ಭಾನುವಾರ, ಜನವರಿ 19, 2020
27 °C
ಇನ್‌ಸೈಟ್‌ ಐಎಎಸ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ

ಸರ್ಕಾರವೇ ದೇಶ ಅಲ್ಲ: ಕಣ್ಣನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸರ್ಕಾರ ಎಂದರೆ ದೇಶ ಅಲ್ಲ. ಸರ್ಕಾರಕ್ಕಿಂತ ದೇಶ ದೊಡ್ಡದು’ ಎಂದು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವ ಕಣ್ಣನ್ ಗೋಪಿನಾಥನ್ ಹೇಳಿದರು.

ಇನ್‌ಸೈಟ್‌ ಐಎಎಸ್‌ ಅಕಾಡೆಮಿಯಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಸರ್ಕಾರ ತಪ್ಪು ಮಾಡಿದಾಗ, ಅದನ್ನು ಎಚ್ಚರಿಸುವ ಸಲುವಾಗಿ ಟೀಕಿಸುವ ಮತ್ತು ಪ್ರತಿಭಟನೆ ನಡೆಸುವ ಹಕ್ಕು ಜನರಿಗೆ ಇದೆ’ ಎಂದು ಹೇಳಿದರು.

‘ಹಿಂದೆ ಬೇರೆ ಪಕ್ಷದ ಸರ್ಕಾರ ಇತ್ತು. ಈಗ ಬಿಜೆಪಿ ಸರ್ಕಾರ ಇದೆ. ಮುಂದೆ ಮತ್ತೊಂದು ಪಕ್ಷ ಬರಬಹುದು. ಹೀಗಾಗಿ, ಸರ್ಕಾರವನ್ನು ಟೀಕಿಸಿದರೆ ದೇಶವನ್ನೇ ಟೀಕಿಸಿದಂತೆ ಎಂದು ಬಿಂಬಿಸಿ ದೇಶದ್ರೋಹಿ, ಜಿಹಾದಿ, ನಕ್ಸಲ್ ಪಟ್ಟಗಳನ್ನು ಕಟ್ಟುವುದು ಸರಿಯಲ್ಲ’ ಎಂದರು.

‘ಪ್ರಧಾನಿ ತಪ್ಪು ನಿರ್ಧಾರ ಕೈಗೊಂಡಾಗ ತಿಳಿ ಹೇಳುವ ಬದಲು ತಪ್ಪನ್ನೇ ಸರಿ ಎಂಬಂತೆ ಶಹಭಾಷ್‌ ಗಿರಿ ನೀಡುವವರು ಅವರ ಜತೆಯಲ್ಲಿದ್ದಾರೆ. ಹೀಗಾಗಿ ತಪ್ಪನ್ನೇ ಸರಿ ಎಂದುಕೊಂಡು ಅವರೂ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಿದ್ದಾರೆ. ಇದು ದೇಶದ ನಾಗರಿಕರ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.

‘ಐಎಎಸ್ ಅಧಿಕಾರಿಯಾದರೆ ಮಾತ್ರ ಜನಸೇವೆ, ದೇಶಸೇವೆ ಸಾಧ್ಯ ಎಂದುಕೊಳ್ಳಬೇಡಿ. ಓದುವ ಹವ್ಯಾಸವನ್ನು ಮುಂದುವರಿಸಿ. ಜನಸೇವೆಗೆ ಇರುವ ಬೇರೆ ಮಾರ್ಗಗಳನ್ನೂ ಕಂಡುಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಇನ್‌ಸೈಟ್‌ ಐಎಎಸ್‌ನ ಸಂಸ್ಥಾಪಕ ವಿನಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು