ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುವೆ; ಸಂಶಯ ಬೇಡ: ಸಿದ್ದರಾಮಯ್ಯ ಸ್ಪಷ್ಟ ನುಡಿ

Published : 11 ಸೆಪ್ಟೆಂಬರ್ 2024, 14:39 IST
Last Updated : 11 ಸೆಪ್ಟೆಂಬರ್ 2024, 14:39 IST
ಫಾಲೋ ಮಾಡಿ
Comments

ಬೆಂಗಳೂರು: ‘ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅರಣ್ಯ ಇಲಾಖೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಚಿವರು ನೀಡುತ್ತಿರುವ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದರು.

‘ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಚಿವರು ಹೇಳುತ್ತಿದ್ದಾರೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಆದ್ದರಿಂದ ಆ ಕುರಿತ ಚರ್ಚೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಹೇಳಿದರು.

‘ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ 21 ಹಗರಣಗಳು ನಡೆದಿವೆ. ಈ ಎಲ್ಲ ಹಗರಣಗಳ ತನಿಖೆಗೆ ತ್ವರಿತವಾಗಿ ಚಾಲನೆ ನೀಡಲು ಹಾಗೂ ಈ ಬಗ್ಗೆ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಲು ಸಂಪುಟ ಉಪಸಮಿತಿ ರಚಿಸಲಾಗಿದೆ. ಗೃಹ ಸಚಿವ ಜಿ.ಪರಮೇಶ್ವರ ಅವರ ಅಧ್ಯಕ್ಷತೆಯ  ಸಮಿತಿಗೆ ವರದಿ ನೀಡಲು ಒಂದರಿಂದ ಎರಡು ತಿಂಗಳು ಕಾಲಾವಕಾಶ ನೀಡಲಾಗಿದೆ. ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸವನ್ನು ಮಾಡುತ್ತೇವೆ’ ಎಂದರು.

‘ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿಯಲ್ಲಿನ ಹಗರಣ, ಶೇ 40ರಷ್ಟು ಕಮಿಷನ್ ಹಗರಣ, ಕೋವಿಡ್ 19, ಬಿಟ್ ಕಾಯಿನ್ ಹಗರಣಗಳ ತನಿಖೆಗೆ ಮಾತ್ರ ಆಯೋಗಗಳನ್ನು ರಚಿಸಲಾಗಿದೆ. ಅದರಲ್ಲಿ ಕೋವಿಡ್–19 ಅವ್ಯವಹಾರದ ಬಗ್ಗೆ ತನಿಖಾ ಆಯೋಗ ಪ್ರಾಥಮಿಕ ವರದಿಯನ್ನು ನೀಡಿದೆ. ಅಧಿಕಾರಿಗಳ ಪರಿಶೀಲನೆಯ ನಂತರ ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಚರ್ಚೆಗೆ ತೆರೆ: ಮುಖ್ಯಮಂತ್ರಿ ಪಟ್ಟದ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ಹಲವು ದಿನಗಳಿಂದ ಚರ್ಚೆ ಆರಂಭವಾಗಿತ್ತು. ಶಾಸಕ ಆರ್.ವಿ. ದೇಶಪಾಂಡೆ ಅವರು ತಾವೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿದ್ದರಿಂದಾಗಿ, ಅನೇಕ ಸಚಿವರು, ಶಾಸಕರು ತಮ್ಮ ಆಕಾಂಕ್ಷೆಯನ್ನು ಹೊರಹಾಕಿದ್ದರು. ‘ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ; ಸಿದ್ದರಾಮಯ್ಯ ಅವಧಿ ಪೂರೈಸುವುದರಲ್ಲಿ ಅನುಮಾನವೂ ಇಲ್ಲ’ ಎಂದು ಹಲವು ಸಚಿವರು ಹೇಳಿಕೆ ನೀಡಿದ್ದರು. ಇಲ್ಲಿಯವರೆಗೆ ಈ ಬಗ್ಗೆ ಪ್ರತಿಕ್ರಿಯಿಸದೇ ಇದ್ದ ಸಿದ್ದರಾಮಯ್ಯ, ಇದೇ ಮೊದಲ ಬಾರಿಗೆ ‘ನಾನೇ ಮುಂದುವರಿಯುವೆ’ ಎಂದು ಸ್ಪಷ್ಟನೆ ನೀಡಿದ್ದಾರೆ. 

ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದ ಬಗ್ಗೆ ಎಸ್‌ಐಟಿ ಅಧಿಕಾರಿಗಳೂ ತನಿಖೆ ಮಾಡಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ
ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT