು.

ಸ್ಥಳಕ್ಕೆ ಸಚಿವ ಆರ್. ಅಶೋಕ, ಬಿಬಿಎಂಪಿ ಮೇಯರ್ ಎಂ.ಗೌತಮ್ ಕುಮಾರ್, ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಉಪಮೇಯರ್ ಸಿ.ಆರ್‌. ರಾಮ ಮೋಹನ್ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಡಿಸಿಪಿ ರೋಹಿಣಿ ಕಟೋಚ್ ಸೇರಿದಂತೆ ಹಲವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

‘ಕೆರೆಯ ನೀರು ವಾಸನೆ ಬರುತ್ತಿದೆ ಎಂಬ ಕಾರಣಕ್ಕೆ ಕೊಳಚೆ ನೀರು ಹೊರ ಹೋಗಲು ಕೋಡಿಗೆ ತೂತು ಮಾಡಲಾಗಿತ್ತು. ನೀರಿನ ರಭಸಕ್ಕೆ ಕೋಡಿ ಒಡೆದು, ನೀರು ಮನೆಗಳಿಗೆ ನುಗ್ಗಿತು. ರಾತ್ರಿಯಿಡಿ ಆತಂಕದಲ್ಲೇ ಕಳೆದೆವು. ಇದೇ ಮೊದಲ ಬಾರಿಗೆ ಕೆರೆಯ ಕೋಡಿ ಒಡೆದಿದೆ. ಮನೆಯ ವಸ್ತುಗಳಿಗೆ ಹಾನಿಯಾಗಿದೆ’ ಎಂದು ಸ್ಥಳೀಯ ನಿವಾಸಿ ಸುರೇಶ್ ತಿಳಿಸಿದರು. 

ತಾತ್ಕಾಲಿಕ ಕ್ರಮಕ್ಕೆ ಸೂಚನೆ: ಕೆರೆಯ ಕೋಡಿ ಒಡೆದಿರುವುದನ್ನು ಪರಿಶೀಲಿಸಿದ ಬಿಬಿಎಂಪಿ ಆಯುಕ್ತರು, ಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿದರು. ಬಡಾವಣೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರಸ್ತೆಗಳ ಕೆಸರನ್ನು ಕೂಡಲೇ ಸ್ವಚ್ಛಗೊಳಿಸುವಂತೆ ಸೂಚಿಸಿದರು. 

ಬಿಡಿಎ ಮತ್ತು ಜಲಮಂಡಳಿಯ ಅಧಿಕಾರಿಗಳು ತಾತ್ಕಾಲಿಕ ಕ್ರಮ ಕೈಗೊಂಡು, ತಡೆಗೋಡೆ ನಿರ್ಮಿಸುವಂತೆ ಸೂಚಿಸಿದರು.

ಅಧಿಕಾರಿಗಳ ಜತೆ ಇಂದು ಸಭೆ
ಕೆರೆಯ ಕೋಡಿ ಒಡೆದಿರುವುದನ್ನು ಪರಿಶೀಲಿಸಿದ ಮೇಯರ್, ಪುಷ್ಪಗಿರಿ ಬಡಾವಣೆಯಲ್ಲಿ ಸಂಭವಿಸಿದ ಅನಾಹುತದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಸ್ಥಳೀಯರು ‘ನಮ್ಮ ಬಡಾವಣೆಗೆ ಅಭಿವೃದ್ಧಿ ಮರೀಚಿಕೆ ಆಗಿದೆ’ ಎಂದು ದೂರಿದರು. 

‘ಕೆರೆಯ ಕೋಡಿ ಒಡೆದಿರುವ ಬಗ್ಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿ ಅಧಿಕಾರಿಗಳ ಜತೆಗೆ ಸೋಮವಾರ ಸಭೆ ನಡೆಸಲಾಗುವುದು. ನೈಸ್‌ ಸಂಸ್ಥೆಯ ಮೇಲೆ ಆರೋಪ ಕೇಳಿ ಬಂದಿರುವುದರಿಂದ ಅವರನ್ನು ಕೂಡಾ ಸಭೆಗೆ ಆಹ್ವಾನಿಸಲಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು’ ಎಂದು ಮೇಯರ್ ಭರವಸೆ ನೀಡಿದರು. 

ಹೊಳೆಯಾದ ಶಾಲೆಯ ಆವರಣ
ಕೆರೆಯ ಕೋಡಿ ಒಡೆದ ಸ್ಥಳದಿಂದ ಹರಿದ ನೀರು, ಪುಷ್ಪಗಿರಿನಗರದಾದ್ಯಂತ ಆವರಿಸಿಕೊಂಡಿತ್ತು.

ಜವರೇಗೌಡನಗರದ ‘ಶ್ರೀ ಶಾರದಾಂಬಾ ವಿದ್ಯಾನಿಕೇತನ’ ಶಾಲೆಯ ಹಿಂಭಾಗ ಹೊಳೆಯಾಗಿ ಮಾರ್ಪಟ್ಟಿತ್ತು. ಅದೇ ರೀತಿ, ಶಾಲೆಯ ಹಿಂಭಾಗವಿದ್ದ ಗುಡಿಸಲುಗಳಿಗೆ ಕೂಡಾ ನೀರು ನುಗ್ಗಿದ ಪರಿಣಾಮ ಮನೆಯಲ್ಲಿನ ಅಡುಗೆ ಪರಿಕರ ಸೇರಿದಂತೆ ವಿವಿಧ ವಸ್ತುಗಳಿಗೆ ಹಾನಿಯಾಗಿದೆ.

‘ಸಿಮೆಂಟ್‌ ಚೀಲ ಖರೀದಿಸಿದೆ’
‘ರಾತ್ರಿ ಮನೆಯೊಳಗೆ ನೀರು ನುಗ್ಗುತ್ತಿದ್ದಂತೆ ಎಲ್ಲಿಗೆ ಹೋಗಬೇಕೆಂಬುದೇ ತಿಳಿಯಲಿಲ್ಲ. ಕೆರೆಯ ನೀರು ಹರಿದ ಪರಿಣಾಮ ಚರಂಡಿಗಳು ತುಂಬಿ, ಕೊಳಚೆ ನೀರಿನ ನಡುವೆಯೇ ಇಡೀ ರಾತ್ರಿಯನ್ನು ಕಳೆದೆವು. ಮನೆಯ ನೆಲ ಸಂಪೂರ್ಣ ಹಾಳಾಗಿದೆ. ಗೋಡೆಗಳಲ್ಲಿ ಕೂಡಾ ಬಿರುಕು ಕಾಣಿಸಿಕೊಂಡಿದೆ. ₹ 450 ನೀಡಿ, ಸಿಮೆಂಟು ಚೀಲವನ್ನು ಇದೀಗ ತಂದಿರುವೆ’ ಎಂದು ಜವರೇಗೌಡನಗರದ ನಿವಾಸಿ ದುರ್ಗಪ್ಪ ಅಳಲು ತೋಡಿಕೊಂಡರು.

**

ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯುವ ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಬಿಡಿಎ ಆಯುಕ್ತರಿಗೆ ಸೂಚಿಸುವೆ.
– ಆರ್. ಅಶೋಕ, ಕಂದಾಯ ಸಚಿವ

**

ಕೆರೆಯ ನೀರು ಹೊರ ಹಾಕಲು ಸೂಕ್ತ ಕ್ರಮ ಕೈಗೊಳ್ಳದಿರುವುದೇ ಇದಕ್ಕೆ ಕಾರಣ. ಕೆರೆ ಅಭಿವೃದ್ಧಿಪಡಿಸುವ ಇಚ್ಛಾಶಕ್ತಿ ಅಧಿಕಾರಿಗಳಿಗಿಲ್ಲ.
-ರಾಹುಲ್, ಜವರೇಗೌಡನಗರ

ಪ್ರತಿಕ್ರಿಯಿಸಿ (+)