ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲದ ಮೇಲೆ ಅಕ್ರಮ ಕಟ್ಟಡ: ತೆರವಿಗೆ ಹೈಕೋರ್ಟ್‌ ನಿರ್ದೇಶನ

Last Updated 5 ಫೆಬ್ರುವರಿ 2020, 19:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಶ್ರೀರಾಂಪುರದಲ್ಲಿರುವ ಪುರಾತನ ಶ್ರೀರಾಮಚಂದ್ರ ದೇವಾಲಯದ ಮೇಲ್ಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಒಂದು ಮತ್ತು ಎರಡನೇ ಮಹಡಿ ಕಟ್ಟಡಗಳನ್ನು ಮುಂದಿನ ಆರು ವಾರಗಳಲ್ಲಿ ತೆರವುಗೊಳಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಟಿ.ಆರ್ ಆನಂದ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

‘ತೆರವುಗೊಳಿಸಿದ ಕುರಿತಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ’ ಎಂದು ಬಿಬಿಎಂಪಿಗೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್‌ 30ಕ್ಕೆ ಮುಂದೂಡಿದೆ.

‘ಬಿಬಿಎಂಪಿಯಿಂದ ಅನುಮತಿ ಪಡೆಯದೆ ಹಾಗೂ ಧಾರ್ಮಿಕ ಪರಿಕಲ್ಪನೆಗೆ ವಿರುದ್ಧವಾಗಿ ದೇವಸ್ಥಾನದ ಟ್ರಸ್ಟ್‌ನವರು ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಆದ್ದರಿಂದ, ಅವುಗಳನ್ನು ತೆರವುಗೊಳಿಸಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಅನಧಿಕೃತ ಸಾಕು ಪ್ರಾಣಿ ಸಂವರ್ಧನೆ ಕೇಂದ್ರಗಳಿಗೆ ಅಂಕುಶ

‘ಶ್ವಾನ ತಳಿ ಸಂವರ್ಧನೆ ಸೇರಿದಂತೆ ಸಾಕು ಪ್ರಾಣಿ ಮಾರಾಟಗಾರರು ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ’ ಎಂದು ಹೈಕೋರ್ಟ್‌ ಆದೇಶಿಸಿದೆ.

‘ನಾಯಿಗಳೂ ಸೇರಿದಂತೆ ಅನಧಿಕೃತ ಸಾಕು ಪ್ರಾಣಿಗಳ ತಳಿ ಸಂವರ್ಧನೆ ಮತ್ತು ಮಾರಾಟ ನಿಯಂತ್ರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸ್ವಯಂ ಸೇವಾ ಸಂಘಟನೆ ‘ಕ್ಯೂಪಾ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ನ್ಯಾಯಪೀಠ ಬುಧವಾರ ವಿಲೇವಾರಿ ಮಾಡಿದೆ.

‘ಮುಂದಿನ ಮೂರು ತಿಂಗಳಲ್ಲಿ ಸಾಕು ಪ್ರಾಣಿಗಳ ತಳಿ ಸಂವರ್ಧನೆ ಮತ್ತು ಮಾರಾಟ ಮಾಡುವ ಎಲ್ಲ ವ್ಯಾಪಾರಸ್ಥರು ಪರವಾನಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದುಕೊಳ್ಳಬೇಕು’. ಅನುಮತಿ ಪಡೆಯದೆದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬಹುದು’ ಎಂದು ನ್ಯಾಯಪೀಠ ಸೂಚಿಸಿದೆ.

ರಾಜ್ಯದಲ್ಲಿ ‘ಪ್ರಾಣಿ ಕಲ್ಯಾಣ ಮಂಡಳಿ’ ಪುನಾರಚಿಸಬೇಕು. ತಳಿ ಸಂವರ್ಧನಾ ಅಧಿನಿಯಮ–2017 ಮತ್ತು ಸಾಕು ಪ್ರಾಣಿಗಳ ಅಧಿನಿಯಮ-2018ನ್ನು ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು. 2019ರ ನವೆಂಬರ್ 25ರಂದು ‘ಪ್ರಾಣಿ ಕಲ್ಯಾಣ ಮಂಡಳಿ’ ರಚನೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT