ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ, ಸಾಂಸ್ಕೃತಿಕ ಬಳುವಳಿಯೇ ಶೋಷಣೆ: ಕೆ.ವಿ.ಸ್ಟ್ಯಾನ್ಲಿ

Published 29 ಜುಲೈ 2023, 16:00 IST
Last Updated 29 ಜುಲೈ 2023, 16:00 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸೆ ಹಾಗೂ ಶೋಷಣೆಗಳು ಸಾಮಾಜಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯ ಬಳುವಳಿಗಳು’ ಎಂದು ಮೈಸೂರು ಒಡನಾಡಿ ಸಂಸ್ಥೆ ನಿರ್ದೇಶಕ ಕೆ.ವಿ.ಸ್ಟ್ಯಾನ್ಲಿ ಹೇಳಿದರು.

ಬಯಲು ಬಳಗವು ‘ಮಹಿಳೆ: ವರ್ತಮಾನದ ಶೋಷಣೆ ಮತ್ತು ಹಿಂಸೆ’ ಕುರಿತು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ತಿಂಗಳ ಸಂವಾದ’ದಲ್ಲಿ ಅವರು ಮಾತನಾಡಿದರು.

‘ಆರ್ಥಿಕ ಪ್ರಗತಿ ಹೊಂದಿದ್ದೇವೆಯೇ ಹೊರತು ನಾಗರಿಕತೆ ಇನ್ನೂ ಬೆಳೆದಿಲ್ಲ. ಸಮಾಜ ಇನ್ನೂ ಅನಾಗರಿಕವಾಗಿಯೇ ಇದೆ. ಹಿಂಸೆ ಹಾಗೂ ಶೋಷಣೆಗಳು ಕ್ಯಾನ್ಸರ್‌ ಗಡ್ಡೆಯಾಗಿವೆ. ಸಂಪೂರ್ಣ ನಿರ್ಮೂಲನೆ ಅಸಾಧ್ಯವಾಗಿದೆ’ ಎಂದು ಹೇಳಿದರು.

‘ಎಷ್ಟೇ ಪ್ರತಿರೋಧ ಹಾಗೂ ಚಳವಳಿಗಳು ವ್ಯಕ್ತಪಡಿಸಿದರೂ ಹಿಂಸೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಮಹಿಳೆಯರ ಮೇಲೆ ದಬ್ಬಾಳಿಕೆಗಳು ನಡೆದ ಸಂದರ್ಭದಲ್ಲಿ ಪ್ರತಿರೋಧ, ಪ್ರತಿಭಟನೆಗಳು ನಡೆಯುತ್ತವೆ. ಶೋಷಣೆಗಳು ಶಾಶ್ವತವಾಗಿ ದೂರವಾಗುವಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕಿದೆ. ಸಮಾಜವನ್ನು ಸಂವೇದನಾ ಶೀಲಗೊಳಿಸಬೇಕಿದೆ’ ಎಂದು ಕರೆ ನೀಡಿದರು.

‘ಮಣಿಪುರದಲ್ಲಿ ಬೆತ್ತಲೆಗೊಂಡಿದ್ದು ಮಹಿಳೆಯರು ಅಲ್ಲ. ಬೆತ್ತಲೆಗೊಂಡಿದ್ದು ನಮ್ಮ ವ್ಯವಸ್ಥೆ. 30 ವರ್ಷಗಳಿಂದ ಹೆಣ್ಣುಮಕ್ಕಳ ಪರ ಹೋರಾಟ ನಡೆಸುತ್ತಿದ್ದೇನೆ. ಒಡನಾಡಿಗೆ ಬರುವ ಯಾವ ಹೆಣ್ಣು ಮಗುವೂ ಸಂತೋಷದಿಂದ ಬರುತ್ತಿಲ್ಲ. ಪ್ರತಿಯೊಬ್ಬರ ಕಥೆಯೂ ಕಣ್ಣೀರು ತರಿಸುತ್ತದೆ’ ಎಂದು ಹೇಳಿದರು.

‘ಮನುಷ್ಯ ಜನಿಸಿದ ದಿನದಿಂದಲೇ ಶೋಷಣೆಗಳೂ ಒಟ್ಟಿಗೆ ಬರುತ್ತಿವೆ. ಹಿಂಸೆ, ಶೋಷಣೆಗಳು ಪೂರ್ವಜರ ಕೊಡುಗೆಯಾಗಿವೆ. ನಾಗರಿಕತೆಯ ಸೋಗಿನಲ್ಲಿ ಅನಾಗರಿಕತೆ ವ್ಯವಸ್ಥೆಯಿದೆ. ಪೋಷಕರ ಮೇಲೆಯೇ ಮಕ್ಕಳು ಎಸಗುತ್ತಿರುವ ದೌರ್ಜನ್ಯಗಳೂ ಕಡಿಮೆಯಾಗಿಲ್ಲ’ ಎಂದು ಹೇಳಿದರು.

ಬಯಲು ಬಳಗದ ಪ್ರಕಾಶ್ ಮಾತನಾಡಿ, ‘ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಜಾತಿಯ ಕಾರಣಕ್ಕೆ ಅವಮಾನಿಸಲಾಗುತ್ತಿದೆ. ಸೌಜನ್ಯ ಪ್ರಕರಣ, ಮಣಿಪುರದ ಘಟನೆಗಳು ನಮ್ಮ ಎದುರಿಗಿವೆ. ಈ ಕಾಲದ ಹಿಂಸಾಚಾರವನ್ನು ನಿಲ್ಲಿಸಲು ಸಂಘಟಿತ ಹೋರಾಟ ನಡೆಸಬೇಕಿದೆ’ ಎಂದು ಕರೆ ನೀಡಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಅಧ್ಯಕ್ಷ ಮಾವಳ್ಳಿ ಶಂಕರ್‌ ಹಾಗೂ ಕ್ವೆಸ್ಟ್‌ ಅಲಯನ್ಸ್‌ ವಿಶ್ವವಿದ್ಯಾಲಯದ ರೂಪಾ ನಾಗೇನಹಳ್ಳಿ ಅವರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT