ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಉಳಿಯಿತು ದುಡಿಮೆ ಹೋಯಿತು

ಕಣ್ಣಿನ ಚಿಕಿತ್ಸೆ ಪಡೆಯಲು ಉಚಿತ ಶಿಬಿರಕ್ಕಾಗಿ ಕಾಯುತ್ತಿದೆ ಕುಟುಂಬ
Last Updated 26 ನವೆಂಬರ್ 2019, 1:56 IST
ಅಕ್ಷರ ಗಾತ್ರ

ಬೆಂಗಳೂರು:‘ಭಾನುವಾರ ಮಧ್ಯಾಹ್ನ 12.30 ಆಗಿರಬಹುದು. ಮಂಚದ ಮೇಲೆ ಮಲಗಿದ್ದೆ. ಕಾಲು ಹಸಿಯಾದಂತೆ ಅನಿಸಿತು. ಪಾದ ಕೆಳಗಿಟ್ಟರೆ ನೀರು ನಿಂತಿತ್ತು. ಎದ್ದು ಓಡೋಣವೆಂದರೆ ನನಗೆ ಎರಡೂ ಕಣ್ಣು ಕಾಣುವುದಿಲ್ಲ. ಏನು ಮಾಡಬೇಕೆಂದು ತಿಳಿಯದೆ ಜೋರಾಗಿ ಕೂಗತೊಡಗಿದೆ. ಸ್ವಲ್ಪ ಸಮಯದ ನಂತರ ಪಕ್ಕದ ಮನೆಯವರು ನನ್ನನ್ನು ಹೊರಗೆ ಎಳೆದುಕೊಂಡು ಬಂದರು...’

ಗುಡಿಸಲಿನಂತಹ ಪುಟ್ಟ ಮನೆಯ ಮುಂದೆ ಕುಳಿತಿದ್ದ ಶಿವಣ್ಣ ತಾವು ಅನುಭವಿಸಿದ ಆತಂಕವನ್ನು ಹೀಗೆ ಹೇಳಿಕೊಂಡರು. ಐದು ಅಡಿ ಎತ್ತರವಿರುವ ಈ ಮನೆಯಲ್ಲಿ ಮೂರು ಅಡಿ ಎತ್ತರದಷ್ಟು ನೀರು ನಿಂತಿತ್ತು. ಸೋಮವಾರ ಮಧ್ಯಾಹ್ನದ ವೇಳೆ ನೀರು ಹೊರ ಹಾಕಲಾಗಿತ್ತಾದರೂ ಮನೆಯೆಲ್ಲ ಕೆಸರಿನ ಗುಂಡಿಯಂತೆ ಕಾಣುತ್ತಿತ್ತು. ಅಂದಿನ ದುಡಿಮೆ ಅಂದಿನ ಖರ್ಚು ಎನ್ನುವಂತಿರುವ ಈ ಕುಟುಂಬ, ಶಿವಣ್ಣನಿಗೆ ಚಿಕಿತ್ಸೆ ಕೊಡಿಸುವಷ್ಟೂ ಆರ್ಥಿಕವಾಗಿ ಸಬಲವಾಗಿಲ್ಲ.

‘ಮೂರು ತಿಂಗಳಿನಿಂದ ಅವರಿಗೆ (ಶಿವಣ್ಣ) ಕಣ್ಣು ಕಾಣುತ್ತಿಲ್ಲ. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವಷ್ಟು ದುಡ್ಡು ನಮ್ಮ ಬಳಿ ಇಲ್ಲ’ ಎಂದು ಶಿವಣ್ಣ ಅವರ ಪತ್ನಿ ಶಾಂತಮ್ಮ ನೋವು ತೋಡಿಕೊಂಡರು.

ವಿಕ್ಟೋರಿಯಾ ಅಥವಾ ಸಂಜಯ್‌ ಗಾಂಧಿ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಿದರೆ ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆಯಲು ಮೂರು ತಿಂಗಳಿನಿಂದ ಕಾಯುತ್ತಿದ್ದೇನೆ ಎಂದೂ ಶಿವಣ್ಣಹೇಳಿಕೊಂಡರು.

‘ಗಂಡನ ಜೊತೆ ಹೂವಿನ ವ್ಯಾಪಾರ ಮಾಡುತ್ತಿದ್ದೆ. ಅವರಿಗೆ ಕಣ್ಣು ಹೋದ ನಂತರ ನಾನೊಬ್ಬಳೇ ಹೂವು ವ್ಯಾಪಾರಕ್ಕೆ ಹೋಗುತ್ತಿದ್ದೆ. ಭಾನುವಾರ ಕೆಲಸಕ್ಕೆ ಹೋಗಿದ್ದಾಗ, ಕೆರೆ ನೀರು ಮನೆಗೆ ನುಗ್ಗಿದೆ. ದಿನಸಿ ಪದಾರ್ಥವೆಲ್ಲ ಹಾಳಾಗಿ ಹೋಗಿದೆ. ಒಂದು ಹೊತ್ತಿನ ಅಡುಗೆ ಮಾಡಿಕೊಳ್ಳುವುದಕ್ಕೂ ಆಗುತ್ತಿಲ್ಲ’ ಎಂದು ಕಣ್ಣೀರಾದರು ಶಾಂತಮ್ಮ.

‘ಮಗ ಗಾರ್ಮೆಂಟ್ಸ್‌ನಲ್ಲಿ ಪ್ಯಾಕಿಂಗ್‌ ಕೆಲಸ ಮಾಡುತ್ತಾನೆ. ತಿಂಗಳಿಗೆ ₹9 ಸಾವಿರ ಬರುತ್ತದೆ. ಬಾಡಿಗೆ, ಮನೆ ಖರ್ಚಿಗೂ ಈ ಹಣ ಸಾಲುವುದಿಲ್ಲ. ಈಗ ಬಟ್ಟೆಗಳಿಗೆಲ್ಲ ಕೆಸರು ಮೆತ್ತಿಕೊಂಡಿದೆ. ಸೀರೆಗಳೆಲ್ಲ ಉಡಲು ಆಗದಷ್ಟು ಹಾಳಾಗಿವೆ’ ಎಂದರು.

ಸಾಯಿಬಾಬಾ ದೇವಸ್ಥಾನ ರಸ್ತೆಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿರುವ ಆಶ್ರಯ ತಾಣದಲ್ಲಿ ಸದ್ಯ ಈ ಕುಟುಂಬ ಉಳಿದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT