ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನೇಶ್‌ ಅಮಿನ್‌ ಮಟ್ಟು ಸೇರಿ ಇತರರ ಮೇಲಿನ ಎಫ್‌ಐಆರ್‌ ವಾಪಸ್‌ ಪಡೆಯಲು ಮನವಿ

Published 8 ಮೇ 2023, 20:41 IST
Last Updated 8 ಮೇ 2023, 20:41 IST
ಅಕ್ಷರ ಗಾತ್ರ

ಬೆಂಗಳೂರು: ‘ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು, ಹೋರಾಟಗಾರರಾದ ಬಿ.ಹರೀಶ್‌ಕುಮಾರ್‌ ಬೈರಪ್ಪ, ಹೇಮಂತ್‌ಕುಮಾರ್‌, ಬಿಂದುಗೌಡ, ದಿಲೀಪ್‌ಗೌಡ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ದಾಖಲಿಸಿರುವ ಎಫ್‌ಐಆರ್ ಅನ್ನು ಹಿಂಪಡೆಯಬೇಕು’ ಎಂದು ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

‘ದಿನೇಶ್‌ ಮತ್ತಿತರರು ತಮ್ಮ ಫೇಸ್‌ಬುಕ್‌ನಲ್ಲಿ ‘ಬಿ.ಎಲ್‌.ಸಂತೋಷ್‌ ಮಾತನಾಡಿದ್ದಾರೆ ಎನ್ನಲಾದ ವರದಿಯನ್ನು ಪೋಸ್ಟ್‌ ಮಾಡಿ ‘ಇದು ನಿಜವೇ? ಅಲ್ಲವೇ? ಎಂದು ಸಂತೋಷ್‌ ಸ್ಪಷ್ಟೀಕರಣ ಕೊಡಲಿ’ ಎಂದು ಹೇಳಿದ್ದರು. ತಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಪ್ರಶ್ನೆ ಮಾಡಿದ್ದಾರೆ. ಅವರು ವರದಿಯ ಸಮರ್ಥನೆ ಮಾಡಿಲ್ಲ. ಇದು ನಿಜವೆಂದೂ ಪ್ರಚಾರ ಮಾಡಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಒಕ್ಕೂಟದ ಎಲ್‌.ಎನ್‌. ಮುಕುಂದರಾಜ್‌, ಜಾಣಗೆರೆ ವೆಂಕಟರಾಮಯ್ಯ, ಕೆ.ಎಸ್.ವಿಮಲಾ, ವಸುಂಧರಾ ಭೂಪತಿ ಹೇಳಿದ್ದಾರೆ.

‘ಅವರ ಮೇಲೆ ದುರುದ್ದೇಶ, ಹಗೆತನದ ಭಾಗವಾಗಿ ದೂರು ನೀಡಲಾಗಿದೆ’ ಎಂದು ಹೇಳಿದ್ದಾರೆ.

‘ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ಅವರು ಖರ್ಗೆ ಕುಟುಂಬಕ್ಕೆ ಬೆದರಿಕೆ ಹಾಕಿರುವ ಆಡಿಯೊದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಮಣಿಕಂಠ ಅವರ ಮೇಲೆ ಎಫ್‌ಐಆರ್ ದಾಖಲಿಸಿ ಆಗಲೇ ಬಂಧಿಸಬೇಕಿತ್ತು. ಸಂಬಂಧಪಟ್ಟವರ ಮೌನವು ಆತಂಕ ತಂದಿದೆ. ವಿಜಯಪುರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ್‌ ಸಹ ಜನರನ್ನು ಪ್ರಚೋದಿಸುವ ಹೇಳಿಕೆ ಕೊಟ್ಟಿದ್ದಾರೆ. ಅವರ ವಿರುದ್ಧವೂ ಕ್ರಮವಾಗಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಡಾ.ಅನಿಲ್‌ಕುಮಾರ್ ಅವರ ಮನೆ ಮೇಲೆ ಗೂಂಡಾಗಳು ದಾಳಿ ಮಾಡಲು ಯತ್ನಿಸಿರುವುದು ಖಂಡನೀಯ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಮಕ್ಕೆ ಆಗ್ರಹಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT