ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ಸ್ಥಳೀಯರ ಆಕ್ರೋಶ- ₹4 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಗ್ಯಾಲರಿ

Last Updated 9 ಮೇ 2022, 19:16 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್‌ನ ಸೆಕ್ಟರ್‌–2ರಲ್ಲಿ ನಿರ್ಮಿಸಲಾಗಿರುವ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿಯ ಚಾವಣಿಯುಭಾನುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದಿದ್ದು, ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಸುಮಾರು ₹4 ಕೋಟಿ ವೆಚ್ಚದಲ್ಲಿ ಗ್ಯಾಲರಿಯ ಚಾವಣಿ ನಿರ್ಮಿಸಲಾಗಿತ್ತು. ಮಾರ್ಚ್‌ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಉದ್ಘಾಟಿಸಿದ್ದರು. ಲೋಕಾರ್ಪಣೆಗೊಂಡ ಎರಡೇ ತಿಂಗಳಲ್ಲಿ ಚಾವಣಿ ಮುರಿದು ಬಿದ್ದಿದೆ. ಮಳೆಯಿಂದಾಗಿ ಬಿಬಿಎಂಪಿ ಕಾಮಗಾರಿಯ ಗುಣಮಟ್ಟದ ಬಣ್ಣ ಬಯಲಾಗಿದೆ’ ಎಂದು ದೂರಿದ್ದಾರೆ.

‘ಗಾಳಿಯ ರಭಸಕ್ಕೆ ಕಬ್ಬಿಣದ ಕಂಬಗಳೇ ಮುರಿದಿವೆ. ಅಲ್ಲಲ್ಲಿ ಸಿಮೆಂಟ್‌ ಕೂಡ ಕಿತ್ತು ಹೋಗಿದೆ. ಗ್ಯಾಲರಿಯಲ್ಲಿ ಹಾಕಲಾಗಿದ್ದ ಟೈಲ್ಸ್‌ಗಳೂ ಮೇಲಕ್ಕೆದ್ದಿವೆ. ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿರುವುದನ್ನು ಇವು ಸಾಕ್ಷೀಕರಿಸುವಂತಿವೆ. ಚಾವಣಿ ಕುಸಿತದಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ’ ಎಂದು ತಿಳಿಸಿದ್ದಾರೆ.

‘ಒಟ್ಟು ₹140 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಚಾವಣಿ ನಿರ್ಮಾಣಕ್ಕಾಗಿಯೇ ₹4 ಕೋಟಿ ವಿನಿಯೋಗಿಸಲಾಗಿದೆ. ಕಾಮಗಾರಿಯಲ್ಲಿ ಶೇ 40ರಷ್ಟು ಕಮಿಷನ್‌ ವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಕಳಪೆ ಕಾಮಗಾರಿಯ ಸಂಪೂರ್ಣ ಹೊಣೆಯನ್ನು ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್‌ ರೆಡ್ಡಿ ಅವರೇ ಹೊರಬೇಕು’ ಎಂದು ಸ್ಥಳೀಯರಾದ ಕವಿತಾ ರೆಡ್ಡಿ ಒತ್ತಾಯಿಸಿದ್ದಾರೆ.

‘ಶಾಸಕರು ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೆ ಕ್ರೀಡಾಂಗಣ ನಿರ್ಮಿಸಿದ್ದು ಏಕೆ. ಕ್ರೀಡಾಂಗಣವನ್ನು ಸುತ್ತು ಹಾಕಿದರೆ ಎಲ್ಲೆಡೆಯೂ ಕಳಪೆ ಕಾಮಗಾರಿಯ ದರ್ಶನವಾಗುತ್ತದೆ. ಬ್ಯಾಸ್ಕೆಟ್‌ಬಾಲ್‌ ಕ್ರೀಡಾಂಗಣ ನಿರ್ಮಾಣಕ್ಕೆ ಬಳಸಿರುವ ಸಲಕರಣೆಗಳೂ ಕಳಪೆ ಗುಣಮಟ್ಟದಿಂದ ಕೂಡಿವೆ’ ಎಂದು ಆರೋಪಿಸಿದ್ದಾರೆ.

ಶಾಸಕ ಎಂ.ಸತೀಶ್‌ ರೆಡ್ಡಿ, ‘ಕ್ರೀಡಾಂಗಣದ ಸುತ್ತಲೂ ಸಾಕಷ್ಟು ಮರಗಳಿವೆ. ಈ ಪೈಕಿ ಒಂದು ಮರ, ಕಬ್ಬಿಣದ ಕಂಬದ ಮೇಲೆ ಉರುಳಿಬಿದ್ದಿದ್ದರಿಂದ ಇಡೀ ಚಾವಣಿಯೇ ಮುರಿದು ಹೋಗಿದೆ. ಇದನ್ನು ಸ್ವಂತ ಹಣದಲ್ಲೇ ದುರಸ್ತಿಗೊಳಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರನಿಗೆ ಸೂಚಿಸಲಾಗಿದೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ತಡೆಯುವ ಸಲುವಾಗಿ ಚಾವಣಿಯ ವಿನ್ಯಾಸ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ’ ಎಂದಿದ್ದಾರೆ.

ಆಮ್‌ ಆದ್ಮಿ ಪಕ್ಷದ ಪ್ರತಿಭಟನೆ ಇಂದು

ಕ್ರೀಡಾಂಗಣದ ಕಳಪೆ ಕಾಮಗಾರಿಯನ್ನು ಖಂಡಿಸಿಆಮ್‌ ಆದ್ಮಿ ಪಕ್ಷವು ಮಂಗಳವಾರ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

‘ಜನರ ತೆರಿಗೆ ಹಣವನ್ನು ಜನಪ್ರತಿನಿಧಿಗಳು ದುರ್ಬಳಕೆ ಮಾಡಿದ್ದಾರೆ. ಕಳಪೆ ಕಾಮಗಾರಿಯನ್ನು ಪ್ರಶ್ನಿಸಲು ಹೋದ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡರು ದಬ್ಬಾಳಿಕೆ ನಡೆಸಿದ್ದಾರೆ. ಶಾಸಕರ ಬೆಂಬಲಿಗರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಹೀಗಾಗಿ ಸ್ಥಳೀಯರ ಸಹಕಾರದೊಂದಿಗೆ, ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT