ಬೆಂಗಳೂರು: ನಿಗದಿತ ವಿಳಾಸಕ್ಕೆ ತಲುಪಿಸಲು ನೀಡಲಾಗಿದ್ದ 6 ಐ–ಫೋನ್ ಹಾಗೂ ವಾಚ್ ಸಮೇತ ಡಂಜೊ ಕಂಪನಿ ಡೆಲಿವರಿ ಬಾಯ್‌ಗಳಿಬ್ಬರು ಪರಾರಿಯಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಿಜಯನಗರದ ವ್ಯಾಪಾರಿ ಆರಿಫ್ ಎಂಬುವವರು ಕಳ್ಳತನ ಸಂಬಂಧ ದೂರು ನೀಡಿದ್ದಾರೆ. ಡೆಲಿವರಿ ಬಾಯ್‌ಗಳಾದ ಅರುಣ್ ಹಾಗೂ ನಯನ್ ಎಂಬುವವರು ಕೃತ್ಯ ಎಸಗಿರುವುದಾಗಿ ದೂರಿದ್ದಾರೆ. ಅವರಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಇಬ್ಬರೂ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸುಣಕಲ್ ಪೇಟೆಗೆ ಮಾರ್ಚ್ 5ರಂದು ಹೋಗಿದ್ದ ದೂರುದಾರ, ಅಲ್ಲಿಯ ಅಂಗಡಿಯೊಂದರಲ್ಲಿ 6 ಐ–ಫೋನ್‌ಗಳು ಹಾಗೂ ಒಂದು ಆ್ಯಪಲ್ ಕಂಪನಿ ಸ್ಮಾರ್ಟ್ ವಾಚ್ ಖರೀದಿಸಿದ್ದರು. ತಾವು ಬೇರೆ ಕಡೆ ಹೋಗಬೇಕಿದ್ದರಿಂದ, ವಾಚ್ ಹಾಗೂ ಐ–ಫೋನ್‌ಗಳನ್ನು ವಿಜಯನಗರದ ತಮ್ಮ ಅಂಗಡಿಯ ವಿಳಾಸಕ್ಕೆ ಕಳುಹಿಸಲು ಡಂಜೊ ಆ್ಯಪ್ ಬಳಸಿದ್ದರು.’
‘ಸ್ಥಳಕ್ಕೆ ಬಂದಿದ್ದ ಡೆಲಿವರಿ ಬಾಯ್‌ಗಳು, ಐ–ಫೋನ್ ಹಾಗೂ ವಾಚ್ ಪಡೆದುಕೊಂಡು ಹೊರಟಿದ್ದರು. ಹಲವು ಗಂಟೆಗಳಾದರೂ ವಿಳಾಸ ತಲುಪಿರಲಿಲ್ಲ. ಡೆಲಿವರಿ ಬಾಯ್‌ಗಳ ಮೊಬೈಲ್ ನಂಬರ್ ಸಹ ಸ್ವಿಚ್ ಆಫ್ ಆಗಿತ್ತು. ಕಂಪನಿಯವರಲ್ಲಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಳಿಕವೇ ಆರಿಫ್, ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.