ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್‌ ಸಮೀಕ್ಷೆ – ಮಹದೇವಪುರ : ಬಿಜೆಪಿ–ಕಾಂಗ್ರೆಸ್‌ನ ಹೊಸಬರ ಮಧ್ಯೆ ನೇರ ಸ್ಪರ್ಧೆ

Published 5 ಮೇ 2023, 23:15 IST
Last Updated 5 ಮೇ 2023, 23:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳು ಹೊಸಮುಖಗಳನ್ನು ಕಣಕ್ಕೆ ಇಳಿಸಿರುವುದರಿಂದ ಮಹದೇವಪುರ ವಿಧಾನಸಭಾ ಕ್ಷೇತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

2008ರಿಂದಲೂ ಬಿಜೆಪಿ ಭದ್ರಕೋಟೆ ಆಗಿರುವ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಶತಾಯಗತಾಯ ‍ಪ್ರಯತ್ನಿಸುತ್ತಿರುವ ಕಾಂಗ್ರೆಸ್‌, ಎರಡು ಬಾರಿ ಸೋಲು ಅನುಭವಿಸಿದ್ದ ಎ.ಸಿ.ಶ್ರೀನಿವಾಸ್‌ ಅವರ ಬದಲು ಕಳೆದ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದ ಎಚ್‌.ನಾಗೇಶ್ ಅವರನ್ನು ಮಹದೇವಪುರ ಕ್ಷೇತ್ರದಿಂದ ಕಣಕ್ಕೆ ಇಳಿಸಿದೆ. 

ಮೂರು ಅವಧಿ ಶಾಸಕರಾಗಿ, ಸಚಿವರೂ ಆಗಿದ್ದ ಅರವಿಂದ ಲಿಂಬಾವಳಿ ಬದಲು ಅವರ ಪತ್ನಿ ಮಂಜುಳಾ ಲಿಂಬಾವಳಿ ಅವರಿಗೆ ಟಿಕೆಟ್‌ ನೀಡುವ ಮೂಲಕ ಬಿಜೆಪಿ ಹೊಸ ದಾಳ ಉರುಳಿಸಿದೆ. ಆಮ್‌ ಆದ್ಮಿ ಪಕ್ಷದಿಂದ ಸಿ.ಆರ್.ನಟರಾಜ್‌, ಬಹುಜನ ಸಮಾಜ ಪಕ್ಷದಿಂದ ಕೆ.ಸಿ.ಪ್ರಸಾದ್, ಜೆಡಿಯುನಿಂದ ಎಂ.ವಿ.ಗೋಪಾಲಕೃಷ್ಣ, ಉತ್ತಮ ಪ್ರಜಾಕೀಯ ಪಕ್ಷದಿಂದ ಆರ್.ನಾಗರಾಜ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಶಿವಾಜಿ ಲಮಾಣಿ ಹಾಗೂ ಎಂಟು ಪಕ್ಷೇತರರು ಕಣದಲ್ಲಿ ಇದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ಕಾಣುತ್ತಿದೆ. 

ಮಹದೇವಪುರ ಕ್ಷೇತ್ರದ ಬೆಳತೂರಿನ ಎಚ್‌.ನಾಗೇಶ್‌ ಅವರನ್ನು ಸ್ಥಳೀಯ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಹಲವು ದಲಿತ ಸಂಘಟನೆಗಳು ಅವರಿಗೆ ನೇರ ಬೆಂಬಲ ಘೋಷಿಸಿರುವುದು, ಜೆಡಿಎಸ್‌ ಅಭ್ಯರ್ಥಿಯನ್ನು ಹಾಕದೇ ಇರುವುದು ಕಾಂಗ್ರೆಸ್‌ಗೆ ಬಲ ತಂದಿದೆ. ಮುಳಬಾಗಿಲು ಕ್ಷೇತ್ರದಂತೆ ಅಭಿವೃದ್ಧಿಗೊಳಿಸುವ ಭರವಸೆ ನೀಡುತ್ತಾ ಜನರ ಮನಸ್ಸು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

ಶಾಸಕ ಅರವಿಂದ ಲಿಂಬಾವಳಿ ಅವರು ಕ್ಷೇತ್ರದಲ್ಲಿ ರಚಿಸಿರುವ ‘ಜನರ ಕಾರ್ಯಪಡೆ’ ಬಿಜೆಪಿ ಅಭ್ಯರ್ಥಿ ಮಂಜುಳಾ ಅವರ ಪರ ಕೆಲಸ ಮಾಡುತ್ತಿದೆ. ಸಾಮಾನ್ಯ ಗೃಹಿಣಿಯಾಗಿದ್ದ ತಮ್ಮನ್ನು ಶಾಸಕಿ ಮಾಡಬೇಕು ಎನ್ನುವ ಪಕ್ಷದ ಆಶಯ ಈಡೇರಿಸಲು, ಕ್ಷೇತ್ರದ ಜನಸೇವೆ ಮಾಡಲು ಇನ್ನೊಂದು ಅವಕಾಶ ಕೊಡಿ ಎಂದು ಮಹಿಳಾ ಮತಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. 

ಮಹದೇವಪುರ ವಿಧಾನಸಭಾ ಕ್ಷೇತ್ರ ಬೆಳ್ಳಂದೂರು, ಮಾರತಹಳ್ಳಿ, ದೊಡ್ಡನೆಕ್ಕುಂದಿ ಮತ್ತು ಗರುಡಾಚಾರ್ ಪಾಳ್ಯ ವ್ಯಾಪ್ತಿ ಒಳಗೊಂಡಿದೆ. ಸಂಚಾರ ದಟ್ಟಣೆ ಸಮಸ್ಯೆ, ದೂಳು, ನೀರಿನ ಬವಣೆ, ರಸ್ತೆಗುಂಡಿ ಸಮಸ್ಯೆಗಳನ್ನು ಕಾಂಗ್ರೆಸ್‌ ಪ್ರಧಾನವಾಗಿ ಪ್ರಸ್ತಾಪಿಸುತ್ತಿದೆ. ಮೂರು ಅವಧಿ ಕೆಲಸವನ್ನೇ ಮಾಡದವರಿಗೆ ಮತ್ತೊಂದು ಅವಕಾಶ ಏಕೆ?  ಕ್ಷೇತ್ರವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡೋಣ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರೋಧಿ ಮತಗಳು, ಜಾತ್ಯತೀತ ಮತಗಳ ಕ್ರೋಡೀಕರಣಕ್ಕೆ ಪ್ರಯತ್ನಿಸುತ್ತಿದೆ.  

ಕಾವೇರಿ ನೀರಿನ ಪೈಪ್‌ಲೈನ್ ಕಾಮಗಾರಿ ಬಹುತೇಕ ಮುಗಿದಿದೆ. ಕಾವೇರಿ ಸಂಪರ್ಕ ಪೂರ್ಣಗೊಂಡರೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ. ಹಲವು ಅಭಿವೃದ್ಧಿ ಕಾಮಗಾರಿಗಳಾಗಿವೆ. ಕೆರೆಗಳ ಪುನರುಜ್ಜೀವನ ಮಾಡಲಾಗಿದೆ. ಜನರ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸಲಾಗಿದೆ ಎನ್ನುವ ವಿಷಯಗಳನ್ನು ಬಿಜೆಪಿ ಮನವರಿಕೆ ಮಾಡಿಕೊಡುತ್ತಿದೆ.

ಮಂಜುಳಾ ಅವರ ಪತಿ ಅರವಿಂದ ಲಿಂಬಾವಳಿ ಕ್ಷೇತ್ರ ಸುತ್ತಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಹಿಂದುತ್ವದ ವಿಷಯಗಳು ಹಿಂದೆ ಸರಿದು, ಮೋದಿ ಹೆಸರು, ರಾಜ್ಯ, ಕೇಂದ್ರ ಸರ್ಕಾರಗಳ ಸಾಧನೆಗಳು ಮುನ್ನೆಲೆಗೆ ಬಂದಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT