ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌ ದುರಸ್ತಿ ಕಾರ್ಯ ಆರಂಭ: ತಿಂಗಳಲ್ಲಿ ಮುಕ್ತಾಯ

ಬಿಬಿಎಂಪಿ: ಕ್ಯಾಂಟೀನ್‌ ಕಾರ್ಯನಿರ್ವಹಣೆ ಸಮಯದಲ್ಲೇ ಕಾಮಗಾರಿ
Published 20 ಸೆಪ್ಟೆಂಬರ್ 2023, 0:46 IST
Last Updated 20 ಸೆಪ್ಟೆಂಬರ್ 2023, 0:46 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ದುರಸ್ತಿ ಕಾರ್ಯ ಆರಂಭವಾಗಿದ್ದು, ಇನ್ನೊಂದು ತಿಂಗಳಲ್ಲಿ ಎಲ್ಲ ಕಾಮಗಾರಿಗಳೂ ಮುಗಿಯಲಿವೆ.

ಸರ್ಕಾರದ ನಿರ್ದೇಶನದ ಮೇರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ರೂಪ ನೀಡುವ ಕಾಮಗಾರಿ ಆರಂಭವಾಗಿವೆ. ಹಿಂದಿನ ಸರ್ಕಾರದಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಹೆಚ್ಚಿನ ಅನುದಾನ ನೀಡಿರಲಿಲ್ಲ. ಹೀಗಾಗಿ, ಕ್ಯಾಂಟೀನ್‌ಗಳ ಸ್ಥಿತಿ ಬಗ್ಗೆ ಆದ್ಯತೆ ನೀಡಿರಲಿಲ್ಲ. ಎಲ್ಲ ಕ್ಯಾಂಟೀನ್‌ ಸುಸ್ಥಿತಿಯಲ್ಲಿರಬೇಕು ಎಂಬ ಸರ್ಕಾರದ ಆದೇಶದ ಮೇರೆಗೆ ಕಾರ್ಯ ಆರಂಭವಾಗಿದೆ.

ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಪೈಕಿ 100 ಕ್ಯಾಂಟೀನ್‌ಗಳಲ್ಲಿ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಅಡುಗೆ ಮನೆಯಲ್ಲಿ ದುಸ್ಥಿತಿ, ಆಹಾರ ನೀಡುವ ಸ್ಥಳ, ಊಟ ಮಾಡುವ ಜಾಗದಲ್ಲಿ ಅವ್ಯವಸ್ಥೆ, ಒಳಚರಂಡಿ, ಕುಡಿಯುವ ನೀರಿನ ಮಾರ್ಗದಲ್ಲಿ ಸಮಸ್ಯೆ ಸೇರಿದಂತೆ ಹಲವು ದುರಸ್ತಿ ಕಾಮಗಾರಿಗಳನ್ನು ಪೂರೈಸಲಾಗುತ್ತಿದೆ. ಕ್ಯಾಂಟೀನ್‌ನಲ್ಲಿ ಆಹಾರ ಒದಗಿಸುವ ಜೊತೆಗೆ ದುರಸ್ತಿ ಕೆಲಸಗಳೂ ನಡೆದಿವೆ.

ಇನ್ನೂ 69 ಕ್ಯಾಂಟೀನ್‌ಗಳಲ್ಲಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದ್ದು, ಕೆಲವು ಟೆಂಡರ್‌ ಪ್ರಕ್ರಿಯೆಯಲ್ಲಿವೆ. ಇನ್ನೊಂದು ತಿಂಗಳಲ್ಲಿ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲದಂತೆ ಮಾಡಲಾಗುತ್ತದೆ. ಎಲ್ಲ ವ್ಯವಸ್ಥೆಯೂ ಸುಸ್ಥಿತಿಯಲ್ಲಿ, ಸ್ವಚ್ಛವಾಗಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದರು.

‘ಪ್ರತಿಯೊಂದು ವಾರ್ಡ್‌ಗೆ ಒಂದು ಇಂದಿರಾ ಕ್ಯಾಂಟೀನ್‌ ಇರಬೇಕು ಎಂಬುದು ಸರ್ಕಾರದ ಸೂಚನೆಯಾಗಿದೆ. ಈಗಿರುವ 169 ಕ್ಯಾಂಟೀನ್‌ಗಳ ಜೊತೆಗೆ ಇನ್ನೂ 56 ಕ್ಯಾಂಟೀನ್‌ಗಳನ್ನು ಹೊಸದಾಗಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕ್ಯಾಂಟೀನ್‌ನ ಆಹಾರದ ಮೆನು ಬಗೆಯೂ ಪ್ರಸ್ತಾವ ಸಲ್ಲಿಸಲಾಗಿದ್ದು, ಅಲ್ಲಿಂದ ಅನುಮೋದನೆಯಾದ ಮೇಲೆ ಅನುಷ್ಠಾನ ಮಾಡಲಾಗುವುದು. 36 ಮೊಬೈಲ್‌ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್‌ ಚಂದ್ರ ತಿಳಿಸಿದರು.

ದೊಡ್ಡ ವಾರ್ಡ್‌ಗೆ ಎರಡು ‘ನಮ್ಮ ಕ್ಲಿನಿಕ್‌’!

ಬಿಬಿಎಂಪಿ ವ್ಯಾಪ್ತಿಯಲ್ಲಿ  232 ‘ನಮ್ಮ ಕ್ಲಿನಿಕ್‌’ ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತಾಪಿಸಿರುವ 225 ವಾರ್ಡ್‌ಗಳಿಗಿಂತ ಹೆಚ್ಚಿದ್ದರೂ ಕೆಲವು ದೊಡ್ಡ ವಾರ್ಡ್‌ಗಳಿಗೆ ಒಂದು ಕ್ಲಿನಿಕ್‌ ಸಾಲುತ್ತಿಲ್ಲ. ಹೀಗಾಗಿ ಎರಡು ‘ನಮ್ಮ ಕ್ಲಿನಿಕ್‌’ ಸ್ಥಾಪಿಸಲು ಬಿಬಿಎಂಪಿ ಯೋಜಿಸುತ್ತಿದೆ. ‘ಕೆಲವು ದೊಡ್ಡ ವಾರ್ಡ್‌ಗಳಲ್ಲಿ ಮತ್ತೊಂದು ‘ನಮ್ಮ ಕ್ಲಿನಿಕ್‌’ಗೆ ಬೇಡಿಕೆ ಇದೆ. ಇದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಯಾವ ವಾರ್ಡ್‌ಗೆ ಇನ್ನೊಂದು ಕ್ಲಿನಿಕ್‌ ನೀಡಬೇಕು ಅಥವಾ ವಾರ್ಡ್‌ಗಳ ಗಡಿಯಲ್ಲಿ ಸ್ಥಾಪಿಸಿದರೆ ಎರಡು ವಾರ್ಡ್‌ಗಳ ಪ್ರದೇಶಗಳ ಜನರಿಗೆ ಅನುಕೂಲವಾಗುತ್ತದೆಯೇ ಎಂಬುದನ್ನು ಅಂತಿಮ ವರದಿ ಸಿದ್ಧಪಡಿಸಲಾಗುವುದು. ಅದನ್ನು ಸರ್ಕಾರಕ್ಕೆ ಸಲ್ಲಿಸಿ ಅಲ್ಲಿನ ಸೂಚನೆಯಂತೆ ಮುಂದುವರಿಯಲಾಗುವುದು’ ಎಂದು ಡಾ. ತ್ರಿಲೋಕ್‌ ಚಂದ್ರ ತಿಳಿಸಿದರು. ‘ಬೆಂಗಳೂರು ಜಿಲ್ಲೆಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಅನುಷ್ಠಾನದ ಬಗ್ಗೆ ಯೋಜನೆ ರಚಿಸಲು ಪ್ರಾಥಮಿಕ ಚರ್ಚೆಗಳು ನಡೆದಿವೆ. ಎಲ್ಲ ವ್ಯವಸ್ಥೆಗಳು ಒಂದು ಕೇಂದ್ರದಡಿ ಬರಬೇಕು ಎಂಬ ಆಲೋಚನೆ ಇದೆ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಅಂತಿಮ ಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT