ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ವಂಚನೆ ಪ್ರಕರಣ: ಫ್ಲ್ಯಾಟ್‌ ಖರೀದಿಸಲಿದ್ದ ಡಿ.ಸಿ!

ಎಫ್‌ಐಆರ್‌ನಲ್ಲಿ ಸಿಬಿಐ ಆರೋಪ
Last Updated 11 ನವೆಂಬರ್ 2019, 22:08 IST
ಅಕ್ಷರ ಗಾತ್ರ

ಬೆಂಗಳೂರು: ‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ಸಮೂಹ ಕಂಪನಿ ಮತ್ತು ಇತರ ಮೂಲಗಳಿಂದ ಪಡೆದಿದ್ದ ಲಂಚದ ಹಣದಲ್ಲಿ ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಬಿ.ಎಂ ವಿಜಯ್‌ ಶಂಕರ್‌ ಮಿಷನ್‌ ರಸ್ತೆಯ ಲೆಗಸಿ ಅಲ್ತಮೀರ್‌ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಹಾಗೂ ನಂದಿ ಬೆಟ್ಟದ ಬಳಿ ಎರಡು ನಿವೇಶನ ಖರೀದಿಸಲು ಉದ್ದೇಶಿಸಿದ್ದರು.

ಫ್ಲ್ಯಾಟ್‌ ಹಾಗೂ ನಿವೇಶನಗಳ ಬೆಲೆ ₹ 4 ಕೋಟಿ ಆಗಲಿದೆ ಎಂದು ಲೆಗಸಿ ಗ್ಲೋಬಲ್‌ ಪ್ರೈವೇಟ್ ಕಂಪನಿ ನಿರ್ದೇಶಕರಾದ ಕೃಷ್ಣಮೂರ್ತಿ ಅವರು ವಿಜಯ ಶಂಕರ್‌ಗೆ ಹೇಳಿದ್ದರು. ಇದಕ್ಕೆ ಒಪ್ಪಿದ್ದ ಅವರು, ಗ್ರಾಮ ಲೆಕ್ಕಿಗ ಮಂಜುನಾಥ್‌ ಅವರನ್ನು ಪರಿಚಯಿಸಿ, ಅವರ ಬಳಿ ಹಣ ಕಳುಹಿಸುವುದಾಗಿ ತಿಳಿಸಿದ್ದರು. ಅಗ್ರಿಮೆಂಟ್‌ಗಾಗಿ ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರಿಯರ ವಿವರಗಳನ್ನು ನೀಡಿದ್ದರು. ಇದು ನಡೆದಿದ್ದು ಜನವರಿ ತಿಂಗಳಲ್ಲಿ. ಆನಂತರ, ಕೃಷ್ಣಮೂರ್ತಿ ಮತ್ತು ಮಂಜುನಾಥ್‌ ದೂರವಾಣಿ ಸಂಪರ್ಕದಲ್ಲಿದ್ದರು.

ವಿಜಯ ಶಂಕರ್‌, ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಹಾಗೂ ಗ್ರಾಮಲೆಕ್ಕಿಗ ಮಂಜುನಾಥ್‌ ವಿರುದ್ಧ ಸಿಬಿಐ ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ಈ ಆರೋಪ ಮಾಡಲಾಗಿದೆ. ಐಪಿಎಸ್‌ ಅಧಿಕಾರಿ ಬಿ.ಆರ್‌. ರವಿಕಾಂತೇಗೌಡರ ನೇತೃತ್ವದ ಎಸ್‌ಐಟಿ ಮುಂದೆ ಕೃಷ್ಣಮೂರ್ತಿ ಮತ್ತು ಅವರ ಕಂಪನಿ ಪ್ರತಿನಿಧಿ ಮಗುದಂ ಅಹಮದ್‌ ಖಾನ್‌ ಅವರು ನೀಡಿರುವ ಹೇಳಿಕೆಯನ್ನೇ ಸಿಬಿಐ ಅಳವಡಿಸಿಕೊಂಡಿದೆ.

2019ರ ಮಾರ್ಚ್‌ನಲ್ಲಿ ಮಂಜುನಾಥ್‌ ಎರಡು ಸಲ ಗಾಲ್ಫ್‌ ಕ್ಲಬ್‌ ಮುಂಭಾಗದಲ್ಲಿ ತಲಾ ₹ 50 ಲಕ್ಷ ಹಣವನ್ನು ಬೇರೆಯವರ ಮೂಲಕ ಕೃಷ್ಣಮೂರ್ತಿ ಅವರಿಗೆ ಹಸ್ತಾಂತರಿಸಿದ್ದರು. ಈ ಸಮಯದಲ್ಲಿ ವಿಜಯ ಶಂಕರ್‌ ವಾಟ್ಸ್‌ಆ್ಯಪ್‌ನಲ್ಲಿ ಕೃಷ್ಣಮೂರ್ತಿ ಅವರೊಂದಿಗೆಮಾತನಾಡಿದ್ದರು. ಬಳಿಕ ಏಪ್ರಿಲ್‌ನಲ್ಲೂ ಮತ್ತೆ ವಾಟ್ಸ್‌ಆ್ಯಪ್‌ನಲ್ಲಿ ವಿಜಯಶಂಕರ್‌ ಮಾತನಾಡಿ, ಮಂಜುನಾಥ್‌ ₹1.5 ಕೋಟಿ ಹಣ ಕೊಡುತ್ತಾರೆ ಎಂದಿದ್ದರು. ಅದರಂತೆ, ಮಂಜುನಾಥ್‌ ಅವರಿಗೆ ಕಂಪನಿ ನಿರ್ದೇಶಕರು ಕರೆ ಮಾಡಿದ್ದರು. ₹ 1.5 ಕೋಟಿ ತಂದು ಕೊಡುವುದಾಗಿ ಅವರು ಹೇಳಿದ್ದರು.‌

ಕೃಷ್ಣಮೂರ್ತಿ, ಮುಗುದಂ ಅಹಮದ್‌ ಖಾನ್‌ ಅವರ ದೂರವಾಣಿ ಸಂಖ್ಯೆಯನ್ನು ಮಂಜುನಾಥ್‌ಗೆ ಕಳುಹಿಸಿದ್ದರು. ಅದೇ ದಿನ ಖಾನ್‌ ತಮ್ಮ ಬಳಿ ಮಂಜುನಾಥ್‌ ಮತ್ತು ಇತರರು ₹ 1.5 ಕೋಟಿ ತಂದುಕೊಟ್ಟಿರುವುದಾಗಿ ಕೃಷ್ಣಮೂರ್ತಿ ಅವರಿಗೆ ಖಚಿತಪಡಿಸಿದ್ದರು. ಅಲ್ಲದೆ, ಡಿ.ಸಿ ಅವರ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿ ಇ– ಸ್ಟ್ಯಾಂಪ್‌ಗಳನ್ನು ಅವರು ಖರೀದಿ ಮಾಡಿ ತಂದಿದ್ದರು. ಆದರೆ, ಪೂರ್ಣ ಹಣ ಪಾವತಿ ಆಗದಿದ್ದರಿಂದ ಆಸ್ತಿ ನೋಂದಣಿ ಆಗಲಿಲ್ಲ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ವಿಜಯಶಂಕರ್‌ ಅವರಿಂದ ಪಡೆದ ಹಣ ಹಾಗೂ ಇ ಸ್ಟ್ಯಾಂಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜುಲೈ 9ರಂದು ಎಸ್‌ಐಟಿ ಕಚೇರಿಗೆ ಬಂದಿದ್ದ ಕೃಷ್ಣಮೂರ್ತಿ ಮೊಬೈಲ್‌ ಸಂಖ್ಯೆ ಹಾಗೂ ವಿಜಯಶಂಕರ್‌ ಅವರು ಕಳುಹಿಸಿದ್ದ ವಾಟ್ಸ್‌ಆ್ಯಪ್‌ ಸಂದೇಶಗಳ ಪ್ರತಿಯನ್ನು ತನಿಖಾಧಿಕಾರಿಗಳಿಗೆ ನೀಡಿದ್ದರು. ತನಿಖೆ ಉದ್ದೇಶಕ್ಕಾಗಿ ಕೃಷ್ಣಮೂರ್ತಿ ಅವರ ಫೋನ್‌ ಮತ್ತು ಮೂರು ಇ– ಸ್ಟ್ಯಾಂಪ್‌ ಪೇಪರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃಷ್ಣಮೂರ್ತಿ ಅವರಿಗೆ ನೀಡಿರುವ ₹ 2.5 ಕೋಟಿ ಹಣದಲ್ಲಿ ₹ 1.5ಕೋಟಿ ಮಾತ್ರ ಐಎಂಎ ಲಂಚದ ಹಣ. ಉಳಿದ ₹ 1ಕೋಟಿ ಬೇರೆಯವರ ಹಣ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಇನ್ನೊಂದು ಅಚ್ಚರಿಯ ಸಂಗತಿ ಎಂದರೆ, ಐಎಂಎ ಪರವಾದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲು ವಿಜಯ ಶಂಕರ್‌ ₹ 2 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ₹ 1.5 ಕೋಟಿಗೆ ವ್ಯವಹಾರ ಕುದುರಿತ್ತು.

ಜಿಲ್ಲಾಧಿಕಾರಿಗಿಂತಲೂ ಅಧಿಕ ಲಂಚ!
ಐಎಂಎ ಹಣಕಾಸು ವ್ಯವಹಾರ ಕುರಿತು ಕೆಪಿಐಡಿ ಕಾಯ್ದೆಯಡಿ ವಿಚಾರಣೆ ನಡೆಸಿದ್ದ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಎಲ್‌.ಸಿ ನಾಗರಾಜ್‌ ಅವರು ಜಿಲ್ಲಾಧಿಕಾರಿಗಿಂತಲೂ ಹೆಚ್ಚು ಲಂಚ ಪಡೆದಿರುವ ಸಂಗತಿ ಬಯಲಿಗೆ ಬಂದಿದೆ.

ನಾಗರಾಜ್‌ ಅವರಿಗೆ 2018ರ ನವೆಂಬರ್‌ ತಿಂಗಳಲ್ಲಿ ₹ 50 ಲಕ್ಷ ಲಂಚ ಪಾವತಿಸಲಾಗಿತ್ತು. ಕಂಪನಿಯ ನಿರ್ದೇಶಕ ನಿಜಾಮುದ್ದೀನ್‌ ಅವರು ಹಣ ಹಸ್ತಾಂತರಿಸಿದ್ದರು. 2019ರ ಮಾರ್ಚ್‌ನಲ್ಲಿ 2 ಸಲ ತಲಾ ₹ 2 ಕೋಟಿ ಹಣವನ್ನು ಅವರ ಚಾಲಕನ ಮೂಲಕ ತಲುಪಿಸಲಾಗಿತ್ತು. ಸದಾಶಿವನಗರದ ಕಾಫಿ ಡೇ ಬಳಿ ಹಣ ನೀಡಲಾಯಿತು. ನಿಜಾಮುದ್ದೀನ್‌ ಹಣ ನೀಡುವಾಗ ಕಂಪನಿಗೆ ಸಂಬಂಧಪಡದ ತಜೀಮುಲ್ಲಾ ಶರೀಫ್‌ ಅವರಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಅಧಿಕಾರಿಗಳಿಬ್ಬರ ಲಂಚ ಪ್ರಕರಣದಲ್ಲಿ ಮಧ್ಯವರ್ತಿ ಆಗಿರುವ ಗ್ರಾಮ ಲೆಕ್ಕಿಗ ಮಂಜುನಾಥ್‌ ಅವರಿಗೂ ₹ 8 ಲಕ್ಷ ಲಂಚ ನೀಡಲಾಗಿದೆ ಎಂದು ಸಿಬಿಐ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT