ಸೋಮವಾರ, ಮಾರ್ಚ್ 27, 2023
22 °C
ದೊಣ್ಣೆಯಿಂದ ಹಲ್ಲೆ, ಕಲ್ಲು ತೂರಾಟ: ಲಾಠಿ ಪ್ರಹಾರ

ಕಾಂಗ್ರೆಸ್– ಬಿಜೆಪಿ ಕಾರ್ಯಕರ್ತರ ಮಾರಾಮಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಜಯನಗರ ಎಂ.ಸಿ. ಬಡಾವಣೆಯ ಬಿಜಿಎಸ್ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಶುಕ್ರವಾರ ಮಾರಾಮಾರಿ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

‘ಗಲಾಟೆ ವೇಳೆ ಕಲ್ಲು ತೂರಾಟ ನಡೆದಿದೆ. ಕೆಲವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸರು ಸೇರಿ ಹಲವರು ಗಾಯಗೊಂಡಿದ್ದಾರೆ. ಅವರೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಾಟೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

‘ಮೈದಾನ ಬಿಬಿಎಂಪಿ ಅಧೀನದಲ್ಲಿದೆ. ಮಾರ್ಚ್ 19ರಂದು ಸ್ತ್ರಿಶಕ್ತಿ ಮಹಿಳಾ ಸಮಾವೇಶ ಆಯೋಜಿಸಲು ಉಮಾಶಂಕರ್ ಎಂಬುವವರು ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿ ಪಡೆದಿದ್ದರು. ಸಮಾವೇಶದ ತಯಾರಿಗಾಗಿ ಶುಕ್ರವಾರ ಸಂಜೆ ಮೈದಾನದಲ್ಲಿ ಬ್ಯಾನರ್. ಫ್ಲೆಕ್ಸ್ ಕಟ್ಟುತ್ತಿದ್ದರು.’ ‘ಎದುರಾಳಿ ಗುಂ‍ಪಿನ ಸದಸ್ಯರು, ಮೈದಾನದೊಳಗೆ ನುಗ್ಗಿದ್ದರು. ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡುವುದಿಲ್ಲವೆಂದು ಹೇಳಿದ್ದರು. ಅದೇ ಕಾರಣಕ್ಕೆ ಮಾತಿನ ಚಕಮಕಿ ನಡೆದು, ಎರಡೂ ಗುಂಪಿನ ನಡುವೆ ಮಾರಾಮಾರಿ ನಡೆಯಿತು’ ಎಂದು ಹೇಳಿದರು.

‘ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಹಿಳೆಯರೂ ಇದ್ದರು. ಪೊಲೀಸರು ಎಚ್ಚರಿಕೆ ನೀಡಿದರೂ ಜನರು ಮೈದಾನ ಬಿಟ್ಟು ಹೋಗಲಿಲ್ಲ. ಕೆಲವರು ದೊಣ್ಣೆ ಹಿಡಿದು ಹಲ್ಲೆ ಮಾಡುತ್ತಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂದು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಲಾಯಿತು. ಸದ್ಯ ಸ್ಥಳದಲ್ಲಿ ಪೊಲೀಸರ ಕಾವಲು ಹೆಚ್ಚಿಸಲಾಗಿದೆ’ ಎಂದು ಅವರು ತಿಳಿಸಿದರು.

ಕ್ರಿಕೆಟ್ ಆಡುತ್ತಿದ್ದವರಿಂದಲೂ ವಿರೋಧ: ‘ಮೈದಾನದಲ್ಲಿ ಕೆಲ ಯುವಕರು ಕ್ರಿಕೆಟ್ ಆಡುತ್ತಿದ್ದರು. ಮಾರ್ಚ್ 19ರಂದು ಇರುವ ಸಮಾವೇಶಕ್ಕೆ ಈಗ ಏಕೆ ಫ್ಲೆಕ್ಸ್ ಕಟ್ಟುತ್ತಿದ್ದೀರಾ ಎಂದು ಯುವಕರು ಪ್ರಶ್ನಿಸಿದ್ದು, ಕೆಲ ಯುವಕರೂ ಜಗಳಕ್ಕೆ ಇಳಿದಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಮತದಾರರಿಗೆ ಆಮಿಷ: ಆರೋಪ’
‘ಕಾಂಗ್ರೆಸ್‌ ಮುಖಂಡ ಉಮಾಶಂಕರ್ ಹಾಗೂ ಬೆಂಬಲಿಗರು, ಪ್ರಿಯಕೃಷ್ಣ ನೇತೃತ್ವದಲ್ಲಿ ಯುಗಾದಿ ಹಬ್ಬದ ನೆಪದಲ್ಲಿ ಮತದಾರರನ್ನು ಸೆಳೆಯಲು ಸಮಾವೇಶಕ್ಕೆ ತಯಾರಿ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

‘ಕಾಂಗ್ರೆಸ್ ಹೆಸರಿನಲ್ಲಿ ಸಮಾವೇಶ ನಡೆಸಿದ್ದರೆ, ನಾವು ಕೇಳುತ್ತಿರಲಿಲ್ಲ. ಯುಗಾದಿ ಉತ್ಸವದ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದ ವರ್ತನೆಯನ್ನು ಖಂಡಿಸಿದೆವು’ ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು