ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 10 ಮೀಸಲಾತಿ: ಸಮಾನತೆ ಸಾಧ್ಯವೇ?: ಸಿದ್ದರಾಮಯ್ಯ ಪ್ರಶ್ನೆ

ಪುಸ್ತಕ ಬಿಡುಗಡೆ ಕಾರ್ಯಕ್ರಮ
Last Updated 17 ನವೆಂಬರ್ 2022, 20:05 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ‘ರಾಜ್ಯದಲ್ಲಿ ಶೇ 3ರಷ್ಟಿರುವ ಸಾಮಾನ್ಯ ವರ್ಗದ ಜನರಿಗೆ ಶೇ 10 ಮೀಸಲಾತಿ ಬೇಕೆ? ಶೇ 52ರಷ್ಟು ಜನರಿಗೆ ಶೇ 27 ಮೀಸಲಾತಿ ನೀಡಿದರೆ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯವೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಎಸ್. ಶಿವಮಲ್ಲು ರಚಿಸಿರುವ ‘ಪ್ರಜಾಪ್ರಭುತ್ವದ ಬಲವರ್ಧನೆ’ ಕುರಿತ ಪುಸ್ತಕವನ್ನು ಡಾ.ಬಿ.ಆರ್.‌ ಅಂಬೇಡ್ಕರ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಗುರುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಯಾವ ವರ್ಗದ ಜನರಿಗೆ ಶತಶತಮಾನಗಳ ಕಾಲ ಓದಲು, ಸಂಪತ್ತು ಅನುಭವಿಸಲು ಅವಕಾಶ ಇತ್ತೋ, ಅಂಥವರಿಗೆ ಮೀಸಲಾತಿ ನೀಡುವುದು ಸರಿಯೇ? ಅಂಬೇಡ್ಕರ್‌ ರಚಿಸಿರುವ ಸಂವಿಧಾನದ ಆಶಯ ಇದರಿಂದ ಈಡೇರುತ್ತದೆಯೇ?’ ಎಂದೂ ಕೇಳಿದರು.

‘ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದು ಸರಿಯೇ? ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಏನು ಹೇಳಿದೆ? ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ನೀಡುವ ಶೇ 10 ಮೀಸಲಾತಿಯಲ್ಲಿ ಹಿಂದುಳಿದ, ದಲಿತ ಸಮುದಾಯದ ಬಡವರಿಗೆ ಸೌಲಭ್ಯ ಸಿಗುವುದಿಲ್ಲ. ಆದರೂ ನಾವೆಲ್ಲ ಸುಮ್ಮನೆ ಇದ್ದೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಡ್ತಿಯಲ್ಲಿ ಮೀಸಲಾ ತಿಗೆ ಕಾನೂನು ಮಾಡಿದ್ದೆ. ಕರ್ನಾಟಕ ಬಿಟ್ಟರೆ ಬೇರೆ ಯಾವುದೇ ರಾಜ್ಯದಲ್ಲಿ ಇಂತಹ ಕಾನೂನು ಇಲ್ಲ. ಆದರೂ ಜನ ಮೋದಿ, ಮೋದಿ ಎನ್ನುತ್ತಾರೆ. ದುರ್ಬಲರು, ಅವಕಾಶವಂಚಿತ ಜನರು ಬಿಜೆಪಿ ಸೇರಿಕೊಂಡರೆ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಅಸಮಾನತೆ ನಿರ್ಮಾಣವಾಗಿರುವ ಕಡೆ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯವಿಲ್ಲ’ ಎಂದೂ ಅಭಿಪ್ರಾಯಪಟ್ಟರು.

‘ಸಂಘ ಪರಿವಾರದವರು ಸಂವಿಧಾನ, ಪ್ರಜಾಪ್ರಭುತ್ವವನ್ನು ಇಂದಿಗೂ ಒಪ್ಪಿಲ್ಲ. ದುರ್ಬಲರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗಿದೆ. ಒಂದು ಭಾಷೆ, ಒಬ್ಬ ನಾಯಕ, ಒಂದು ಧರ್ಮದ ಮೇಲೆ ಆರೆಸ್ಸೆಸ್‌ ನಂಬಿಕೆ ಇಟ್ಟುಕೊಂಡಿದೆ’ ಎಂದು ಆರೋಪಿಸಿದರು.

ಶಾಸಕ ಕೆ.ಆರ್. ರಮೇಶ್‍ಕುಮಾರ್ ಮಾತನಾಡಿ,‌ ‘ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ನ್ಯಾಯಾಲಯ, ಸ್ವಯಂಸಂಸ್ಥೆಗಳನ್ನು ದಾರಿ ತಪ್ಪಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮತದಾರರು ಜಾಗೃತರಾಗಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವವರಿಗೆ ತಮ್ಮ ಮತ ಹಾಕ ದಿರುವ ಮೂಲಕ ಬುದ್ಧಿ ಕಲಿಸಿದಾಗ ಪ್ರಜಾಪ್ರಭುತ್ವ ಉಳಿಯು ತ್ತದೆ’ ಎಂದು ಪುಸ್ತಕದ ಕತೃ ಎಸ್. ಶಿವಮಲ್ಲು ಹೇಳಿದರು.

ಕಾಂಗ್ರೆಸ್‌ ಮುಖಂಡ ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್, ರಾಜರಾಜೇಶ್ವರಿನಗರ ಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಪಾಂಚಜನ್ಯ ವಿದ್ಯಾಪೀಠದ ಅಧ್ಯಕ್ಷ ಎಸ್. ಮರಿಸ್ವಾಮಿ, ಬಿ.ಎನ್. ಉಮೇಶ್, ಎಂ.ಮಹದೇವ್, ವಿಮಲಾ ಶಿವಮಲ್ಲು, ಸಾಹಿತಿ ಹುಲಿಕುಂಟೆ ಮೂರ್ತಿ, ಸುಕೇಂದ್ರ ಕುಮಾರ್ ಇದ್ದರು.

ಪುಸ್ತಕ ಪರಿಚಯ
ಪುಸ್ತಕ: ‘ಪ್ರಜಾಪ್ರಭುತ್ವದಬಲವರ್ಧನೆ’
ಲೇಖಕ: ಎಸ್. ಶಿವಮಲ್ಲು
ಪ್ರಕಾಶನ: ಸ್ವಪ್ನಾ ಬುಕ್‌ ಹೌಸ್‌
ಬೆಲೆ: ₹ 250
ಪುಟಗಳು: 330

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT