ಬೆಂಗಳೂರು: ಇಲ್ಲಿನ ಕಾಶ್ ಫೌಂಡೇಶನ್ ‘ಪ್ಲೇ:ಎಕ್ಸ್‌ಪೆರಿಮೆಂಟ್ಸ್ ವಿಥ್ ಇಂಡಿಯನ್ ಮಿನಿಯೇಚರ್ಸ್’ ಶೀರ್ಷಿಕೆಯಡಿ ಬರ್ಲಿ ಸ್ಟ್ರೀಟ್‌ನ ಕಾಶ್‌ನಲ್ಲಿ ಹಮ್ಮಿಕೊಂಡಿರುವ ಚಿಕಣಿ ವರ್ಣಚಿತ್ರಗಳ (ಮಿನಿಯೇಚರ್ಸ್) ಪ್ರದರ್ಶನಕ್ಕೆ ಚಾಲನೆ ದೊರೆತಿದ್ದು, ಈ ಪ್ರದರ್ಶನ ಇದೇ 19ರವರೆಗೆ ನಡೆಯಲಿದೆ.
ಬೆಳಿಗ್ಗೆ 11ರಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇದು ಸಮೂಹ ಚಿತ್ರಕಲಾ ಪ್ರದರ್ಶನವಾಗಿದ್ದು, ವಿಜಯ್ ಸಿದ್ದರಾಮಪ್ಪ ಹಾಗರಗುಂಡಗಿ, ರಿಯಾಸುದ್ದೀನ್ ಹಾಗೂ ಗಾರ್ಗಿ ಚಂದೋಲ ಅವರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಸಾಂಪ್ರದಾಯಿಕ ಭಾರತೀಯ ಚಿಕಣಿ ಕಲೆಯನ್ನು ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ.
ಕಲಬುರಗಿಯ ಹಾಗರಗುಂಡಗಿ ಅವರು ಸುರಪುರ ಶೈಲಿಯ ಡೆಕ್ಕನ್ ಚಿಕಣಿ ಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದು, ಅವರ 12 ಕಲಾಕೃತಿಗಳು ಪ್ರದರ್ಶನದಲ್ಲಿವೆ. ಈ ಕಲಾಕೃತಿಗಳು ಪ್ರಮುಖವಾಗಿ ಪೌರಾಣಿಕ ದಂತಕಥೆಗಳನ್ನು ಕೇಂದ್ರೀಕರಿಸಿವೆ. ಜೈಪುರದ ರಿಯಾಸುದ್ದೀನ್ ಅವರು ರಜಪೂತ ಚಿಕಣಿ ಶೈಲಿಯ ವರ್ಣಚಿತ್ರಗಳನ್ನು ಪ್ರಸ್ತುಪಡಿಸಿದ್ದಾರೆ. ನವದೆಹಲಿಯ ಚಂದೋಲ ಅವರು ಸಮಕಾಲೀನ ವಿಷಯಗಳನ್ನು ಆಧರಿಸಿ, ಚಿಕಣಿ ವರ್ಣಚಿತ್ರಗಳನ್ನು ರಚಿಸಿದ್ದಾರೆ.
ಈ ಚಿತ್ರಕಲೆ ಪ್ರದರ್ಶನವು ಕಾಶ್‌ನ ಸಂಸ್ಥಾಪನಾ ಸದಸ್ಯ ಮಂಜು ಸಾರಾ ರಾಜನ್ ಅವರ ಪರಿಕಲ್ಪನೆಯಾಗಿದೆ. ವಾಸ್ತುಶಿಲ್ಪವನ್ನು ಡೇವಿಡ್ ಜೊ ಥಾಮಸ್ ವಿನ್ಯಾಸಗೊಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.