ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಿಸ್ತು: ಇಬ್ಬರು ಕಾನ್‌ಸ್ಟೆಬಲ್‌ ಅಮಾನತು

Last Updated 27 ಮಾರ್ಚ್ 2023, 20:39 IST
ಅಕ್ಷರ ಗಾತ್ರ

ಬೆಂಗಳೂರು: ಅಶಿಸ್ತು ತೋರಿದ ಆರೋಪದ ಅಡಿ ಸುಬ್ರಹ್ಮಣ್ಯ ನಗರ ಠಾಣೆಯ ಇಬ್ಬರು ಪೊಲೀಸ್‌ ಕಾನ್‌ ಸ್ಟೆಬಲ್‌ಗಳನ್ನು ಸೋಮವಾರ ಅಮಾನತು ಮಾಡಲಾಗಿದೆ.

ಕಾನ್‌ಸ್ಟೆಬಲ್‌ ವಿಜಯ್‌ ರಾಥೋಡ್‌, ಠಾಣಾ ಬರಹಗಾರ ಶಿವಕುಮಾರ್‌ ಅಮಾನತುಗೊಂಡ ಸಿಬ್ಬಂದಿ.

‘ಠಾಣೆಯ ಇನ್‌ಸ್ಪೆಕ್ಟರ್‌ ಶರಣಗೌಡ ಅವರು ರಜೆ ನೀಡುತ್ತಿಲ್ಲ. ತಮಗೆ ಹಣ ಮಾಡಿಕೊಡುವಂತೆ ಕೆಳಗಿನ ಸಿಬ್ಬಂದಿ, ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಶಿವಕುಮಾರ್‌ ಅವರು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದರು ಎಂಬ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ.

‘ಯಾರೂ ಹಣ ಮಾಡಿ ಕೊಡುತ್ತಾರೆಯೇ ಅವರಿಗೆ ಮಾತ್ರ ರಜೆ ನೀಡುತ್ತಾರೆ. ಎಲ್ಲ ಸೌಲಭ್ಯಗಳನ್ನು ಕೊಡುತ್ತಾರೆ. ಠಾಣಾ ಸರಹದ್ದು ಗಸ್ತಿಗೆ ಎಂದು ಮಂಜೂರು ಆಗಿರುವ ದ್ವಿಚಕ್ರ ವಾಹನಗಳನ್ನು ಬೀಟ್‌ ಸಿಬ್ಬಂದಿಗೆ ನೀಡಲು ₹ 5 ಸಾವಿರ ಕೇಳುತ್ತಾರೆ. ಅವರ ಮಕ್ಕಳನ್ನು ಈಜುಕೊಳಕ್ಕೆ ಬಿಡಲು ಸರ್ಕಾರಿ ವಾಹನ ಹೊಯ್ಸಳ ಬಳಸಿಕೊಳ್ಳುತ್ತಾರೆ. ಅಲ್ಲದೆ ಪೊಲೀಸ್‌ ಸಿಬ್ಬಂದಿಯನ್ನು ತಮ್ಮ ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

‘ಮಹಿಳಾ ಸಿಬ್ಬಂದಿ ರಜೆ ಕೇಳಲು ತೆರಳಿದರೆ ಬೇರೆ ದೃಷ್ಟಿಯಲ್ಲಿ ನೋಡುತ್ತಾರೆ. ಸಿಬ್ಬಂದಿಗೆ ಸಾರ್ವಜನಿಕರ ಎದುರು ಅವಮಾನ ಮಾಡುತ್ತಾರೆ. ನಾನು ಠಾಣೆಗೆ ಬಂದು ಇಷ್ಟು ದಿನ ಕಳೆದಿದೆ. ಎಷ್ಟು ದುಡ್ಡು ಮಾಡಿಕೊಟ್ಟಿದ್ದೀಯಾ’ ಎಂದು ಪ್ರಶ್ನಿಸುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬಳಿಕ, ಮಲ್ಲೇಶ್ವರ ಎಸಿಪಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿತ್ತು.

‘ಶಿವಕುಮಾರ್‌ ಒಬ್ಬರೇ ಅಂಚೆ ಕಚೇರಿಗೆ ತೆರಳಿ ಅಲ್ಲೇ ವಿಳಾಸ ಬರೆದು ಪತ್ರವನ್ನು ಪೋಸ್ಟ್‌ ಮಾಡಿ ಬಂದಿರುವ ವಿಡಿಯೊ ಸಿಕ್ಕಿದೆ. ಪರಿಶೀಲನೆ ನಡೆಸಿದಾಗ ವಾರದ ರಜೆ ಸೇರಿದಂತೆ ಎಲ್ಲ ರಜೆಯನ್ನೂ ಶಿವಕುಮಾರ್‌ಗೆ ನೀಡಿರುವುದು ಕಂಡುಬಂದಿದೆ. ಇಲಾಖೆ ಶಿಸ್ತು ಹಾಗೂ ಕಾರ್ಯ ವ್ಯಾಪ್ತಿ ಮೀರಿ ಕೆಲಸ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.

‘ವಿಜಯ್‌ ರಾಥೋಡ್‌ ಅವರು ಇನ್‌ಸ್ಪೆಕ್ಟರ್‌ ಅವರ ವಿರುದ್ಧ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಅವಹೇಳನಕಾರಿಯಾಗಿ ಸಂದೇಶ ಕಳುಹಿಸಿ ಅಶಿಸ್ತು ತೋರಿದ್ದಾರೆ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

ವಿಜಯ್‌ ರಾಥೋಡ್‌ ಠಾಣೆಯ ಮಹಿಳಾ ಸಿಬ್ಬಂದಿ ಹಾಗೂ ಫೋಕ್ಸೊ ಕಾಯ್ದೆ ಅಡಿ ದೂರು ನೀಡಲು ಬಂದವರಿಗೆ ಕಿರುಕುಳ ನೀಡಿದ್ದ ಆರೋಪದಡಿ ಈ ಹಿಂದೆ ಅಮಾನತುಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT