ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಇಲಾಖೆ ಜಾಲತಾಣ ನ್ಯೂನ್ಯತೆ: ₹ 1.41 ಕೋಟಿ ಅಕ್ರಮ!

ಆದಾಯ ತೆರಿಗೆ ಇಲಾಖೆ ಜಾಲತಾಣ ದುರುಪಯೋಗ * ಧಾರವಾಡದಲ್ಲಿ ಬಿ.ಇ ಪದವೀಧರ ಬಂಧನ
Published 15 ಮೇ 2023, 20:46 IST
Last Updated 15 ಮೇ 2023, 20:46 IST
ಅಕ್ಷರ ಗಾತ್ರ

ಬೆಂಗಳೂರು: ಅಸಲಿ ಆದಾಯ ತೆರಿಗೆದಾರರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರಿಗೆ ಮರು ಪಾವತಿಯಾಗಬೇಕಿದ್ದ ₹ 1.41 ಕೋಟಿ ಹಣವನ್ನು ತನ್ನದಾಗಿಸಿಕೊಂಡು ವಂಚಿಸಿದ್ದ ಆರೋಪಿ ದಿಲೀಪ್ ರಾಜೇಗೌಡ ಎಂಬುವವರನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

‘ಹಾಸನ ಜಿಲ್ಲೆಯ ಹಿರೀಸಾವೆಯ ದಿಲೀಪ್, ಮೆಕ್ಯಾನಿಕಲ್ ಬಿ.ಇ ಪದವೀಧರ. ಸೈಬರ್ ವಂಚನೆ ಮೂಲಕ ಅಕ್ರಮವಾಗಿ ಸಂಪಾದನೆ ಮಾಡಿ, ಐಷಾರಾಮಿ ಜೀವನ ನಡೆಸುತ್ತಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಉದ್ಯಮಿಯೊಬ್ಬರು ತಮ್ಮ ವ್ಯವಹಾರದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯ ಜಾಲತಾಣದಲ್ಲಿ ನಮೂದಿಸಿದ್ದರು. ತೆರಿಗೆ ಮರುಪಾವತಿಗಾಗಿ ಹಲವು ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದರು. ಅದಕ್ಕಾಗಿ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಬಳಸಿದ್ದರು. ಉದ್ಯಮಿ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ ಆರೋಪಿ, ಅವರಿಗೆ ಮರು ಪಾವತಿಯಾಗಬೇಕಿದ್ದ ₹ 1.41 ಕೋಟಿಯನ್ನು ತನ್ನದಾಗಿಸಿಕೊಂಡಿದ್ದ.’

‘ಆರೋಪಿ ಕೃತ್ಯದ ಬಗ್ಗೆ ಉದ್ಯಮಿಯು ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿ ಸುಳಿವು ಸಿಕ್ಕಿತ್ತು. ಧಾರವಾಡಕ್ಕೆ ಇತ್ತೀಚೆಗೆ ಹೋಗಿದ್ದ ವಿಶೇಷ ತಂಡ, ಆರೋಪಿ ದಿಲೀಪ್‌ನನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಜಾಲತಾಣದಲ್ಲಿ ನ್ಯೂನ್ಯತೆ: ‘ಆದಾಯ ತೆರಿಗೆ ಇಲಾಖೆಯ ಜಾಲತಾಣದಲ್ಲಿ ಕೆಲ ತಾಂತ್ರಿಕ ನ್ಯೂನ್ಯತೆಗಳಿವೆ. ಅವುಗಳನ್ನು ತಿಳಿದುಕೊಂಡಿದ್ದ ಆರೋಪಿ ದಿಲೀಪ್, ಅಕ್ರಮದ ಮೂಲಕ ಉದ್ಯಮಿ ಹೆಸರಿನಲ್ಲಿ ಜಾಲತಾಣದಲ್ಲಿ ಲಾಗ್‌–ಇನ್ ಆಗಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಅಸಲಿ ತೆರಿಗೆದಾರರ ಬ್ಯಾಂಕ್ ಖಾತೆ ಹಾಗೂ ಮರು ಪಾವತಿ ವಿವರವನ್ನು ಆರೋಪಿ ಮಾರ್ಪಾಡು ಮಾಡಿದ್ದ. ನಿಗದಿತ ದಿನದಂದು ಮರು ಪಾವತಿ ಹಣವೆಲ್ಲ ಆರೋಪಿಯ ನಕಲಿ ಖಾತೆಗೆ ಜಮೆ ಆಗಿತ್ತು. ಕೆಲ ದಿನಗಳ ನಂತರ ವಂಚನೆ ಕೃತ್ಯ ಅಸಲಿ ತೆರಿಗೆದಾರರ ಗಮನಕ್ಕೆ ಬಂದಿತ್ತು’ ಎಂದು ತಿಳಿಸಿವೆ.

ಆರು ಪ್ರಕರಣಗಳಲ್ಲಿ ₹ 3.60 ಕೋಟಿ ವಂಚನೆ: ‘ಆದಾಯ ತೆರಿಗೆ ಮರು ಪಾವತಿ ವಂಚನೆ ಮಾತ್ರವಲ್ಲದೇ, ಹಲವು ಕೃತ್ಯಗಳಲ್ಲಿ ಆರೋಪಿ ದಿಲೀಪ್ ಭಾಗಿಯಾಗಿದ್ದ. ಆರು ಪ್ರಕರಣಗಳಲ್ಲಿ ₹ 3.60 ಕೋಟಿ ವಂಚನೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಬ್ಯಾಂಕ್‌ಗಳಿಂದ ಸಾಲ ಪಡೆದು ವಂಚಿಸಿರುವ ಆರೋಪ ಸಹ ದಿಲೀಪ್‌ ಮೇಲಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನಡೆದಿರುವ ಹಲವು ಸೈಬರ್ ಅಪರಾಧಗಳಲ್ಲಿ ಈತ ಭಾಗಿಯಾಗಿರುವ ಅನುಮಾನವಿದೆ. ಈತನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT