ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ‘ಕನ್ನಡ ಹಬ್ಬ’

Published : 24 ಸೆಪ್ಟೆಂಬರ್ 2024, 15:41 IST
Last Updated : 24 ಸೆಪ್ಟೆಂಬರ್ 2024, 15:41 IST
ಫಾಲೋ ಮಾಡಿ
Comments

ಬೆಂಗಳೂರು: ಕನ್ನಡ ಪರಂಪರೆಯಲ್ಲಿ ದೇಶದ ಸಂವಿಧಾನದ ಮಹತ್ತರ ಆಶಯಗಳನ್ನು ಕಾಣಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಭಿಪ್ರಾಯಪಟ್ಟರು.

ನಗರದ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಕನ್ನಡ ಹಬ್ಬ’ ಸಮಾರಂಭದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರು ಭಾರತ ಸಂವಿಧಾನದ ಮೂಲಕ ನೀಡಿರುವ ಸಮಾನತೆಯ ಆಶಯವುಳ್ಳ ಅನೇಕ ಸಂಗತಿಗಳನ್ನು ಕನ್ನಡ ಪರಂಪರೆಯು ಕಟ್ಟಿಕೊಟ್ಟಿದೆ. ಯಾವ ಜಾತಿಯಲ್ಲಿ ಹುಟ್ಟಿದರೇನು, ಆದಿಕವಿ ಪಂಪನ ನುಡಿಯಂತೆ ಮಾನವೀಯ ಸದ್ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಮನುಷ್ಯ ಜಾತಿ ಆಗಬೇಕಿರುವುದು ಮುಖ್ಯ. ನಿಜವಾದ ಸಿರಿ ಸಂಪತ್ತು ಯಾವುದೆಂದರೆ, ಕವಿರಾಜಮಾರ್ಗದಲ್ಲಿ ತಿಳಿಸಿದಂತೆ ನೆರೆಹೊರೆಯವರ ಧರ್ಮ ಹಾಗೂ ವಿಚಾರಗಳನ್ನು ಸಹಿಸುವುದೇ ಆಗಿದೆ ಎಂದು ಹೇಳಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಪ್ರಾತಃಸ್ಮರಣೀಯವಾದುದು. ಭಾರತ ಕಂಡ ಅಪ್ರತಿಮ ಪ್ರಗತಿಪರ ರಾಜರಾದ ಶಾಹು ಮಹಾರಾಜ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಶಿಕ್ಷಕರಾಗಿ ಮಾರ್ಗದರ್ಶನ ನೀಡಿದ್ದು ಫ್ರೇಜರ್ ಎಂಬ ಕ್ರೈಸ್ತಮೂಲದ ಮೇಷ್ಟ್ರು ಎಂದು ತಿಳಿಸಿದರು.

ಕಾಲೇಜಿನ ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕ ಫಾದರ್ ಜೋಷಿ ಮ್ಯಾಥ್ಯು ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ನಿಕಾಯ ಡೀನ್ ಎ.ವಿ.ಗೋಪಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಬಿ.ಎಸ್. ಸರ್ವೇಶ್, ಕನ್ನಡ ಸಹಾಯಕ ಪ್ರಾಧ್ಯಾಪಕ ಎನ್. ಚಂದ್ರಶೇಖರ್, ಸಹಾಯಕ ಪ್ರಾಧ್ಯಾಪಕರಾದ ಸೈಯದ್ ಮುಯಿನ್, ಎ.ಕೆ.ರವಿಶಂಕರ್, ಎಂ.ಭೈರಪ್ಪ, ಕೆ.ಪ್ರೇಮಕುಮಾರ್, ಎಚ್.ಜೆ.ಕಿರಣಕುಮಾರ್, ವಿದ್ಯಾರ್ಥಿ ಪ್ರತಿನಿಧಿಗಳಾದ ಗ್ರೀಷ್ಮ ಹಾಗೂ ಪಿ. ಮಧು ಪಾಲ್ಗೊಂಡಿದ್ದರು.

ಕನ್ನಡ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹೆಜ್ಜೆನಾದ-ನೃತ್ಯ, ಸವಿಗಾನ-ಗಾಯನ, ಜ್ಞಾನಯಾನ-ರಸಪ್ರಶ್ನೆ, ನುಡಿರಂಗ-ಚರ್ಚಾ ಸ್ಪರ್ಧೆ, ಅಭಿವ್ಯಕ್ತಿ-ಕಿರುನಾಟಕ, ಅಂತರಂಗ-ಸೃಜನಶೀಲ ಬರಹ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT