ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ ವಿಧಾನಸಭಾ ಕ್ಷೇತ್ರ | ಹೊಸ ಬಡಾವಣೆ–ಹಲವು ಸಮಸ್ಯೆ: ಹೊಸ ಭರವಸೆ

ಅಹವಾಲು ತೋಡಿಕೊಂಡ ಜನತೆ: ಸಚಿವ ಎಸ್.ಟಿ.ಸೋಮಶೇಖರ್ ಸಮರ್ಪಕ ಉತ್ತರ
Last Updated 21 ಮೇ 2022, 19:11 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಶ್ಚಿಮದ ಅಂಚಿನಲ್ಲಿ ಚಾಚಿಕೊಂಡಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಹಳ್ಳಿಗಳು ನಗರವಾಗಿ ರೂಪಾಂತರಗೊಳ್ಳುತ್ತಿರುವ ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಬಡಾವಣೆಗಳು ಹೊಸ ಹೊಸ ಸಮಸ್ಯೆಗಳನ್ನು ಎದುರಿಸುತ್ತಿವೆ. ಇವುಗಳು ಶೀಘ್ರದಲ್ಲೇ ಬಗೆಹರಿಯುವ ಭರವಸೆ ಇಲ್ಲಿನ ನಿವಾಸಿಗಳಲ್ಲಿ ಮೂಡಿದೆ.

ಇಂತಹದ್ದೊಂದು ಆಶಾಕಿರಣ ಮೂಡಲು ಕಾರಣವಾಗಿದ್ದು, ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಶನಿವಾರ ಆಯೋಜಿಸಿದ್ದ ‘ಜನಸ್ಪಂದನ’ ಕಾರ್ಯಕ್ರಮ. ಜನರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಕ್ಷೇತ್ರದ ಶಾಸಕರೂ ಆಗಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೆಲವನ್ನು ಸ್ಥಳದಲ್ಲೇ ಬಗೆಹರಿಸುವ ಪ್ರಯತ್ನ ಮಾಡಿದರು.

ತುಮಕೂರು ರಸ್ತೆಯ ದೊಡ್ಡಬಿದರಕಲ್ಲಿನಿಂದ ಆರಂಭವಾಗುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ, ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ, ಹೆಮ್ಮಿಗೆಪುರ ಅಲ್ಲದೇ ರಾಮೋಹಳ್ಳಿ, ಸೂಲಿಕೆರೆ ಸೇರಿ ಹಲವು ಗ್ರಾಮ ಪಂಚಾಯಿತಿಗಳ ನಿವಾಸಿಗಳು ಸಮಸ್ಯೆಗಳನ್ನು ಹೇಳಿಕೊಂಡರು.

ಬಿಡಿಎ ಅಭಿವೃದ್ಧಿಪಡಿಸಿರುವ ಬಡಾವಣೆಗಳ ಹಾಗೂ ಖಾಸಗಿ ಬಡಾವಣೆಗಳಲ್ಲಿ ಮೂಲಸೌಕರ್ಯ ಕೊರತೆ ಬಗ್ಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು ಗಮನ ಸೆಳೆದರು. ಬನಶಂಕರಿ 6ನೇ ಹಂತ, ನಾಡಪ್ರಭು ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡವಣೆ, ಸಪ್ತಗಿರಿ ಬಡಾವಣೆ, ಕದಂಬ ಬಡಾವಣೆ, ಮುನೇಶ್ವರ ಬಡಾವಣೆ, ಕ್ಲಾಸಿಕ್ ಕೌಂಟಿ, ಗ್ರೀನ್ ವ್ಯಾಲಿ ಟೌನ್‌ಶಿಪ್, ಮಾತೃಶ್ರೀ ಬಡಾವಣೆಗಳಲ್ಲಿನ ಮೂಲಸೌಕರ್ಯದ ಸಮಸ್ಯೆಗಳ ಬಗ್ಗೆ ನಿವಾಸಿಗಳು ಬೆಳಕು ಚೆಲ್ಲಿದರು.

ಬಿಡಿಎ ಅಭಿವೃದ್ಧಿಪಡಿಸಿರುವ ವಲಗೇರಹಳ್ಳಿ ವಸತಿ ಸಮುಚ್ಚಯದಲ್ಲಿ ನೀರು ಮತ್ತು ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವಂತೆ ನಿವಾಸಿಗಳು ಕೋರಿದರು. ಏಜೀಸ್ ಬಡಾವಣೆಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಸೌಕರ್ಯ ಇಲ್ಲದಿರುವುದು, ತಿಪ್ಪೇನಹಳ್ಳಿ ಬಳಿಯ ಕಸ ಸಂಸ್ಕರಣಾ ಘಟಕದಿಂದ ಉಂಟಾಗಿರುವ ಅನಾರೋಗ್ಯಕರ ವಾತಾವರಣ, ಕೆಂಗೇರಿ ಉಪನಗರದಿಂದ ಉಲ್ಲಾಳು ಮಾರ್ಗದಲ್ಲಿ ಮಾಗಡಿ ರಸ್ತೆ ಸಂಪರ್ಕಿಸುವ 80 ಅಡಿ ರಸ್ತೆ ಹಾಳಾಗಿರುವುದು, ಮಾಗಡಿ ರಸ್ತೆ ಡಾಂಬರೀಕರಣಗೊಳ್ಳದ ಕಾರಣ ಆಗುತ್ತಿರುವ ಬವಣೆಗಳನ್ನೂ ಬಿಚ್ಚಿಟ್ಟರು.

ಎಲ್ಲ ಸಮಸ್ಯೆಗಳನ್ನು ಅತ್ಯಂತ ಸಹನೆಯಿಂದ ಆಲಿಸಿದ ಸಚಿವ ಎಸ್‌.ಟಿ.ಸೋಮಶೇಖರ್, ‘ಬಿಡಿಎ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿನ ಮೂಲಸೌಕರ್ಯ ಕೊರತೆ ಬಗ್ಗೆ ಸಂಪೂರ್ಣ ಅರಿವಿದೆ. ಅಭಿವೃದ್ಧಿ ಕೈಗೆತ್ತಿಕೊಳ್ಳಲು ಬಿಡಿಎ ಈ ಬಾರಿ ಅನುದಾನ ಮೀಸಲಿಟ್ಟಿದೆ. ಹಂತ–ಹಂತವಾಗಿ ಸಮಸ್ಯೆಗಳು ಬಗೆಹರಿಯಲಿವೆ’ ಎಂದು ಭರವಸೆ ನೀಡಿದರು.

‘ಬಿಬಿಎಂಪಿಗೆ ಸೇರ್ಪಡೆಯಾಗಿರುವ ಹಳ್ಳಿಗಳಿಗೆ ಕಾವೇರಿ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ಎರಡು ತಿಂಗಳಲ್ಲಿ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ಮಾಗಡಿ ರಸ್ತೆಯಲ್ಲಿ ಮೆಟ್ರೊ ರೈಲು ಮಾರ್ಗ ನಿರ್ಮಾಣಗೊಳ್ಳಲಿದ್ದು, ಈಗ ಡಾಂಬರ್ ಹಾಕಿದರೆ ಮತ್ತೆ ಹಾಳಾಗಲಿದೆ. ಆದ್ದರಿಂದ ದುರಸ್ತಿ ಕಾಮಗಾರಿ ನಿರ್ವಹಿಸಲಾಗಿದೆ’ ಎಂದು ಸಮಜಾಯಿಷಿ ಹೇಳಿದರು.

ಬಿಡಿಎ, ಬಿಬಿಎಂಪಿ, ಜಲಮಂಡಳಿ, ಬಿಎಂಟಿಸಿ ಬೆಸ್ಕಾಂಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಖುದ್ದು ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದೂ ಸಚಿವರು ಸೂಚಿಸಿದರು.

‘ಜನರ ಎಲ್ಲ ಅಹವಾಲುಗಳನ್ನು ಪಡೆದುಕೊಂಡಿದ್ದೇವೆ. ಅವುಗಳನ್ನು ಪರಿಶೀಲಿಸಿ ಸ್ಥಳಕ್ಕೆ ಹೋಗಿ ಸ್ಥಳೀಯರ ಜತೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಈ ರೀತಿಯ ಕಾರ್ಯಕ್ರಮ ಆಯೋಜಿಸುವ ಮೂಲಕ ಜನ, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಡುವೆ ಸೇತುವೆಯಾದ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ಗೆ ಧನ್ಯವಾದ’ ಎಂದೂ ಸಚಿವರು ಹೇಳಿದರು.

₹402 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ

‘ಕ್ಷೇತ್ರ ವ್ಯಾಪ್ತಿಯ ರಸ್ತೆ ದುರಸ್ತಿಗೆ ₹402 ಕೋಟಿ ಅನುದಾನವನ್ನು ಸರ್ಕಾರ ನೀಡಿದೆ’ ಎಂದು ಎಸ್‌.ಟಿ.ಸೋಮಶೇಖರ್ ಹೇಳಿದರು.

‘ರಾಜಕಾಲುವೆ ಅಭಿವೃದ್ಧಿಗೆ ₹110 ಕೋಟಿ, ಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹44 ಕೋಟಿ ಅನುದಾನ ತಂದಿದ್ದೇನೆ. ಮಳೆ ಬೀಡುವ ನೀಡಿದರೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ’ ಎಂದರು.

‘ನಮ್ಮ ಕ್ಷೇತ್ರದ ನಾಲ್ಕು ವಾರ್ಡ್‌ಗಳು ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದವುಗಳೇ ಆಗಿವೆ. ಅಲ್ಲಿ ಕಾವೇರಿ ನೀರು ಮತ್ತು ಒಳಚರಂಡಿ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು 10 ಕಿ.ಮೀ. ಮಾತ್ರ ಕಾಮಗಾರಿ ಬಾಕಿ ಇದ್ದು, ಪೂರ್ಣಗೊಂಡರೆ ನೀರು ಮತ್ತು ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಮಳೆ ಬಂದಿದ್ದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ’ ಎಂದು ಹೇಳಿದರು.

ಕಾವೇರಿ 4ನೇ ಹಂತದ ಯೋಜನೆಗೆ ಮುಖ್ಯ ಕೊಳವೆ ಮಾರ್ಗವೂ ಕ್ಷೇತ್ರದಲ್ಲಿ ಹಾದುಹೋಗುತ್ತಿದ್ದು, ಕೆಂಗೇರಿ–ಉಲ್ಲಾಳು ಮುಖ್ಯ ರಸ್ತೆ ಡಾಂಬರ್ ಹಾಕಲು ಸಾಧ್ಯವಾಗದೆ ತೊಂದರೆಯಾಗಿದೆ. ಕಾಮಗಾರಿ ಪೂರ್ಣಗೊಂಡ ಕೂಡಲೇ ರಸ್ತೆ ಅಭಿವೃದ್ಧಿ ಆಗಲಿದೆ ಎಂದರು.

‘ವಿಶ್ವೇಶ್ವರಯ್ಯ ಬಡಾವಣೆ ಮೂಲಸೌಕರ್ಯಕ್ಕೆ ಬೇಕಿರುವ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಬನಶಂಕರಿ 6ನೇ ಹಂತ ಬಿಬಿಎಂಪಿಗೆ ಹಸ್ತಾಂತರ ಆಗಬೇಕಿದ್ದು, ಅದಕ್ಕೆ ಬೇಕಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮೂರು ಎಕರೆ ಜಾಗದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಲು ತಯಾರಿ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ಮಂಚನಬೆಲೆಯಿಂದ 61 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ₹169 ಕೋಟಿ ಮೊತ್ತದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದು ಪೂರ್ಣಗೊಂಡರೆ ಮನೆ ಮನೆಗೆ ನೀರು ತಲುಪಲಿದೆ. 102 ಕೆರೆಗಳಿಗೆ ನೀರು ಹರಿಯಲಿದೆ ಎಂದರು.

ಕೆಂಗೇರಿ ಮತ್ತು ಉಲ್ಲಾಳ ವಾರ್ಡ್‌ಗಳನ್ನು ಮಾದಕ ವಸ್ತು ಮುಕ್ತ ಮಾಡಲು ಪೊಲೀಸರು ದಿಟ್ಟ ಕ್ರಮ ಕೈಗೊಂಡಿದ್ದಾರೆ. 20ರಿಂದ 30 ಪ್ರಕರಣಗಳನ್ನು ದಾಖಲಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ
ವ್ಯಕ್ತಪಡಿಸಿದರು.

ಹಲವು ಅಹವಾಲು: ಸ್ಥಳದಲ್ಲೇ ಪರಿಹಾರ

ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರಸ್ತಾಪವಾದ ಆಯ್ದ ಕೆಲವು ಅಹವಾಲುಗಳ ವಿವರ ಇಲ್ಲಿದೆ.

ನಮ್ಮ ಬಡಾವಣೆಯಲ್ಲಿ ಖಾಸಗಿ ಕಂಪನಿ ಪಕ್ಕದಲ್ಲಿ ಚರಂಡಿ ಕಿರಿದುಗೊಳಿಸಿದೆ. ಇದರಿಂದ ಪ್ರವಾಹ ಉಂಟಾಗುತ್ತಿದೆ. ಚರಂಡಿ ತಡೆಗೋಡೆ ಎತ್ತರಿಸುವ ಜತೆಗೆ ಒತ್ತುವರಿ ತೆರವು ಮಾಡಬೇಕು.

-ಅವಿನಾಶ್, ಭವಾನಿನಗರ

ಸಚಿವ ಎಸ್‌.ಟಿ.ಸೋಮಶೇಖರ್: ರಾಜಕಾಲುವೆ ವಿಸ್ತರಿಸಲು ಖಾಸಗಿ ಕಂಪನಿ ಒಪ್ಪುತ್ತಿಲ್ಲ. ಸದ್ಯದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇದೆ. ಅವರನ್ನೇ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸುತ್ತೇನೆ.

ಒಂಟಿ ಮನೆ ಯೋಜನೆ ಪ್ರಯೋಜನ ಪಡೆಯಲು ಹಲವು ವರ್ಷಗಳಿಂದ ಜನ ಕಾದಿದ್ದಾರೆ. ಅದಕ್ಕೆ ಬೇಕಿರುವ ಅನುದಾನ ಬಿಡುಗಡೆ ಮಾಡಿಸಬೇಕು.

-ಭಾಗ್ಯಲಕ್ಷ್ಮಿ, ದೊಡ್ಡಬಿದರಕಲ್ಲು

ಬಿಬಿಎಂಪಿ ಅಧಿಕಾರಿ: ಲೋಕಾಯುಕ್ತ ತನಿಖೆ ನಡೆಯುತ್ತಿದ್ದುದರಿಂದ ಯೋಜನೆ ಅನುಷ್ಠಾನ ವಿಳಂಬವಾಗಿತ್ತು. 15 ದಿನಗಳಲ್ಲಿ ಯೋಜನೆ ಪ್ರಯೋಜನವು ಫಲಾನುಭವಿಗಳಿಗೆ ದೊರಕಲಿದೆ.

ಒಳಚರಂಡಿ, ವಿದ್ಯುಚ್ಛಕ್ತಿ, ಬಸ್ ವ್ಯವಸ್ಥೆ ಸಮರ್ಪಕವಾಗಿಲ್ಲ, ಸಮಸ್ಯೆ ಪರಿಹರಿಸಬೇಕು.

-ಸಿದ್ದಗಂಗಪ್ಪ, ಗಂಗೋತ್ರಿನಗರ

ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳು: ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಸಮಸ್ಯೆಗಳನ್ನೂ ಕೂಡಲೇ ಬಗೆಹರಿಸುತ್ತೇವೆ.

ನಮ್ಮ ಬಡಾವಣೆಯ ರಸ್ತೆ ಎರಡು ವರ್ಷಗಳಿಂದ ಹಾಳಾಗಿದ್ದು, ರಸ್ತೆ ಗುಂಡಿಗೆ ಬಿದ್ದು ಹಲವರು ತೊಂದರೆ ಅನುಭವಿಸಿದ್ದಾರೆ.

--ಎ.ಆರ್.ಸುಂದರೇಶ್, ರಾಜರಾಜೇಶ್ವರಿ ಬಡಾವಣೆ

ಅಧಿಕಾರಿ: ರಸ್ತೆ ಗುಂಡಿ ಮುಚ್ಚಲು ಅನುದಾನ ಈಗ ಬಂದಿದ್ದು, ಕೂಡಲೇ ಕಾಮಗಾರಿ ಆರಂಭಿಸಲಾಗುವುದು.

ಎರಡರಿಂದ ಐದು ನಿಮಿಷ ಮಳೆ ಬಂದರೆ ನಮ್ಮ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ. ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.

-ಪ್ರಭಾಕರ್, ಜ್ಞಾನಭಾರತಿ ಬಡಾವಣೆ

ಸಚಿವ: ನಾನೇ ಖುದ್ದು ನಿಮ್ಮ ಬಡಾವಣೆಗೆ ಭೇಟಿ ನೀಡುತ್ತೇನೆ. ಸ್ಥಳ ಪರಿಶೀಲನೆ ನಡೆಸಲು ಸಮಸ್ಯೆ ಬಗೆಹರಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT