ಬುಧವಾರ, ಮೇ 18, 2022
28 °C
ಯುದ್ಧ ವಿಮಾನದ ಜೊತೆ ಮಾನವರಹಿತ ವಿಮಾನವನ್ನು ಬೆಸೆಯಲಿದೆ ಎಚ್‌ಎಎಲ್‌

ಭವಿಷ್ಯದ ಕಣ್ಕಟ್ಟಿನ ಯುದ್ಧಗಳಿಗೆ ಸಜ್ಜಾಗುತ್ತಿದೆ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭವಿಷ್ಯದಲ್ಲಿ ಯುದ್ಧಗಳು ಸಾಂಪ್ರದಾಯಿಕ ರೀತಿಯಲ್ಲಿ ನಡೆಯುವುದಿಲ್ಲ. ಶತ್ರುಗಳ ರಾಡಾರ್ ವ್ಯವಸ್ಥೆಯ ಕಣ್ತಪ್ಪಿಸಿ, ಅವರ ದೇಶದ ವಾಯು ಸೀಮೆಯನ್ನು ನುಸುಳಿ ನಡೆಯುವ ಕಣ್ಕಟ್ಟಿನ ದಾಳಿಗಳ ಸಂಖ್ಯೆ ಹೆಚ್ಚಲಿದೆ. ಸೈನಿಕರ ಅಮೂಲ್ಯ ಜೀವವನ್ನು ಕಳೆದುಕೊಳ್ಳಲು ಬಯಸದ ದೇಶಗಳು ಇಂತಹ ದಾಳಿಗಳಿಗೆ ಮಾನವರರಹಿತ ವಿಮಾನಗಳನ್ನು ಬಳಸುವುದನ್ನು ಇಷ್ಟಪಡುತ್ತವೆ. 

ಭಾರತವನ್ನೂ ಇಂತಹ ಯುದ್ಧತಂತ್ರಗಳಿಗೆ ಸಜ್ಜುಗೊಳಿಸಲು ಹಿಂದುಸ್ತಾನ್ ಏರೊನಾಟಿಕ್ಸ್‌ ಲಿಮಿಟೆಡ್‌ ಸಂಸ್ಥೆ ‘ಕಂಬ್ಯಾಟ್‌ ಏರ್‌ ಟೀಮ್‌ ಸಿಸ್ಟಂ’ (ಕ್ಯಾಟ್ಸ್‌) ಅನ್ನು ಅಭಿವೃದ್ಧಿಪಡಿಸುತ್ತಿದೆ. ಸೈನಿಕರು ಚಲಾಯಿಸುವ ಯುದ್ಧ ವಿಮಾನದ ಜೊತೆಯಲ್ಲೇ ಮಾನವರಹಿತ ವಿಮಾನವನ್ನೂ ಬಳಸುವ ತಂತ್ರಗಾರಿಕೆ ಇದರಲ್ಲಿ ಇರಲಿದೆ.

ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ ಎಚ್‌ಎಎಲ್‌ನ ಮಳಿಗೆಯಲ್ಲಿರುವ ಕ್ಯಾಟ್ಸ್‌ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಪ್ರಮುಖ ಆಕರ್ಷಣೆಯಾಗಿದೆ.

‘ದೇಶದ ಗಡಿಯವರೆಗೆ ಯುದ್ಧವಿಮಾನವನ್ನು ಒಯ್ದು, ಅಲ್ಲಿಂದ ಶತ್ರುಗಳ ದೇಶದ ಮೇಲೆ ಮಾನವರಹಿತ ವಿಮಾನದ ಮೂಲಕ ದಾಳಿ ನಡೆಸುವುದಕ್ಕೆ ಕ್ಯಾಟ್ ವ್ಯವಸ್ಥೆ ಅನುಕೂಲ ಕಲ್ಪಿಸಲಿದೆ. ಗಡಿಯಿಂದ ಶತ್ರುದೇಶದ ಒಳಗೆ ಕಳುಹಿಸುವ ಮಾನವರಹಿತ ವಿಮಾನವನ್ನು ‌ಪೈಲಟ್‌ ದೂರದಿಂದಲೇ ನಿಯಂತ್ರಣ ಮಾಡಬಹುದು. ಈ ಯುದ್ಧ ತಂತ್ರದಲ್ಲಿ ಪೈಲಟ್‌ ಸುರಕ್ಷಿತವಾಗಿರುತ್ತಾರೆ. ಮಾನವರಹಿತ ಯುದ್ಧವಿಮಾನ ಅದರ ಕೆಲಸ ಮಾಡಿ ಮರಳುತ್ತದೆ. ಒಂದು ವೇಳೆ ಶತ್ರುಗಳು ಪ್ರತಿ ದಾಳಿ ಪ್ರತಿ ದಾಳಿ ನಡೆಸಿದರೂ ಅದರಿಂದ ಅಮೂಲ್ಯ ಯುದ್ಧವಿಮಾನವನ್ನು ಕಳೆದುಕೊಳ್ಳುವ ಪ್ರಮೇಯವೇ ಇರುವುದಿಲ್ಲ. ಮಾನವರಹಿತ ವಿಮಾನಗಳು ಓಲಾಡುತ್ತಾ ಸಾಗಿ ನಿಖರ ಗುರಿಯನ್ನು ತಲುಪಿ ದಾಳಿ ನಡೆಸುತ್ತವೆ’ ಎಂದು ಎಚ್‌ಎಎಲ್‌ನ ಸಹಾಯಕ ಮಹಾವ್ಯವಸ್ಥಾಪಕ ರಾಮನಂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು.  

‘ತೇಜಸ್‌, ಜಾಗ್ವಾರ್‌‌, ಮಿರಾಜ್,‌ ಸುಖೋಯ್‌ನಂತಹ ಯಾವುದೇ ಯುದ್ಧ ವಿಮಾನಗಳಿಗೂ ಇವುಗಳನ್ನು ಅಳವಡಿಸಬಹುದು. ಸದ್ಯಕ್ಕೆ ನಾವು ತೇಜಸ್‌ಗೆ ಇದನ್ನು ವಿನ್ಯಾಸಗೊಳಿಸಿದ್ದೇವೆ. ತೇಜಸ್‌ನಲ್ಲಿ ಎರಡೂ ಕಡೆ ತಲಾ ನಾಲ್ಕು ಆಲ್ಫಾ (ಏರ್‌ ಲಾಂಚ್‌ಡ್ ಫ್ಲೆಕ್ಸಿಬಲ್‌ ಅಸ್ಸೆಟ್‌)‌  ಅಸ್ತ್ರಗಳನ್ನು ಅಳವಡಿಸಲಾಗುತ್ತದೆ. ಪ್ರತಿ ಆಲ್ಫಾವೂ ತಲಾ 125 ಕೆ.ಜಿ/ ಆಯುಧವನ್ನು ಒಯ್ಯಬಲ್ಲುದು. ಜೊತೆಗೆ ಕ್ರೂಸ್‌‌ ಕ್ಷಿಪಣಿ ‘ಹಂಟರ್‌’ ಅನ್ನು ಕೂಡ ಜೋಡಿಸಲಾಗುತ್ತದೆ. ಇದು 250 ಕೆ.ಜಿ. ತೂಕವನ್ನು ಒಯ್ಯಬಲ್ಲುದು. ಅಲ್ಲದೇ ಲೇಸರ್‌ ಗೈಡೆಡ್ ಬಾಂಬ್‌, ಅಸ್ತ್ರ ಕ್ಷಿಪಣಿ, ಅಸ್ರಮ್‌ ಕ್ಷಿಪಣಿಗಳನ್ನೂ ಜೋಡಿಸಲಾಗುತ್ತದೆ. ಸುಖೋಯ್‌ನಂತಹ ವಿಮಾನಗಳಲ್ಲಿ 24 ಆಲ್ಫಾಗಳನ್ನೂ ಅಳವಡಿಸಬಹುದು’ ಎಂದು ಅವರು ವಿವರಿಸಿದರು.  

‘ಪೈಲಟ್‌ರಹಿತ ವಿಮಾನವು  ಯುದ್ಧ ವಿಮಾನದಿಂದ ಬೇರ್ಪಟ್ಟ ಬಳಿಕ 100 ಕಿ.ಮೀ ದೂರದವರೆಗೂ ತಲುಪಿ ದಾಳಿ ಮಾಡಬಲ್ಲುದು. 10 ಕಿ.ಮೀ. ಎತ್ತರದಿಂದ 3 .ಕಿಮೀಗಳಷ್ಟು ತಗ್ಗಿಗೆ ಇಳಿದು ನಿಖರ ಗುರಿಗೆ ದಾಳಿ ಮಾಡುವ ಸಾಮರ್ಥ್ಯ ಇವುಗಳಿಗೆ ಇದೆ’ ಎಂದು ವಿವರಿಸಿದರು. 

‘ಈ ಹೊಸ ಪರಿಕಲ್ಪನೆಯ ವಿನ್ಯಾಸ ಸಿದ್ಧವಾಗಿದೆ. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಈ ವಿನ್ಯಾಸವನ್ನು ಅಂತಿಮಗೊಳಿಸಲಿದ್ದೇವೆ. ಇದು ಸಂಪೂರ್ಣ ಸಿದ್ಧಗೊಂಡು ಭಾರತೀಯ ವಾಯುಸೇನೆಯ ಬಳಕೆಗೆ ಲಭ್ಯವಾಗಲು ಇನ್ನೂ ಮೂರು ವರ್ಷಗಳಾದರೂ ಬೇಕು’ ಎಂದು ಅವರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು