ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನಸಹಾಯ: ಅಲ್ಪ ‘ಧನ’ಕ್ಕೆ ಅತೃಪ್ತಿ

ಸಂಸ್ಕೃತಿ ಇಲಾಖೆ ನಡೆಗೆ ಸಾಂಸ್ಕೃತಿಕ ವಲಯದಲ್ಲಿ ಆಕ್ಷೇಪ
Published 22 ಮಾರ್ಚ್ 2024, 22:42 IST
Last Updated 22 ಮಾರ್ಚ್ 2024, 22:42 IST
ಅಕ್ಷರ ಗಾತ್ರ

ಬೆಂಗಳೂರು: ಸಾಂಸ್ಕೃತಿಕ ಉತ್ಸವಗಳಿಗೆ ಈ ಬಾರಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅನುದಾನದ ಕೊರತೆಯಿಂದಾಗಿ ಸಂಘ–ಸಂಸ್ಥೆಗಳಿಗೆ ಕಂತು ರೂಪದಲ್ಲಿ ಧನಸಹಾಯ ಬಿಡುಗಡೆ ಮಾಡಿರುವುದಕ್ಕೆ ಸಾಂಸ್ಕೃತಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಇಲಾಖೆಯು ಇದೇ ಮೊದಲ ಬಾರಿ ಕಂತು ರೂಪದಲ್ಲಿ ಧನಸಹಾಯ ಒದಗಿಸಿದೆ. ಜಿಲ್ಲಾ ಸಮಿತಿ ಶಿಫಾರಸು ಮಾಡಿದ್ದ ಅನುದಾನದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ಆಯ್ಕೆಯಾದ ಸಂಘ–ಸಂಸ್ಥೆಗಳಿಗೆ ಶೇ 31ರಷ್ಟು, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಆಯ್ಕೆಯಾದವರಿಗೆ ಶೇ 33ರಷ್ಟು ಹಾಗೂ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದವರಿಗೆ ಶೇ 40ರಷ್ಟು ಅನುದಾನ ಒದಗಿಸಿದೆ.

ಆದರೆ, ಎರಡನೇ ಕಂತಿನ ಬಗ್ಗೆ ಇಲಾಖೆಯು ಆದೇಶದಲ್ಲಿ ಪ್ರಸ್ತಾಪಿಸಿಲ್ಲ. ಇದರಿಂದ ಸಂಘ–ಸಂಸ್ಥೆಗಳಿಗೆ ಮತ್ತೊಂದು ಕಂತಿನ ಖಚಿತತೆ ಇಲ್ಲವಾಗಿದೆ. ಹಲವು ಸಂಘ–ಸಂಸ್ಥೆಗಳು ಇಲಾಖೆ ನೀಡುವ ಧನಸಹಾಯವನ್ನೇ ಅವಲಂಬಿಸಿದ್ದು, ಪೂರ್ಣ ಹಣ ಬಿಡುಗಡೆಯಾಗದಿರುವುದರಿಂದ ಗೊಂದಲಕ್ಕೆ ಒಳಗಾಗಿವೆ. 

ಪ್ರತಿಷ್ಠಿತ ಸಂಘ–ಸಂಸ್ಥೆಗಳಿಗೆ ಅನುದಾನ ಕಡಿತ ಮಾಡಿ ಅನಾಮಧೇಯ ಸಂಘ–ಸಂಸ್ಥೆಗಳಿಗೆ ಅಧಿಕ ಹಣ ನೀಡಲಾಗಿದೆ. ಕಂತು ರೂಪದ ಧನಸಹಾಯ ನೀತಿ ಖಂಡನೀಯ.
ಬೈರಮಂಗಲ ರಾಮೇಗೌಡ, ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ

ಧನಸಹಾಯಕ್ಕಾಗಿ ಸರ್ಕಾರ ಪ್ರತಿವರ್ಷ ₹15 ಕೋಟಿಯಿಂದ ₹20 ಕೋಟಿ ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ 7 ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿವೆ. ಅರ್ಜಿ ಅಲ್ಲಿಸುವ 4 ಸಾವಿರಕ್ಕೂ ಹೆಚ್ಚು ಸಂಘ–ಸಂಸ್ಥೆಗಳಲ್ಲಿ ಒಂದು ಸಾವಿರದಿಂದ 1,500 ಸಾವಿರ ಸಂಘ–ಸಂಸ್ಥೆಗಳಿಗೆ ಧನಸಹಾಯ ಒದಗಿಸಲಾಗುತ್ತಿದೆ. ಇಲಾಖೆಯಲ್ಲಿ ₹6 ಕೋಟಿ ಮಾತ್ರ ಅನುದಾನ ಧನಸಹಾಯಕ್ಕೆ ಲಭ್ಯವಿದ್ದರಿಂದ ಸಾಮಾನ್ಯ ವರ್ಗದಲ್ಲಿ 831, ಪರಿಶಿಷ್ಟ ಜಾತಿ ಉಪಯೋಜನೆಯಡಿ 519 ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ 97 ಸಂಘ–ಸಂಸ್ಥೆಗಳಿಗೆ ಮೊದಲ ಕಂತು ಹಂಚಿಕೆ ಮಾಡಲಾಗಿದೆ. 

ಸಾಂಸ್ಕೃತಿಕ ಲೋಕವನ್ನು ಸಂಸ್ಕೃತಿ ಇಲಾಖೆ ಕಡೆಗಣಿಸಿದೆ. ಇನ್ನೊಂದು ಕಂತಿನ ಬಗ್ಗೆ ಸ್ಪಷ್ಟತೆಯಿಲ್ಲ. ಸಂಘ–ಸಂಸ್ಥೆಗಳು ಕಾರ್ಯಕ್ರಮ ನಡೆಸುವುದೇ ಕಷ್ಟವಾಗಿದೆ
ವೈ.ಕೆ. ಮುದ್ದುಕೃಷ್ಣ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ

ಕಡಿಮೆ ಹಣ ಶಿಫಾರಸು: ಯೋಜನೆಯಡಿ ಗರಿಷ್ಠ ₹5 ಲಕ್ಷದವರೆಗೆ ಅನುದಾನ ಒದಗಿಸಲು ಅವಕಾಶವಿದೆ. ಜಿಲ್ಲಾ ಸಮಿತಿ ಬಹುತೇಕ ಸಂಘ–ಸಂಸ್ಥೆಗಳಿಗೆ ₹1 ಲಕ್ಷದಿಂದ ₹ 2 ಲಕ್ಷ ಮಾತ್ರ ಶಿಫಾರಸು ಮಾಡಿದೆ. ಕೆಲ ಸಂಘ–ಸಂಸ್ಥೆಗಳಿಗೆ ₹ 50 ಸಾವಿರವನ್ನೂ ಸಮಿತಿ ಶಿಫಾರಸು ಮಾಡಿದೆ. ಇದರಿಂದ ₹15 ಸಾವಿರದಿಂದ ₹ 20 ಸಾವಿರ ಮೊದಲ ಕಂತಾಗಿ ಕೈಸೇರಲಿದೆ. ಇದು ಅಸಮಾಧಾನಕ್ಕೆ ಕಾರಣವಾಗಿದೆ.  

ಕನಕಗಿರಿ ಉತ್ಸವ ಹಾಗೂ ಆನೆಗೊಂದಿ ಉತ್ಸವವು ಇಲಾಖೆಯ ಕ್ರಿಯಾಯೋಜನೆಯಲ್ಲಿ ಇರಲಿಲ್ಲ. ಹಾಗಿದ್ದರೂ, ಈ ಉತ್ಸವಗಳಿಗೆ ಕ್ರಮವಾಗಿ ₹10 ಕೋಟಿ ಹಾಗೂ ₹ 8 ಕೋಟಿ ಅನುದಾನ ಒದಗಿಸಲಾಗಿತ್ತು ಎಂದು ಕಲಾವಿದರು ದೂರಿದ್ದಾರೆ.

‘ಅನುದಾನ ಲಭ್ಯತೆ ಆಧರಿಸಿ ಕಂತು ರೂಪದಲ್ಲಿ ಹಣ ಒದಗಿಸಲಾಗುತ್ತಿದೆ. ಹೆಚ್ಚುವರಿ ಅನುದಾನಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಕಲಾವಿದರ ಅಲೆದಾಟ

2023–24ನೇ ಸಾಲಿನ ಧನಸಹಾಯಕ್ಕೆ ಸಂಬಂಧಿಸಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ದಾಖಲಾತಿ ಸಲ್ಲಿಸಿದ್ದ ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು ಬಳಿಕ ಇಲಾಖೆಯ ಸಹಾಯಕ ನಿರ್ದೇಶಕರ ಸೂಚನೆ ಮೇರೆಗೆ ಭೌತಿಕವಾಗಿ ಆಮಂತ್ರಣ ಪತ್ರಿಕೆ ಪತ್ರಿಕಾ ತುಣುಕು ಹಾಗೂ ಫೋಟೊಗಳನ್ನು ಸಲ್ಲಿಸಲು ಕಚೇರಿಗಳಿಗೆ ಅಲೆದಾಟ ನಡೆಸಿದ್ದರು. ಈಗ ಕಂತು ರೂಪದಲ್ಲಿ ಬಿಡುಗಡೆ ಮಾಡಿರುವುದರಿಂದ ಅಸಮಾಧಾನಗೊಂಡ ಕಲಾವಿದರು ಕನ್ನಡ ಭವನಕ್ಕೆ ಅಲೆದಾಟ ನಡೆಸುತ್ತಿದ್ದಾರೆ.

‘ಅರ್ಜಿ ಸಲ್ಲಿಸಿದವರು ಅಲ್ಪ ಕಾಸಿಗೂ ಅಲೆದಾಟ ನಡೆಸಬೇಕಾಗಿದೆ. ಉತ್ಸವಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಇಲಾಖೆಗೆ ಧನಸಹಾಯ ಒದಗಿಸಲು ಹಣ ಇರದಿರುವುದು ವಿಪರ್ಯಾಸ’ ಎಂದು ಕಲಾವಿದ ಜಯಸಿಂಹ ಎಸ್.ಬೇಸರ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT