ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಕದಾಸರ ಜಾತ್ಯತೀತ ತತ್ವದಂತೆ ಆಡಳಿತ’

ರಾಜ್ಯ ಸರ್ಕಾರದ ವತಿಯಿಂದ ಕನಕದಾಸರ ಜಯಂತ್ಯುತ್ಸವ ಆಚರಣೆ
Last Updated 3 ಡಿಸೆಂಬರ್ 2020, 21:51 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಸರ್ಕಾರದ ಆಡಳಿತವು ದಾಸ ಸಾಹಿತ್ಯದ ಯುಗ ಪ್ರವರ್ತಕ ಕನಕದಾಸರ ಜಾತ್ಯತೀತ ಪರಿಕಲ್ಪನೆಯ ಆಶಯದಂತೆಯೇ ನಡೆಯುತ್ತಿದೆ. ಸರ್ವಜನಾಂಗದ ಅಭಿವೃದ್ಧಿಗೆ ಸಮಾನ ಅವಕಾಶ ಮತ್ತು ಅನುದಾನ ನೀಡಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ಕನಕದಾಸರ ಬದುಕು -ಬರಹಗಳನ್ನು ಹೊಸ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕಾರ್ಯ ಪ್ರವೃತ್ತವಾಗಿದೆ. ಅಲ್ಲದೆ ಕನಕದಾಸರ ಕುರಿತ ಪುಸ್ತಕ ಪ್ರಕಟಣೆ ಜತೆಗೆ ಕಮ್ಮಟ ಸೇರಿದಂತೆ ಹಲವು ಸಾರ್ಥಕ ಕಾರ್ಯದಲ್ಲಿ ಈ ಕೇಂದ್ರ ತೊಡಗಿದೆ’ ಎಂದರು.

‘ಮೌಢ್ಯ ಮತ್ತು ಕಂದಾಚಾರಗಳ ವಿರುದ್ಧ ಕನಕದಾಸರು ಸಮರ ಸಾರಿದ್ದರು. ಇಂತಹ ಸಾಹಿತ್ಯ ಸಾಧಕರ ಜೀವನ ನಮಗೆ ದಾರಿ ದೀಪ. ಯುವ ಜನಾಂಗಕ್ಕೆ ದಾಸರ ಜೀವನ ಸಾಧನೆ ತಿಳಿಸುವ ಕೆಲಸ ಆಗಬೇಕಾಗಿದೆ’ ಎಂದು ಅವರು ಹೇಳಿದರು.

ಕಲಬುರ್ಗಿಯ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ, ‘ಜಾತಿ ಆಧಾರಿತ ಜಯಂತ್ಯುತ್ಸವಗಳ ಆಚರಣೆ ನಿಲ್ಲಬೇಕು. ಜಾತಿ ಬಲ, ತೋಳ್ಬಲವಿಲ್ಲದವರಿಗೆ ವೇದಿಕೆಗಳು ಸಿಗುವಂತಾಗಬೇಕು. ಕನಕದಾಸರ ಆಶಯ ಕೂಡ ಇದೇ ಆಗಿತ್ತು’ ಎಂದು ಹೇಳಿದರು.

ಕನಕದಾಸರ ಕುರಿತು ಉಪನ್ಯಾಸ ನೀಡಿದ ಡಾ.ಎಲ್.ಜಿ.ಮೀರಾ, ‘ಜಾತಿ ಮೂಲಕ ಮಾಡಲಾದ ಅವಮಾನವನ್ನು ಕನಕದಾಸರು ಜ್ಞಾನದಲ್ಲಿ ಗೆದ್ದರು. ತಾಳ್ಮೆಯಿಂದ ಜ್ಞಾನದ ಮಾರ್ಗದಲ್ಲಿ ಸಾಗಿದರು’ ಎಂದರು.

‘ಭರತನಾಟ್ಯ, ಚಿತ್ರ ಸಾಹಿತ್ಯ, ಭಕ್ತಿ ಮತ್ತು ತತ್ವ ಸಾಹಿತ್ಯದಲ್ಲೂ ಕನಕದಾಸರ ಪದಗಳ ಬಳಕೆ ಆಗಿರುವುದು ಅವರ ಸಾಹಿತ್ಯ ಹಿರಿಮೆಗೆ ಹಿಡಿದ ಕೈಗನ್ನಡಿ’ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ, ಸಚಿವ ಭೈರತಿ ಬಸವರಾಜ್, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT