ಗುರುವಾರ , ಜುಲೈ 7, 2022
23 °C
ಉಪ ಮುಖ್ಯಮಂತ್ರಿ ಹೇಳಿಕೆ

ಸಾರಿಗೆ ಸಂಸ್ಥೆ ಬಸ್‌ಗಳಿಗೆ ಅಪಘಾತ ಮುನ್ಸೂಚನೆ ತಂತ್ರಜ್ಞಾನ ಅಳವಡಿಕೆ: ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಅನಾಹುತದ ಮುನ್ಸೂಚನೆ ನೀಡುವ ಆಧುನಿಕ ತಂತ್ರಜ್ಞಾನವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಅಳವಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

‘ಬಸ್ಸುಗಳ ಎದುರು ಆಕಸ್ಮಿಕವಾಗಿ ಬರುವ ಇತರ ವಾಹನಗಳು ಅಥವಾ ವ್ಯಕ್ತಿಗಳು ಅಡ್ಡ ಬಂದರೆ ಚಾಲಕರಿಗೆ ಎಚ್ಚರಿಕೆಯ ಸೂಚನೆ ನೀಡುವ ಮತ್ತು ಸ್ವಯಂ ಚಾಲಿತವಾಗಿಯೇ ಬ್ರೇಕ್‌ ಹಾಕಿ ಅಪಘಾತ ತಪ್ಪಿಸುವುದಕ್ಕೆ ಈ ತಂತ್ರಜ್ಞಾನ ನೆರವು ನೀಡುತ್ತದೆ’ ಎಂದು ಹೇಳಿದರು.

‘ಅಪಘಾತಗಳಿಂದಾಗಿ ರಾಜ್ಯದಲ್ಲಿ ಪ್ರತಿ ವರ್ಷ ₹100 ಕೋಟಿಗೂ ಹೆಚ್ಚು ಹಣ ಸಾರಿಗೆ ಸಂಸ್ಥೆಗಳಿಂದ ವ್ಯಯವಾಗುತ್ತಿದೆ. ಅನೇಕ ಸಾವು– ನೋವುಗಳಿಗೂ ಈ ಅಪಘಾತಗಳು ಕಾರಣವಾಗುತ್ತಿವೆ. ಹಲವು ಸಂದರ್ಭಗಳಲ್ಲಿ ಇತರ ವಾಹನಗಳ ಚಾಲಕರು ನಡೆಸುವ ನಿರ್ಲಕ್ಷ್ಯದ ಚಾಲನೆಯಿಂದ ಉಂಟಾಗುವ ಅಪಘಾತಗಳಲ್ಲಿ ವಿನಾ ಕಾರಣ ಸಾರಿಗೆ ಸಂಸ್ಥೆಗಳು ಪರಿಹಾರ ನೀಡುವ ಸಂದರ್ಭಗಳೂ ಎದುರಾಗಿವೆ. ಇವುಗಳನ್ನು ತಪ್ಪಿಸಲು ಅಪಘಾತ ಮುನ್ಸೂಚನೆ ನೀಡುವ ಸಾಧನಗಳನ್ನು ಬಸ್ಸುಗಳಲ್ಲಿ ಅಳವಡಿಸಲು ಸೂಚಿಸಲಾಗಿದೆ. ಇದನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆದಿದೆ’ ಎಂದು ಸವದಿ ಹೇಳಿದರು.

‘ಈಗಾಗಲೇ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿ ವಾಹನಗಳಲ್ಲಿ ಅಳವಡಿಸಿರುವ ಸಂಸ್ಥೆಗಳ ಸಹಯೋಗದೊಂದಿಗೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲು ತೀರ್ಮಾನಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಈಗಾಗಲೇ ಶೇ 60ರಷ್ಟು ಬಸ್ಸುಗಳ ಸಂಚಾರ  ಪ್ರಾರಂಭಿಸಲಾಗಿದೆ. ಮುಂದಿನ ತಿಂಗಳು ಕೊರಿಯರ್‌ ಸೇವೆಯನ್ನು ಸಾರಿಗೆ ಸಂಸ್ಥೆ ಬಸ್ಸುಗಳ ಮೂಲಕ ಆರಂಭಿಸಲಾಗುವುದು. ಸಾರಿಗೆ ಸಂಸ್ಥೆಗಳಲ್ಲಿ ಉಳಿತಾಯದ ಕ್ರಮ ವಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದ್ದು, ಹೊಸ ಸಿಬ್ಬಂದಿ ನೇಮಕವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು