ಗುರುವಾರ , ಫೆಬ್ರವರಿ 25, 2021
19 °C
ಮುಖ್ಯಕಾರ್ಯದರ್ಶಿಗೆ ಸಂಘಟನೆಗಳ ಮನವಿ

‘ರೈಲ್ವೆ ಮೂಲಸೌಕರ್ಯ ಹೆಚ್ಚಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೊದಲು ರೈಲು ಬೇಕು’ ಎಂಬ ಅಭಿಯಾನ ಕೈಗೊಂಡಿದ್ದ ಸಿಟಿಜನ್ಸ್ ಫಾರ್ ಬೆಂಗಳೂರು (ಸಿಎಫ್‌ಬಿ), ಪ್ರಜಾ ರಾಗ್ ಹಾಗೂ ವೈಟ್‌ಫೀಲ್ಡ್‌ ರೈಸಿಂಗ್ ಸಂಘಟನೆಗಳ ಪ್ರಮುಖರು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತಾಯಿಸಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಶುಕ್ರವಾರ  ಮನವಿ ಸಲ್ಲಿಸಿದರು.

ಉಪನಗರ ರೈಲು ಯೋಜನೆ ಇನ್ನಷ್ಟು ವಿಳಂಬವಾಗುವುದನ್ನು ಸಹಿಸಲು ಇನ್ನು ಸಾಧ್ಯವಿಲ್ಲ. ಶೀಘ್ರವೇ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಆರಂಭಿಸಿ, ಆದಷ್ಟು ಬೇಗ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು. ಈಗಿರುವ ಮೂಲಸೌಕರ್ಯಗಳನ್ನು ಉನ್ನತ ದರ್ಜೆಗೇರಿಸಿ ರೈಲು ಪ್ರಯಾಣ ಸುಗಮವಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.  

ಈಗ ಸಂಚರಿಸುತ್ತಿರುವ ರೈಲುಗಳನ್ನು ಜನರಿಗೆ ಅನುಕೂಲಕರವಾದ ಸಮಯದಲ್ಲಿ ಓಡಿಸಬೇಕು. ರೈಲು ನಿಲ್ದಾಣಗಳಿಂದ ಪ್ರಯಾಣಿಕರು ತಲುಪಬೇಕಾದ ತಾಣಗಳಿಗೆ ಸಂಪರ್ಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ನಿಲ್ದಾಣಗಳಲ್ಲಿ ಸೈಕಲ್ ಶೇರಿಂಗ್‌ ವ್ಯವಸ್ಥೆ ಮತ್ತು ಪಾರ್ಕಿಂಗ್ ಸೌಲಭ್ಯ ಒದಗಿಸಬೇಕು. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ನಗರ ಕೇಂದ್ರ ರೈಲು ನಿಲ್ದಾಣದಿಂದ ಮತ್ತು ಯಶವಂತಪುರ ರೈಲು ನಿಲ್ದಾಣದಿಂದ ಪ್ರತ್ಯೇಕ ರೈಲು ಸೇವೆ ಆರಂಭಿಸಬೇಕು. ಇದಕ್ಕಾಗಿ ಬಳ್ಳಾರಿ ರಸ್ತೆಯ ‘ಟ್ರಂಪೆಟ್'ನಲ್ಲಿ  ಬಳಿ ಹೊಸ ನಿಲ್ದಾಣ ನಿರ್ಮಿಸಬಹುದು ಎಂದು ಸಲಹೆ ನೀಡಿದರು.

ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗಲು ಇನ್ನೆರಡು ರೈಲುಗಳನ್ನು ಒದಗಿಸಬೇಕು.  ಬೆಳ್ಳಂದೂರು, ಕಾರ್ಮೆಲರಾಮ್ ಮತ್ತು ಹೀಳಲಿಗೆ ನಿಲ್ದಾಣಗಳ ಸಂಪರ್ಕ ರಸ್ತೆ  ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳು

* ರೈಲು ನಿಲ್ದಾಣಗಳಲ್ಲಿ ಶೌಚಾಲಯ, ಕುಡಿಯುವ ನೀರು ಹಾಗು ಪಾರ್ಕಿಂಗ್ ಜಾಗದ ಕೊರತೆ ನೀಗಿಸಬೇಕು

* ನಿಲ್ದಾಣಗಳಲ್ಲಿ ಹಾಗು ನಿಲ್ದಾಣ ಸಂಪರ್ಕ ರಸ್ತೆಗಳಲ್ಲಿ ಬೆಳಕಿನ ವ್ಯವಸ್ಥೆ ಹಾಗೂ ಭದ್ರತೆ ಕಲ್ಪಿಸಬೇಕು

* ಪ್ರಯಾಣಿಕರು ರೈಲ್ವೆ ನಿಲ್ದಾಣ ತಲುಪಲು ನೆರವಾಗುವಂತೆ ಮಾರ್ಗಸೂಚಿ ಫಲಕ ಅಳವಡಿಸಬೇಕು

* ರೈಲ್ವೆ ಮತ್ತು ಮೆಟ್ರೊ ಸಂಪರ್ಕ ಜಾಲವನ್ನು ವಿಸ್ತರಿಸಬೇಕು

* ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣ– ಹಳೆ ಮದ್ರಾಸ್ ರಸ್ತೆಯ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು

* ಹಳಿ ದಾಟಲು ಎಲ್ಲಾ ರೈಲು ನಿಲ್ದಾಣಗಳಲ್ಲಿ ಪಾದಚಾರಿ ಸೇತುವೆ ನಿರ್ಮಿಸಬೇಕು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.