ಶುಕ್ರವಾರ, ಫೆಬ್ರವರಿ 26, 2021
32 °C

ಜೈಲಿನ ಆವರಣದಲ್ಲಿ ಅನಿಲ್‌ರಾಜ್‌ ಆತ್ಮಹತ್ಯೆ: ಸಾವಿನ ಬಗ್ಗೆ ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ, ‘ವಾಯ್ಸ್‌ ಆಫ್‌ ಯಲಹಂಕ’ ಪತ್ರಿಕೆಯ ಸಂಪಾದಕ ಅನಿಲ್‌ ರಾಜ್ (55) ಅವರ ಮೃತದೇಹ ಜೈಲಿನ ಆವರಣದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ.

ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅನಿಲ್ ರಾಜ್, ಯಲಹಂಕ ಮಾರುತಿ ನಗರದ ನಿವಾಸಿ. ಜೈಲಿನ ಆವರಣದಲ್ಲಿರುವ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಿರುವ ಕಬ್ಬಿಣದ ರಾಡ್‍ಗೆ ಅನಿಲ್ ರಾಜ್ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಿಲ್ ರಾಜ್‍ ಅವರನ್ನು ಜೈಲಿನ ಐದನೇ ಬ್ಯಾರಕ್‍ನಲ್ಲಿ ಇಡಲಾಗಿತ್ತು. ಜೈಲಿನಲ್ಲಿ ನಿತ್ಯ ಸಂಜೆ ಏಳು ಗಂಟೆ ಸುಮಾರಿಗೆ ಎಲ್ಲ ಕೈದಿಗಳನ್ನು ಲೆಕ್ಕ ಮಾಡಲಾಗುತ್ತದೆ. ಈ ವೇಳೆ ಅನಿಲ್‍ರಾಜ್ ನಾಪತ್ತೆಯಾಗಿದ್ದರು. ತಕ್ಷಣ ಜೈಲು ಸಿಬ್ಬಂದಿ ಹುಡುಕಾಡಿದ್ದು, ಈ ವೇಳೆ ವಿಷಯ ಗೊತ್ತಾಗಿದೆ.

ಅನಿಲ್ ರಾಜ್‍ ದೇಹವನ್ನು ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಜೈಲಿನ ಅಧಿಕಾರಿಯೊಬ್ಬರು ‌ತಿಳಿಸಿದರು.

ಮಂಗಳವಾರ ಮಧ್ಯಾಹ್ನ ಜೈಲಿಗೆ ಪತ್ನಿ ಮತ್ತು ಕುಟುಂಬ ಸದಸ್ಯರು ಬಂದಿದ್ದು, ಕೆಲ ಹೊತ್ತು ಅವರ ಜತೆ ಅನಿಲ್‍ ರಾಜ್‍ ಮಾತುಕತೆ ನಡೆಸಿದ್ದರು. ಈ ವೇಳೆ ಕುಟುಂಬ ಸದಸ್ಯರು ಮತ್ತು ಅನಿಲ್‍ರಾಜ್ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.

ಸಂಜೆ ಏಳು ಗಂಟೆ ಹೊತ್ತಿಗೆ ಅನಿಲ್‌ರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ತಿಳಿಯಲಿದೆ ಎಂದೂ ಅಧಿಕಾರಿ ಮಾಹಿತಿ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್, ‘ಯಲಹಂಕ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಅನಿಲ್ ರಾಜ್ ಮಂಗಳವಾರ ಸಂಜೆ ಜೈಲಿನ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನ್ಯಾಯಾಂಗ ಬಂಧನದಲ್ಲೇ ಮೃತಪಟ್ಟಿರುವುದರಿಂದ ಮ್ಯಾಜಿಸ್ಟ್ರೇಟ್ ಬಂದು ವಿಚಾರಣೆ ನಡೆಸುತ್ತಾರೆ’ ಎಂದರು.

ಅನಿಲ್‌ರಾಜ್‌ ತಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆ. 30ರಂದು ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು