ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲೂ ಸಿಬ್ಬಂದಿ ನೇಮಕಾತಿ ಪರೀಕ್ಷೆ ನಡೆಸಿ: ಟಿ.ಎಸ್. ನಾಗಾಭರಣ

ಕೇಂದ್ರ ಸರ್ಕಾರಕ್ಕೆ ಆಗ್ರಹ
Last Updated 21 ಡಿಸೆಂಬರ್ 2021, 20:34 IST
ಅಕ್ಷರ ಗಾತ್ರ

ಬೆಂಗಳೂರು: ಜಿಲ್ಲಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ನೇಮಕಾತಿ ಸಂಸ್ಥೆಯ (ಎನ್‌ಆರ್‌ಎ) ಒಂದು ಕೇಂದ್ರ ಹಾಗೂ ಮಹಾನಗರಗಳ ವ್ಯಾಪ್ತಿಯಲ್ಲಿ ನಾಲ್ಕರಿಂದ ಎಂಟು ಕೇಂದ್ರಗಳನ್ನು ತೆರೆಯುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

‍ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರ ನೇತೃತ್ವದ ನಿಯೋಗವು ಕೇಂದ್ರ ಸರ್ಕಾರದ ಆಡಳಿತ ಸುಧಾರಣಾ ಇಲಾಖೆ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಈ ಬಗ್ಗೆ ಮಂಗಳವಾರ ಮನವಿ ಸಲ್ಲಿಸಿತು.

‘ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಬ್ಬಂದಿ ನೇಮಕಾತಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲು ಎನ್‌ಆರ್‌ಎ ಸ್ಥಾಪನೆ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಸಂಸ್ಥೆಯು ನಡೆಸುವ ಎಲ್ಲ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್ ಜೊತೆಗೆ ಸಂವಿಧಾನದ ಪರಿಚ್ಚೇದ 8ರಲ್ಲಿರುವ ಎಲ್ಲ 22 ಭಾಷೆಗಳಲ್ಲೂ ನಡೆಸಬೇಕು’ ಎಂದು ಟಿ.ಎಸ್. ನಾಗಾಭರಣ ಆಗ್ರಹಿಸಿದರು.

‘ರಾಜ್ಯದ ಪ್ರಧಾನ ಭಾಷೆಯನ್ನು 1ರಿಂದ 10ನೇ ತರಗತಿಯವರೆಗೆ ಒಂದು ಭಾಷೆಯಾಗಿ ವ್ಯಾಸಂಗ ಮಾಡಿರುವವರು ಮಾತ್ರ ಆಯಾ ರಾಜ್ಯದಲ್ಲಿ ಅರ್ಜಿ ಸಲ್ಲಿಸಲು ಅರ್ಹರು ಎಂಬ ನಿಯಮ ರೂಪಿಸಬೇಕು.ರಾಷ್ಟ್ರದ ಐಕ್ಯತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ಒಂದು ಹಂತದವರೆಗೆ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಶೇ 75 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು.ಇಡೀ ರಾಷ್ಟ್ರಕ್ಕೆ ಅನ್ವಯವಾಗುವಂತೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು. ಇದನ್ನು ಕಾನೂನುಬದ್ಧಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಸ್ಥಳೀಯ ಜನರೊಡನೆ ವ್ಯವಹರಿಸಬೇಕಾದ ಆದಾಯ ತೆರಿಗೆ, ಕೇಂದ್ರ ಅಬಕಾರಿ ಇಲಾಖೆ, ಜಿಎಸ್‌ಟಿ ಸೇವೆ, ಆರೋಗ್ಯ ಇಲಾಖೆ, ಇಎಸ್‌ಐ, ರೈಲ್ವೆಗಳಂತಹ ಇಲಾಖೆಗಳಿಗೆ ಸಿಬ್ಬಂದಿ ಆಯ್ಕೆ ನಡೆಸುವಾಗ ಆಯಾ ರಾಜ್ಯದ ಪ್ರಧಾನ ಭಾಷೆಯಲ್ಲಿ ಪರಿಣತಿ ಹೊಂದಿರುವುವವರಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಪ್ರತ್ಯೇಕ ಪರೀಕ್ಷೆ ನಡೆಸುವ ವ್ಯವಸ್ಥೆ ರೂಪಿಸಬೇಕು’ ಎಂದರು.

ಡಾ.ಜಿತೇಂದ್ರ ಸಿಂಗ್, ‘ರಾಷ್ಟ್ರೀಯ ಸಿಬ್ಬಂದಿ ಆಯ್ಕೆ ಆಯೋಗದ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿ ಇದೆ. ಇದು ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಪ್ರಯೋಜನವಾಗುವಂತೆ ಕಾರ್ಯನಿರ್ವಹಿಸುವ ಪ್ರಕ್ರಿಯೆ ಜಾರಿಗೊಳಿಸಲಾಗುತ್ತಿದೆ. ಇದರ ಹೆಚ್ಚಿನ ಅವಕಾಶಗಳನ್ನು ಕರ್ನಾಟಕದವರು ಪಡೆದುಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT