ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ಲ್ಯಾಬ್‌ಗೆ ಇನ್ಫೊಸಿಸ್‌ ನೆರವು

Last Updated 3 ಅಕ್ಟೋಬರ್ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸೈಬರ್‌ ಲ್ಯಾಬ್‌ ಹಾಗೂ ತರಬೇತಿ ಕೇಂದ್ರ (ಸಿಸಿಐಟಿಆರ್‌) ಸ್ಥಾಪನೆ ಸಂಬಂಧ ಇನ್ಫೊಸಿಸ್‌ ಪ್ರತಿಷ್ಠಾನವು ಪೊಲೀಸ್‌ ಇಲಾಖೆಯ ಸಿಐಡಿ ಹಾಗೂ ಡೇಟಾ ಸೆಕ್ಯುರಿಟಿ ಕೌನ್ಸಿಲ್‌ ಆಫ್‌ ಇಂಡಿಯಾದ (ಡಿಎಸ್‌ಸಿಐ) ಜತೆಗೆ ಒಪ್ಪಂದ ಮಾಡಿಕೊಂಡಿದೆ.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ಕೇಂದ್ರಕ್ಕೆ ₹22 ಕೋಟಿ ವೆಚ್ಚವಾಗಲಿದೆ. ಕೆಲವು ತಿಂಗಳುಗಳಲ್ಲಿ ಕೇಂದ್ರ ಸ್ಥಾಪನೆಯಾಗಲಿದೆ.

ಡಿಎಸ್‍ಸಿಐ ಭಾರತದಲ್ಲಿ ಡೇಟಾ ಭದ್ರತೆಗಾಗಿ ಸ್ಥಾಪನೆಯಾಗಿರುವ ಸರ್ಕಾರಿ ಸಂಸ್ಥೆ. ಇದು ಸೈಬರ್ ಭದ್ರತೆ ಹಾಗೂ ಗೋಪ್ಯತೆ ವಿಚಾರವಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಸೈಬರ್‌ ತಾಣಗಳು ಅತ್ಯಂತ ಸುರಕ್ಷಿತ, ಸುಭದ್ರ ಹಾಗೂ ವಿಶ್ವಾಸಾರ್ಹವಾಗಿ ಇರುವಂತೆ ನೋಡಿಕೊಳ್ಳುತ್ತಿದೆ. ರಾಜ್ಯ ಪೊಲೀಸ್ ಜತೆಗಿನ ಸಹಭಾಗಿತ್ವದ ಮೂಲಕ ನಗರದಲ್ಲಿ ಕೇಂದ್ರ ಸ್ಥಾಪನೆಗೆ ಡಿಎಸ್‍ಸಿಐ ಪ್ರಸ್ತಾವ ಇಟ್ಟಿತ್ತು.

ಪೊಲೀಸ್, ಸರ್ಕಾರಿ ವಕೀಲರು, ನ್ಯಾಯಾಂಗ ಹಾಗೂ ಬೇರೆ ಇಲಾಖೆಗಳ ಸಿಬ್ಬಂದಿಗೆ ಸೈಬರ್ ಅಪರಾಧಗಳ ತನಿಖೆಗೆ ವ್ಯವಸ್ಥಿತ ವಿಧಾನ ಅನುಸರಿಸುವ ಕುರಿತು ತರಬೇತಿ ನೀಡಲಾಗುತ್ತದೆ. ಜತೆಗೆ, ಡಿಜಿಟಲ್ ಫೊರೆನ್ಸಿಕ್ ಹಾಗೂ ಸೈಬರ್ ಅಪರಾಧದ ಸಂಶೋಧನೆಗೂ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಸೈಬರ್ ಅಪರಾಧ ಪ್ರಕರಣಗಳ ನ್ಯಾಯಾಂಗ ವಿಚಾರಣೆ ವೇಳೆ ಪ್ರಖರ ವಾದ ಮಂಡಿಸಲು ಸಾಧ್ಯವಾಗಲಿದೆ.

‘ಸೈಬರ್ ಲ್ಯಾಬ್ ನಿರ್ಮಿಸಲು ಇನ್ಫೊಸಿಸ್‌ ಮುಂದೆ ಬಂದಿರುವುದು ಇತರ ಕಾರ್ಪೊರೇಟ್ ಕಂಪನಿಗಳಿಗೆ ಮಾದರಿ’ ಎಂದು ಪರಮೇಶ್ವರ ತಿಳಿಸಿದರು. ಸುಧಾಮೂರ್ತಿ, ‘ಸೈಬರ್ ಹಾಗೂ ಫೊರೆನ್ಸಿಕ್ ಅಪರಾಧಗಳ ತನಿಖೆಗೆ ಉತ್ಕೃಷ್ಟ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ’ ಎಂದರು.

ಚಟುವಟಿಕೆಗಳು

* ಡಿಜಿಟಲ್‌ ಫೊರೆನ್ಸಿಕ್‌ಗೆ ಸಂಪನ್ಮೂಲ ಕೇಂದ್ರ

* ಫೊರೆನ್ಸಿಕ್‌ ತನಿಖೆಗೆ ನೆರವು

* ಸಂಶೋಧನೆ ಮತ್ತು ಅಭಿವೃದ್ಧಿ

* ಸಿಬ್ಬಂದಿಗೆ ತರಬೇತಿ

* ಕಾನೂನು ಮತ್ತು ನೀತಿ ನಿರೂಪಣೆ ಸಂಶೋಧನಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT