ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಲಕ್ಷಾಂತರ ರೂಪಾಯಿ ಪೋಲು?

ಪ್ರಚಾರ ಮಾಡದಿದ್ದರೂ ಹಣ
Last Updated 18 ಜನವರಿ 2020, 22:16 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುವ ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯು, ಈ ಕಾರ್ಯವನ್ನು ಸಮರ್ಪಕವಾಗಿ ನಡೆಸದಿದ್ದರೂ ಲಕ್ಷಾಂತರ ರೂಪಾಯಿ ಬಿಡುಗಡೆಮಾಡಲಾಗಿದೆ.

ಇಲಾಖೆಯು ಪ್ರತಿವರ್ಷ ಮಹಾತ್ಮರ ಜಯಂತಿಗಳು, ಪ್ರಶಸ್ತಿ‍ಪ್ರದಾನ ಸಮಾರಂಭ,‘ಮನೆಯಂಗಳದಲ್ಲಿ ಮಾತುಕತೆ’ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಇಲಾಖೆಯು ಈ ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ (ಫೇಸ್‌ಬುಕ್, ಟ್ವಿಟರ್, ಯೂ ಟ್ಯೂಬ್) ಬಿತ್ತರಿಸಲು ಕ್ರೇಜಿ ಫ್ರಾಗ್ ಮೀಡಿಯಾ ಲಿ. ಎಂಬ ಸಂಸ್ಥೆಗೆ ಆರು ತಿಂಗಳ ಅವಧಿಗೆ ಗುತ್ತಿಗೆ ನೀಡಿತ್ತು.

2018 ಜ.1ರಂದು ಈ ಸಂಬಂಧ ಒಪ್ಪಂದವಾಗಿತ್ತು. ಆದರೆ, ಈ ಅವಧಿಯಲ್ಲಿ ಇಲಾಖೆಯ ಫೇಸ್‌ಬುಕ್ ಪುಟದಲ್ಲಿ ಹಾಗೂ ಯೂ–ಟ್ಯೂಬ್‌ನಲ್ಲಿ ಕಾರ್ಯಕ್ರಮಗಳ ಕುರಿತ ಯಾವುದೇ ಪೋಸ್ಟ್‌ಗಳು ಕಾಣಸಿಗುವುದಿಲ್ಲ.

ಇಲಾಖೆಯ ಟ್ವಿಟರ್ ಪುಟದಲ್ಲಿ ‘ಮನೆಯಂಗಳದಲ್ಲಿ ಮಾತುಕತೆ’ ಸೇರಿದಂತೆ ಕೆಲ ಕಾರ್ಯಕ್ರಮಗಳ ಬೆರಳಣಿಕೆ ಫೋಸ್ಟ್‌ಗಳು ಮಾತ್ರ ಇವೆ. ಆದರೆ, ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಸಂಸ್ಥೆಗೆ₹ 5.59 ಲಕ್ಷ ಪಾವತಿಸಲಾಗಿದೆ. ಈ ಕುರಿತ ದಾಖಲೆಗಳು ‘ಪ್ರಜಾವಾಣಿ’ಗೆ ಲಭಿಸಿವೆ. 2018ರ ಜನವರಿಯಿಂದ ಜೂನ್‌ವರೆಗೆ ನಡೆದ 6 ಕಾರ್ಯಕ್ರಮಗಳಿಗೆ ಎರಡು ಕಂತುಗಳಲ್ಲಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.ಇದಕ್ಕೂ ಮೊದಲು ಇದೇ ಸಂಸ್ಥೆಗೆ ಮೂರು ಕಾರ್ಯಕ್ರಮಗಳಿಗೆ ಇಲಾಖೆ ₹ 1.41 ಲಕ್ಷ ಪಾವತಿಸಿತ್ತು.

‘ಇಲಾಖೆ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಮೂರು ಪುಟಗಳಿವೆ. ಯಾವುದು ಅಧಿಕೃತ ಎಂಬುದೂ ಗೊತ್ತಿಲ್ಲ. ಸಾಮಾಜಿಕ ಜಾಲತಾಣಗಳ ನಿರ್ವಹಣೆ ಗಂಜಿ ಕೇಂದ್ರವಾಗಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದಾರೆ.

ದುಂದು ವೆಚ್ಚ?: ‘ಇಲಾಖೆ ಕಾರ್ಯಕ್ರಮಗಳು ಸಾಮಾಜಿಕ ಜಾಲತಾಣಗಳ ಮೂಲಕ ನಾಡಿನ ಉದ್ದಗಲಕ್ಕೂ ತಲುಪಬೇಕಿತ್ತು. ಆದರೆ, ಆ ಕೆಲಸ ನಡೆದಿಲ್ಲ. ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮಕ್ಕೆ ಪ್ರಚಾರ ನೀಡುವ ನೆಪದಲ್ಲಿ ಹಣ ಪೋಲು ಮಾಡಲಾಗಿದೆ. ‌ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟರ ಮಟ್ಟಿಗೆ ಇಲಾಖೆಯ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲಾಗಿದೆ.

ಅದು ಜನರನ್ನು ತಲುಪಿದೆಯೇ ಎಂದು ಪರಿಶೀಲಿಸುವ ಕೆಲಸವೂ ಆಗಿಲ್ಲ’ ಎಂದು ಹೆಸರು ಹೇಳಿಕೊಳ್ಳಲು ಬಯಸದ, ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘2001ರಲ್ಲಿ ಆರಂಭಿಸಲಾದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮ 212 ಕಂತುಗಳನ್ನು ಪೂರೈಸಿದ್ದು, ಮನೆ ಮಾತಾಗಿದೆ. ಇದರ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ವ್ಯಯಿಸುವ ಅಗತ್ಯ ಇರಲಿಲ್ಲ’ ಎಂದು ಪ್ರತಿಪಾದಿಸಿದರು.

‘ನಯನ ಸಭಾಂಗಣದಲ್ಲಿ 140 ಆಸನಗಳಿವೆ. ಅಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಅನೇಕರು ಆಸನ ಸಿಗದೆ ವಾಪಸು ಹೋಗುತ್ತಾರೆ. ಬದಲಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ಅಂಕಿ–ಅಂಶಗಳು

7,231:ಇಲಾಖೆಯ ಫೇಸ್‌ಬುಕ್‌ ಪುಟಕ್ಕೆ ಬಂದಿರುವ ಒಟ್ಟು ಲೈಕ್‌ಗಳು

228:ಇಲಾಖೆಯ ಟ್ವಿಟರ್ ಖಾತೆಯ ಹಿಂಬಾಲಕರು

1,100:ಇಲಾಖೆಯಯೂ‌–ಟ್ಯೂಬ್ ಪುಟದಚಂದಾದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT