ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಸ್ಥಿತಿ-ಗತಿ:ಸಿ.ವಿ.ರಾಮನ್‌ನಗರ; ಬಿಜೆಪಿಗೆ ಪ್ರತಿರೋಧ ಒಡ್ಡಲು ಕಾಂಗ್ರೆಸ್

Last Updated 22 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಬೆಂಗಳೂರು: ಕ್ಷೇತ್ರ ರಚನೆಯಾದ ನಂತರ ಬಿಜೆಪಿ ಅಭ್ಯರ್ಥಿಗೆ ಮಣೆಹಾಕಿರುವ ಸಿ.ವಿ. ರಾಮನ್‌ನಗರ ವಿಧಾನಸಭೆ ಕ್ಷೇತ್ರದಲ್ಲಿ ಎಸ್‌. ರಘು ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಒಂದು ಅವಧಿಗಿಂತ ಮತ್ತೊಂದು ಅವಧಿಗೆ ಮತಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿಗೆ ಕಾಂಗ್ರೆಸ್‌ ಪ್ರತಿರೋಧ ತೋರಲು ಮತ್ತೆ ಸನ್ನದ್ಧವಾಗುತ್ತಿದೆ. ಜೆಡಿಎಸ್‌ ಅಭ್ಯರ್ಥಿಯ ಹುಡುಕಾಟದಲ್ಲಿದೆ.

ದೇಶದ ಎಲ್ಲ ಭಾಗದ ಜನರನ್ನೂ ಒಳಗೊಂಡು ‘ಮಿನಿ ಇಂಡಿಯಾ’ ರೀತಿಯಲ್ಲಿದೆ ಸಿ.ವಿ. ರಾಮನ್‌ನಗರ ಕ್ಷೇತ್ರ. ರಕ್ಷಣಾ ವಲಯ, ವಾಯಸೇನೆಗೆ ಸಂಬಂಧಿಸಿದ ಕಚೇರಿಗಳಿರುವುದರಿಂದ ಎಲ್ಲ ರಾಜ್ಯದ ಜನರೂ ಇಲ್ಲಿದ್ದಾರೆ. ಜೊತೆಗೆ ಪ್ರತಿಷ್ಠಿತ ಇಂದಿರಾನಗರ ಸೇರಿದಂತೆ ನ್ಯೂ ತಿಪ್ಪಸಂದ್ರ, ಹಳೇ ಮದ್ರಾಸ್‌ ರಸ್ತೆ, ಎಚ್‌ಎಎಲ್‌ ವ್ಯಾಪ್ತಿಯನ್ನು ಹೊಂದಿದೆ.

ಹಿಂದೆ ಇದ್ದ ಭಾರತಿನಗರ ಹಾಗೂ ವರ್ತೂರು ವಿಧಾನಸಭೆ ಕ್ಷೇತ್ರದಲ್ಲಿನ ಪ್ರದೇಶಗಳನ್ನು ಸೇರಿಸಿಕೊಂಡು ಹೊಸ ವಿಧಾನಸಭೆ ಕ್ಷೇತ್ರವಾಗಿ ರೂಪುಗೊಂಡ ಸಿ.ವಿ. ರಾಮನ್‌ನಗರ ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿ ಬೇರೂರಿದೆ. ಕಳೆದ ಮೂರು ಚುನಾವಣೆಗಳಲ್ಲಿ ಒಂದಕ್ಕಿಂತ ಒಂದು ಅವಧಿಗೆ ಐದು ಸಾವಿರಕ್ಕೂ ಹೆಚ್ಚು ಮತಗಳನ್ನು ಹೆಚ್ಚಿಸಿಕೊಂಡಿದೆ. ಎಸ್‌. ರಘು ಅವರ ಈ ಪ್ರಭಾವವನ್ನು ತಡೆಯಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಳೆದ ಮೂರು ಬಾರಿ ಸಾಕಷ್ಟು ಪ್ರಯಾಸಪಟ್ಟರೂ ವಿಫಲವಾಗಿವೆ. 2008ರಲ್ಲಿ ಕಾಂಗ್ರೆಸ್‌ನ ಕೆ.ಸಿ. ವಿಜಯಕುಮಾರ್‌, 2013ರಲ್ಲಿ ಪಿ. ರಮೇಶ್‌, 2018ರಲ್ಲಿ ಸಂಪತ್‌ ರಾಜ್‌ ಸೋತಿದ್ದರು. ಪಿ. ರಮೇಶ್‌ 2018ರಲ್ಲಿ ಜೆಡಿಎಸ್‌ಗೆ ಬಂದು ಹಿಂದೆಂದಿಗಿಂತ ಪಕ್ಷಕ್ಕೆ ಹೆಚ್ಚು ಮತ ತಂದುಕೊಡಲಷ್ಟೇ ಶಕ್ತರಾಗಿದ್ದರು. ಮಾಜಿ ಮೇಯರ್‌ಗಳಾಗಿದ್ದ ವಿಜಯಕುಮಾರ್‌, ಸಂಪತ್‌ರಾಜ್‌ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಹೆಚ್ಚಿನ ಹೋರಾಟ ನೀಡಿದ್ದರು.

ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿ ಹೆಚ್ಚಿದ್ದು, ಈ ಕ್ಷೇತ್ರದಲ್ಲಿ ಸರ್ಕಾರಿ ಹಾಗೂ ಪಾಲಿಕೆಯ ವ್ಯವಸ್ಥೆಯೂ ಹೈಟೆಕ್‌ ಆಗಿ ರೂಪುಗೊಳ್ಳುತ್ತಿದೆ. ಇಂದಿರಾನಗರದ ಸಿಎಂಎಚ್‌ ರಸ್ತೆ ಹಾಗೂ 100 ಅಡಿ ರಸ್ತೆ ಕಾಂಕ್ರೀಟ್‌ ರಸ್ತೆಯಾಗುವಾಗ ನಾಗರಿಕರು ಸಾಕಷ್ಟು ಪ್ರಯಾಸಪಟ್ಟಿದ್ದರು. ರಾಜಕೀಯವಾಗಿ ಈ ಕ್ಷೇತ್ರದ 6 ವಾರ್ಡ್‌ಗಳಲ್ಲಿ ಬಿಜೆಪಿಯ ಕಾರ್ಪೊರೇಟರ್‌ಗಳೇ ಹೆಚ್ಚಿದ್ದರು. ಪ್ರತಿಷ್ಠಿತ ಕ್ಷೇತ್ರಕ್ಕೆ ಅಭಿವೃದ್ಧಿ ವಿಷಯದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳ ನಿರೀಕ್ಷೆ ಇನ್ನೂ ಇದೆ.

ಮೂರು ಬಾರಿ ಗೆಲುವು ಸಾಧಿಸಿರುವ ಎಸ್‌. ರಘು ಅವರಿಗೆ ಮತ್ಯಾವ ಆಕಾಂಕ್ಷಿಗಳ ಸೆಣಸೂ ಇಲ್ಲ. ಪಕ್ಷದ ವರಿಷ್ಠರು ಟಿಕೆಟ್‌ ಕೊಟ್ಟರೆ ಅವರ ಸ್ಪರ್ಧೆ ಖಚಿತ. ಟಿಕೆಟ್ ಸಿಗಬಹುದೆಂಬ ಭರವಸೆಯಲ್ಲಿರುವ ಅವರು ಹಿಂದಿನ ಅವಧಿಗಳಲ್ಲಿನ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದಾರೆ. ಪ್ರತಿದಿನವೂ ಜನರೊಂದಿಗೆ ಸಭೆಗಳು ನಡೆಯುತ್ತಿವೆ. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳು ಚಟುವಟಿಕೆ ನಡೆಸಲು ಟಿಕೆಟ್‌ ಅಂತಿಮವಾಗದೇ ಇರುವುದು ತೊಡಕಾಗಿದೆ.

ಈ ಬಾರಿ ಕಾಂಗ್ರೆಸ್‌ ಹೆಚ್ಚಿನ ಶ್ರಮ ಹಾಕಲು ಮುಂದಾಗಿದ್ದು, 8 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಸ್ಕ್ರೀನಿಂಗ್‌ ಕಮಿಟಿ ಸುತ್ತುಗಳಲ್ಲಿ ಕೆಲವರನ್ನು ಕೈಬಿಡಲಾಗಿದ್ದು, ಇದೀಗ ‌ಎಸ್‌. ಆನಂದ್‌ಕುಮಾರ್‌, ಆರ್‌. ಸಂಪತ್‌ರಾಜ್‌, ವಿ. ಶಂಕರ್‌ ಅಂತಿಮ ಹಂತದಲ್ಲಿದ್ದಾರೆ. ಇನ್ನು ಜೆಡಿಎಸ್‌ನಲ್ಲಿ ಅಭ್ಯರ್ಥಿಯ ಆಯ್ಕೆ ಅಂತಿಮಗೊಂಡಿಲ್ಲ.

ಚುನಾವಣೆ ಮತಗಳ ವಿವರ

ಪಕ್ಷಗಳು;2018;2013;2008

ಬಿಜೆಪಿ;58,792;53,284;47,369

ಕಾಂಗ್ರೆಸ್‌;46,593;44,908;30714

ಜೆಡಿಎಸ್‌;20,463;3,169;8,711


ಹಾಲಿ ಮತದಾರರ ವಿವರ

ಪುರುಷರು;1,38,654

ಮಹಿಳೆಯರು;1,24,595

ಲಿಂಗತ್ವ ಅಲ್ಪಸಂಖ್ಯಾತರು;118

ಒಟ್ಟು;2,63,367

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT