ರಾಜರಾಜೇಶ್ವರಿನಗರ: ಮಾಗಡಿ ರಸ್ತೆ ಬಳಿಯ ಉಲ್ಲಾಳು ಗ್ರಾಮದಲ್ಲಿ ಮೂರು ಎಕರೆ ಪ್ರದೇಶದಲ್ಲಿ ₹ 89 ಕೋಟಿ ವೆಚ್ಚದ 250 ಹಾಸಿಗೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿಯನ್ನು ಶಾಸಕ ಎಸ್.ಟಿ. ಸೋಮಶೇಖರ್ ಪರಿಶೀಲನೆ ನಡೆಸಿದರು.
ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ನಡೆಯುತ್ತಿರುವ ಎ, ಬಿ, ಸಿ ಮೂರು ಬ್ಲಾಕ್‍ಗಳ ಕಟ್ಟಡದಲ್ಲಿ ಪಾರ್ಕಿಂಗ್, ನೆಲ, ಮೂರು ಅಂತಸ್ತು ಮಹಡಿಗಳು ಬರಲಿವೆ. ಮೊದಲ ಮತ್ತು ಎರಡನೇ ಬ್ಲಾಕ್ ಕಾಮಗಾರಿ ಪ್ರಗತಿಯಲ್ಲಿದ್ದು ಮೂರನೇ ಬ್ಲಾಕ್ ಕಾಮಗಾರಿಯು ವೇಗವಾಗಿ ನಡೆಯಬೇಕು. ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಅತ್ಯಾಧುನಿಕ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತಲೆ ಎತ್ತಲಿದೆ. ಎಲ್ಲ ವಿಧದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಎಲ್ಲ ಕಾಯಿಲೆಗಳಿಗೆ ಔಷಧ ಇಲ್ಲಿ ದೊರೆಯಲಿದೆ. ಅಪಘಾತ, ಹೃದಯಾಘಾತ, ತುರ್ತು ಹೆರಿಗೆಗೆ ನಗರದ ದೊಡ್ಡ ಆಸ್ಪತ್ರೆಗಳಿಗೆ ತೆರಳಲು ಸಂಚಾರದಟ್ಟಣೆಯಿಂದ ವಿಳಂಬವಾಗಿ ರೋಗಿಗಳು ಪರದಾಡುವಂತಾಗುತ್ತಿತ್ತು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾದರೆ ಈ ತೊಂದರೆ ತಪ್ಪಲಿದೆ. ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆಗಳ ಕಡೆಯಿಂದ ಕೆಲವೇ ನಿಮಿಷದಲ್ಲಿ ಆಸ್ಪತ್ರೆಗೆ ಬರಬಹುದು. ಯಶವಂತಪುರ, ಆರ್.ಆರ್.ನಗರ, ಮಾಗಡಿ, ರಾಮನಗರ ಕ್ಷೇತ್ರದ ಜನರಿಗೆ ಅನುಕೂಲವಾಗಲಿದೆ ಎಂದರು.
ಆರೋಗ್ಯ ಇಲಾಖೆಯ ಪ್ರಧಾನ ವ್ಯವಸ್ಥಾಪಕ ಸತ್ಯನಾರಾಯಣ, ನಗರ ಯೋಜನೆ ವ್ಯವಸ್ಥಾಪಕ ವೆಂಕಟೇಶ್, ಬೆಂಗಳೂರು ಉತ್ತರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಅನಿಲ್‍ಕುಮಾರ್, ಮುಖಂಡರಾದ ಮಹೇಂದ್ರಕಿರಣ್, ಕೇಬಲ್ ಹರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.