ಬುಧವಾರ, ಜನವರಿ 22, 2020
19 °C
ಸಾಗರದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸ್‌ಲೆನ್ಸ್‌ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಅಭಿವೃದ್ಧಿ

ಅಡಿಕೆ ಕೊಯ್ಯಲು ಬಂತು 'ರೋಬೊ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾರ್ಮಿಕರ ಕೊರತೆಯೇ ಅಡಿಕೆ ಬೆಳೆಗಾರರಿಗೆ ಬಹುದೊಡ್ಡ ತಲೆನೋವು. ಅಲ್ಲದೆ, 60ರಿಂದ 80 ಅಡಿ ಎತ್ತರದ ಮರಗಳನ್ನೇರಿ ಅಡಿಕೆ ಕೀಳುವಾಗ ಆಯತಪ್ಪಿ ಅವರು ಕೆಳಗೆ ಬಿದ್ದರೆ, ಅದರ ಹೊಣೆಯೂ ಮಾಲೀಕರೇ ಹೊತ್ತುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಯಾವುದೇ ಆತಂಕವಿಲ್ಲದೆ ಅಡಿಕೆ ಕೀಳುವ ರೋಬೊವನ್ನು ಸಾಗರದ ಶಿಕ್ಷಕರೊಬ್ಬರು ಅಭಿವೃದ್ಧಿಪಡಿಸಿದ್ದಾರೆ. 

‘ಮಲೆನಾಡಿನಲ್ಲಿ ಅಡಿಕೆ ಗೊನೆ ಕೊಯ್ಯುವವರಿಗೆ ಹೆಚ್ಚು ಬೇಡಿಕೆ ಇದೆ. ಆದರೆ, ಇಡೀ ಸಾಗರದಲ್ಲಿ ಹೀಗೆ ಅಡಿಕೆ ಕೊಯ್ಯುವ ಕೌಶಲ ಹೊಂದಿರುವವರು ಮೂವರು ಮಾತ್ರ ಇದ್ದಾರೆ. ಅವರಿಗೆ ದಿನಕ್ಕೆ ₹2 ಸಾವಿರದಿಂದ ₹3 ಸಾವಿರ ಕೊಡಬೇಕು. ಆದರೆ, ₹35,000 ವೆಚ್ಚದಲ್ಲಿ ಈ ರೋಬೊವನ್ನು ಖರೀದಿ ಸಬಹುದು. ಏಳೆಂಟು ವರ್ಷ ಬಾಳಿಕೆ ಬರುತ್ತದೆ’ ಎಂದು ಈ ತಂತ್ರಜ್ಞಾನ
ವನ್ನು ಅಭಿವೃದ್ಧಿ ಪಡಿಸಿರುವ ಸಾಗರದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸ್‌ಲೆನ್ಸ್‌ನ ಶಿಕ್ಷಕ ವಿ. ರೋಹಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯನಿರ್ವಹಣೆ ಹೇಗೆ?: ಸಂಪೂರ್ಣ ಸ್ವಯಂಚಾಲಿತವಾಗಿ ಈ ರೋಬೊ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಒಂದು ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದ್ದು, ಅದನ್ನು ಡೌನ್‌ಲೋಡ್‌ ಮಾಡಿ ಕೊಂಡರೆ, ಮೊಬೈಲ್‌ ಮೂಲಕವೇ ರೋಬೊವನ್ನು ನಿಯಂತ್ರಿಸಬಹುದು. ಮೊಬೈಲ್‌ನಲ್ಲಿ ರಿಮೋಟ್‌ ಮಾದರಿ ಯನ್ನು ನೀಡಲಾಗಿದ್ದು, ರೋಬೊವನ್ನು ನಿಯಂತ್ರಿಸುವ ವ್ಯವಸ್ಥೆ ಕೊಡಲಾಗಿದೆ. 

ರೋಬೊ ಮೇಲೆ ಕತ್ತರಿ ಮಾದರಿ ಸಾಧನ ಇದ್ದು, ಟೈಲ್ಸ್‌ ಕತ್ತರಿಸುವ ಬ್ಲೇಡ್‌ಗಳನ್ನು ಇದಕ್ಕೆ ಅಳವಡಿಸಲಾ ಗಿದೆ. ಹಾಗಾಗಿ, ಬ್ಲೇಡ್‌ಗಳನ್ನು ಪದೇಪದೇ ಸಾಣೆ ಹಿಡಿಯಬೇಕಾದ ಅಗತ್ಯವಿಲ್ಲ. ಮೊದಲಿಗೆ ಒಂದೆರಡು ಅಡಿಕೆಗಳನ್ನು ಇದು ಕೆಳಗೆ ಬೀಳಿಸುತ್ತದೆ. ಆ ಅಡಿಕೆ ಕಾಯಿ ಆಗಿದೆಯೋ ಇಲ್ಲವೋ ಎಂಬುದನ್ನು ನೋಡಿದ ನಂತರ, ಇಡೀ ಗೊನೆ ಕೊಯ್ಯುವ ಕಾರ್ಯವನ್ನು ರೋಬೊಗೆ ನೀಡಬಹುದು. 

ಸದ್ಯ, ಒಂದು ಗೊನೆ ಕೀಳಲು ಮೂರುವರೆ ನಿಮಿಷವನ್ನು ಈ ರೋಬೊ ತೆಗೆದುಕೊಳ್ಳುತ್ತದೆ. ಅಂದರೆ, ದಿನಕ್ಕೆ 250 ಮರಗಳ 500 ಗೊನೆಗಳನ್ನು ಇದು ಕೀಳುವ ಸಾಮರ್ಥ್ಯ ಹೊಂದಿದೆ.

ಸ್ಥಳೀಯವಾಗಿ ಸಾಧನಗಳ ಲಭ್ಯತೆ: ಸಂಪೂರ್ಣ ಸ್ಥಳೀಯವಾಗಿ ಲಭ್ಯವಾಗ ಬಹುದಾದ ಸಾಧನಗಳನ್ನು ಬಳಸಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಎಲೆಕ್ಟ್ರಿಕ್‌ ಚಾರ್ಜ್‌ ಮಾಡಿದರೆ ಸಾಕು. ಚಕ್ರಗಳು ಸವೆಯುವುದರಿಂದ ಅವುಗಳನ್ನು ಬದಲಿಸಬೇಕಾಗುತ್ತದೆ. 

‘ಅಡಿಕೆ ಗೊನೆ ಕೊಯ್ಯುವ ಯಂತ್ರಗಳು ಹಲವು ಮಾರುಕಟ್ಟೆಗೆ ಬಂದಿವೆ. ಆದರೆ, ಅವುಗಳನ್ನು ಬಳಸಲು ಮನುಷ್ಯರು ಮರ ಏರಲೇಬೇಕಾಗುತ್ತದೆ. ಅದನ್ನು ತಪ್ಪಿಸುವ ಸಲುವಾಗಿ ಈ ರೋಬೊ ಅಭಿವೃದ್ಧಿ ಪಡಿಸಲಾಗಿದೆ. ಸಾಂಪ್ರದಾಯಿಕ ಯಂತ್ರ ಗಳು 38 ಕೆ.ಜಿ ಇದ್ದರೆ, ಈ ರೋಬೊ ಬರೀ ಎಂಟೂವರೆ ಕೆ.ಜಿ ತೂಕ ಹೊಂದಿ ರುತ್ತದೆ’ ಎಂದು ರೋಹಿತ್‌ ಹೇಳಿದರು.

ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 94815–03603.

*

ಮೈಕ್ರೊ ಕಂಟ್ರೋಲರ್, ಸೆನ್ಸರ್, ಕಟ್ಟಿಂಗ್‌ ಬ್ಲೇಡ್‌ ಸಹಾಯದಿಂದ ಈ ರೋಬೊ ಅಭಿವೃದ್ಧಿ ಪಡಿಸಲಾಗಿದೆ. ಎಂಟೂವರೆ ಕೆಜಿ ಇರುವ ಯಂತ್ರ ಸ್ವಯಂಚಾಲಿತವಾಗಿದೆ.
-ವಿ. ರೋಹಿತ್‌, ರೋಬೊ ಅಭಿವೃದ್ಧಿ ಪಡಿಸಿದವರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು