ಕೆಂಪಣ್ಣ ಆರೋಪ ಸಾಬೀತುಪಡಿಸಿದರೆ ರಾಜೀನಾಮೆ: ಜಯರಾಂ

ಬೆಂಗಳೂರು: ‘ಬಿಬಿಎಂಪಿಯಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆಯಲ್ಲಿ ಜ್ಯೇಷ್ಠತೆ ಅನುಸರಿಸಲಾಗಿಲ್ಲ ಎಂಬುದನ್ನು ಗುತ್ತಿಗೆದಾರರ ಸಂಘದ ಕೆಂಪಣ್ಣ ಸಾಬೀತು ಮಾಡಿದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಹೇಳಿದರು.
‘ಶೇ 7.5ರಿಂದ 10ರಷ್ಟು ಕಮಿಷನ್ ಪಡೆದು ಬಿಲ್ ಹಣ ಪಾವತಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನು ಅವರು ಸಾಬೀತುಪಡಿಸಬೇಕು. ಇಲ್ಲದಿದ್ದರೆ ಅವರ ಹೇಳಿಕೆ ವಾಪಸ್ ಪಡೆದುಕೊಳ್ಳಬೇಕು, ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜಯರಾಂ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
‘ಶೇ 80ರಷ್ಟು ಮೊತ್ತವನ್ನು ಹಿರಿತನದ ಆಧಾರದ ಮೇಲೆ ಮತ್ತು ಶೇ 20 ರಷ್ಟು ಮೊತ್ತವನ್ನು ವಿವೇಚನಾ ಕೋಟಾದಡಿಯಲ್ಲಿ ಬಿಡುಗಡೆ ಮಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ದೂರಿದ್ದಾರೆ. ಆದರೆ, ಬಿಬಿಎಂಪಿಯಲ್ಲಿ ಶೇ 99ರಷ್ಟು ಮೊತ್ತವನ್ನು ಹಿರಿತನದ ಮೇಲೆ ಬಿಡುಗಡೆ ಮಾಡಲಾಗಿದೆ. ಮಾನವೀಯತೆ ಆಧಾರದಲ್ಲಿ ಕೆಲವು ಗುತ್ತಿಗೆದಾರರಿಗೆ ತಲಾ ಗರಿಷ್ಠ ₹25 ಲಕ್ಷವನ್ನು ನೀಡಲಾಗಿದೆ. ಅನಾರೋಗ್ಯ, ವೈದ್ಯಕೀಯ ವೆಚ್ಚ, ಮದುವೆ ಕಾರಣಗಳಿಗೆ ಮಾತ್ರ ಈ ಹಣ ಬಿಡುಗಡೆ ಮಾಡಲಾಗಿದೆ’ ಎಂದರು.
‘ಸುಮ್ಮನೆ ಆರೋಪ ಮಾಡಿ ಪ್ರಚಾರ ಪಡೆಯುವುದು ಬೇಡ. ಅವರು ಹೇಳಿರುವುದನ್ನು ದಾಖಲೆ ಸಹಿತ ಸಾಬೀತುಪಡಿಸಲಿ. ನಾನು ಬಂದಮೇಲೆ ಬಿಬಿಎಂಪಿಯಲ್ಲಿ ನಿಯಮದಂತೆಯೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಹೇಳಿದರು.
ಆಪ್ಷನಲ್ ವೆಂಡರ್ ಬಿಲ್ ಡಿಸ್‌ಕೌಂಟಿಂಗ್ ಸಿಸ್ಟಮ್’ (ಹುಂಡಿ ವ್ಯವಸ್ಥೆ) ಅಳವಡಿಸಿಕೊಳ್ಳಲು ಟೆಂಡರ್ ಕರೆಯಲಾಗಿದೆ. ಸದ್ಯದಲ್ಲಿಯೇ ಬ್ಯಾಂಕ್ ಅಂತಿಮಗೊಳಿಸಿ, ₹400 ಕೋಟಿ ಪಾವತಿ ಮಾಡಲಾಗುತ್ತದೆ. ಬಿಬಿಎಂಪಿಯ ಎಲ್ಲ ಆರ್ಥಿಕ ವ್ಯವಹಾರವನ್ನು ಐಎಫ್‌ಎಂಎಸ್ ಮೂಲಕವೇ ದಿನನಿತ್ಯ ನಿರ್ವಹಿಸಲಾಗುತ್ತಿದೆ. ಈ ಮೂಲಕ ಯಾರಿಗೆ ಬಿಲ್ ಪಾವತಿ ಮಾಡಲಾಗಿದೆ ಎಂಬ ಮಾಹಿತಿ ಆನ್‌ಲೈನ್‌ನಲ್ಲೇ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.