ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ಸಿಗೆ ಕಲ್ಲೇಟು: ಬಿಎಂಟಿಸಿ ನೌಕರರೇ ಆರೋಪಿಗಳು

Last Updated 19 ಏಪ್ರಿಲ್ 2021, 21:24 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಾಕ್ಷಿಪಾಳ್ಯದ ವಿಘ್ನೇಶ್ವರ ನಗರ ತಂಗುದಾಣ ಬಳಿ ಬಿಎಂಟಿಸಿ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿ, ಚಾಲಕ ನಂಜುಂಡೇಗೌಡ (43) ಅವರ ತಲೆಗೆ ತೀವ್ರ ಗಾಯವನ್ನುಂಟು ಮಾಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಹಳ್ಳಿ ಸೀತೇಗೌಡ (33), ತಿಮ್ಮೇಗೌಡ (42) ಹಾಗೂ ಜೀವನ್ (33) ಬಂಧಿತರು. ಈ ಮೂವರೂ ಬಿಎಂಟಿಸಿ ನೌಕರರು. ಮೊದಲ ದಿನದಿಂದಲೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದ ಇವರು, ಕೆಲ ಚಾಲಕರಿಂದ ಬಸ್‌ಗಳು ಪುನಃ ಸಂಚಾರ ಆರಂಭಿಸಿದ್ದಕ್ಕೆ ಸಿಟ್ಟಾಗಿದ್ದರು. ಹೀಗಾಗಿಯೇ ಬಸ್ಸಿಗೆ ಕಲ್ಲು ಹೊಡೆದಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿ ಸೀತೇಗೌಡ, ಬಿಎಂಟಿಸಿ ಡಿಪೊ–9ರಲ್ಲಿ ಚಾಲಕ. ಅದೇ ಡಿಪೊದಲ್ಲೇ ಚಾಲಕ ಮತ್ತು ನಿರ್ವಾಹಕರಾಗಿ ತಿಮ್ಮೇಗೌಡ ಹಾಗೂ ಮೆಕ್ಯಾನಿಕ್ ಆಗಿ ಜೀವನ್ ಕೆಲಸ ಮಾಡುತ್ತಿದ್ದರು. ಮೂವರು ಆರೋಪಿಗಳು, ಒಟ್ಟಿಗೆ ಗುಂಪು ಕಟ್ಟಿಕೊಂಡು ಬಂದು ಕೃತ್ಯ ಎಸಗಿದ್ದರು.’

‘ಭಾನುವಾರ (ಏ. 18) ಸಂಜೆ ಸಿಟಿ ಮಾರುಕಟ್ಟೆಯಿಂದ ಜಾಲಹಳ್ಳಿ ಕಡೆಗೆ (ನಂ. 248/6) ಬಿಎಂಟಿಸಿ ಬಸ್ ಹೊರಟಿತ್ತು. ವಿಘ್ನೇಶ್ವರ ನಗರದ ತಂಗುದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್ ನಿಂತಿತ್ತು. ಅದೇ ಸಂದರ್ಭದಲ್ಲೇ ಆರೋಪಿಗಳು, ಬಸ್ಸಿನ ಮುಂಭಾಗಕ್ಕೆ ಕಲ್ಲು ಹೊಡೆದಿದ್ದರು. ಒಂದು ಕಲ್ಲು ಚಾಲಕ ನಂಜುಂಡೇಗೌಡ ತಲೆಗೆ ಬಿದ್ದು ತೀವ್ರ ಗಾಯವಾಗಿತ್ತು. ಸ್ಥಳೀಯರೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ’ ಎಂದೂ ತಿಳಿಸಿದರು.

‘ಕೃತ್ಯದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಬಿಎಂಟಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT