ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಮೀಸಲಾತಿ ಜಾರಿ ತಡೆಯಲು ಅಸಾಧ್ಯ: ಎಲ್‌. ಹನುಮಂತಯ್ಯ

ಐತಿಹಾಸಿಕ ತೀರ್ಪು ಒಂದು ಮುನ್ನೋಟ ಕಾರ್ಯಕ್ರಮದಲ್ಲಿ ಎಲ್‌. ಹನುಮಂತಯ್ಯ
Published 18 ಆಗಸ್ಟ್ 2024, 14:27 IST
Last Updated 18 ಆಗಸ್ಟ್ 2024, 14:27 IST
ಅಕ್ಷರ ಗಾತ್ರ

ಬೆಂಗಳೂರು: ಒಳಮೀಸಲಾತಿ ಜಾರಿಗೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜಾರಿ ಮಾಡಲು ಅನುಸರಿಸಬೇಕಾದ ಮಾರ್ಗ ಯಾವುದು ಎಂಬುದಷ್ಟೇ ಉಳಿದಿರುವ ಪ್ರಶ್ನೆ ಎಂದು ಒಳಮೀಸಲಾತಿ ಹೋರಾಟಗಾರ ಎಲ್‌. ಹನುಮಂತಯ್ಯ ತಿಳಿಸಿದರು.

ಮಾದಿಗ ಪೊಲಿಟಿಕಲ್‌ ಫೋರಂ, ಶೂದ್ರ ಪ್ರತಿಷ್ಠಾನ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಐತಿಹಾಸಿಕವಾದ ಒಳಮೀಸಲಾತಿ ತೀರ್ಪು’ ಒಂದು ಮುನ್ನೋಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಳಮೀಸಲಾತಿ ಜಾರಿಗೆ ತರುವ ಅಧಿಕಾರವನ್ನು ರಾಜ್ಯಗಳಿಗೆ ಸುಪ್ರೀಂಕೋರ್ಟ್‌ ನೀಡಿದೆ. ಒಳಮೀಸಲಾತಿ ಬೇಡ ಎಂದು ಹೇಳುವವರನ್ನು ನಾವು ಮನವೊಲಿಸುವ ಅಗತ್ಯವಿದೆ. ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಸಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳಬೇಕು. ಯಾರೂ ಅಡ್ಡಗಾಲು ಹಾಕಬಾರದು’ ಎಂದು ಹೇಳಿದರು.

ಒಳಮೀಸಲಾತಿ ಜಾರಿಗೆ ರಾಜಕಾರಣಿಗಳ, ಆಳುವವರ ಮೇಲೆ ಪ್ರಭಾವ ಬೀರುವುದು ಒಂದು ಕಡೆಯಾದರೆ, ಇನ್ನೊಂದೆಡೆ 30 ವರ್ಷಗಳಿಂದ ಒಳಮೀಸಲಾತಿಗಾಗಿ ನಡೆದ ಚಳವಳಿಯನ್ನು ನಿಲ್ಲಿಸದೇ ಮುಂದುವರಿಸಬೇಕಾದ ಅನಿವಾರ್ಯತೆ ಇದೆ. ಹಿಂದಿನ ಪೀಳಿಗೆ ಚಳವಳಿ ಆರಂಭಿಸಿತ್ತು. ಈಗ ವಿದ್ಯಾಭ್ಯಾಸ ಪಡೆದೂ ನಿರುದ್ಯೋಗಿಗಳಾಗಿರುವ ಯುವ ಸಮೂಹ ಈ ಚಳವಳಿಯನ್ನು ಮುಂದಕ್ಕೆ ಒಯ್ಯಬೇಕು ಎಂದು ಸಲಹೆ ನೀಡಿದರು.

ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಮಾತನಾಡಿ, ‘ಒಳಮೀಸಲಾತಿ ತೀರ್ಪನ್ನು ಮರುಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಉತ್ತರ ಭಾರತದಲ್ಲಿರುವ ನಮ್ಮ ಸಮುದಾಯದವರೇ ಮುಂದಾಗಿದ್ದಾರೆ. ಅವರಿಗೆ ಬೇಡವಾದರೆ, ಅವರ ರಾಜ್ಯಗಳಲ್ಲಿ ಜಾರಿ ಮಾಡದಿರಬಹುದು. ಆದರೆ, ಒಳಮೀಸಲಾತಿ ಅಗತ್ಯ ಇರುವ ರಾಜ್ಯಗಳಲ್ಲಿ ಜಾರಿಗೆ ಅಡ್ಡಿಪಡಿಸಬಾರದು’ ಎಂದು ಹೇಳಿದರು.

ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ‘ಒಳಮೀಸಲಾತಿ ಎಂದರೆ ಏನು ಎಂಬುದು ಮಾದಿಗ ಸಮುದಾಯದಲ್ಲೇ ಶೇ 5ರಷ್ಟು ಮಂದಿಗೂ ಗೊತ್ತಿಲ್ಲ. ಒಳಮೀಸಲಾತಿ ತೀರ್ಪು ಏನು? ಕೆನೆಪದರ ಬಗ್ಗೆ ತೀರ್ಪಲ್ಲಿ ಏನಾದರೂ ಹೇಳಿದೆಯೇ? ಎಂಬುದರ ಅರಿವೇ ಇಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರೂ ಇದ್ದಾರೆ. ಹಾಗಾಗಿ ಮೊದಲು ಅರಿವು ಮೂಡಿಸಬೇಕು. ಎಲ್ಲ ಕ್ಷೇತ್ರಗಳಲ್ಲಿಯೂ ಒಳಮೀಸಲಾತಿ ಅನ್ವಯವಾಗುವವರೆಗೆ ಹೋರಾಟ ಮುಂದುವರಿಸಬೇಕು‘ ಎಂದು ಸಲಹೆ ನೀಡಿದರು.

ಹೋರಾಟಗಾರರು ಯಾವ ರಾಜಕೀಯ ಪಕ್ಷವನ್ನೂ ನಂಬಬಾರದು ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್‌ ಮಾಜಿ ಸಚಿವ ಆರ್‌. ಧರ್ಮಸೇನಾ, ಮಾದಿಗ ಪೊಲಿಟಿಕಲ್‌ ಫೋರಂ ಅಧ್ಯಕ್ಷ ಎಚ್‌. ಲಕ್ಷ್ಮೀನಾರಾಯಣಸ್ವಾಮಿ, ಹೋರಾಟಗಾರರಾದ ಗಡ್ಡಂ ವೆಂಕಟೇಶ್‌, ಗೊನಾಳ ಭೀಮಪ್ಪ, ಪಿ.ಮೂರ್ತಿ, ಅಂಬಣ್ಣ ಅರೋಲಿಕರ್‌, ಎಚ್‌.ಆರ್‌. ಭೀಮಶಂಕರರಾವ್‌, ವಿಜಯ್ ಕುಮಾರ್ ಭಾಗವಹಿಸಿದ್ದರು.

ನಾಗರಾಜ್‌ ಅವರ ‘ಮಾತೃಶಿಲ್ಪಿ’ ಕವನ ಸಂಕಲನ, ದ್ಯಾವರನಹಳ್ಳಿ ಆನಂದ್‌ಕುಮಾರ್‌ ಅವರ ‘ಮಾರಾಟಕ್ಕಿದೆ’. ಕೆ.ವಿ. ರವೀಂದ್ರ ಅವರ ‘ಆಧುನಿಕ ಭಾರತದ ಹರಿಕಾರ ಬಾಬು ಜಗಜೀವನರಾಂ’ ಕೃತಿಗಳು ಬಿಡುಗಡೆಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT