ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಂದ ಸವಾಲೊಡ್ಡುವ ಸಾಹಿತ್ಯ ಸೃಷ್ಟಿ: ಚಂದ್ರಶೇಖರ ಕಂಬಾರ

ಲೇಖಕಿಯರ ಸಂಘದಿಂದ 75 ಮಂದಿಗೆ ಪ್ರಶಸ್ತಿ ಪ್ರದಾನ
Published 23 ಜುಲೈ 2023, 16:17 IST
Last Updated 23 ಜುಲೈ 2023, 16:17 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯ ಲೋಕದಲ್ಲಿ ಲೇಖಕಿಯರು ತಮ್ಮದೆಯಾದ ಅಸ್ಮಿತೆ ಕಂಡುಕೊಂಡಿದ್ದಾರೆ. ಪುರುಷ ಸಾಹಿತ್ಯಕ್ಕೆ ಸಮಾನವಾಗಿ ನಿಲ್ಲುವ ಹಾಗೂ ಸವಾಲೊಡ್ಡುವ ಸಾಹಿತ್ಯವನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಮೆಚ್ಚುಗೆ ವ್ಯಕ್ತಪಡಿಸಿದರು. 

ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಭಾನುವಾರ ಹಮ್ಮಿಕೊಂಡ 44ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ 75 ಲೇಖಕಿಯರಿಗೆ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. 

‘ಕನ್ನಡದ ಹೆಣ್ಣು ಮಕ್ಕಳು ಉತ್ತಮವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಪ್ರತ್ಯೇಕ ಬರವಣಿಗೆ ಶೈಲಿಯ ಮೂಲಕ ಛಾಪು ಮೂಡಿಸುತ್ತಿದ್ದಾರೆ. ಪುರುಷರಿಗಿಂತಲೂ ಭಿನ್ನವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಅವರು, ಧೈರ್ಯದಿಂದ ಬರೆಯುತ್ತಿದ್ದಾರೆ. ಇಲ್ಲಿರುವಷ್ಟು ಬರಹಗಾರ್ತಿಯರು ಬೇರೆ ರಾಜ್ಯಗಳಲ್ಲಿ ಇಲ್ಲ. ಕನ್ನಡ ಸಾಹಿತ್ಯದ ಏಳ್ಗೆಯ ವಿಚಾರದಲ್ಲಿ ಇದು ಸಂತಸದ ಸಂಗತಿ’ ಎಂದರು.

‘ಇಲ್ಲಿನ ಲೇಖಕಿಯರು ಪ್ರತ್ಯೇಕ ಸಂಘ ಸ್ಥಾಪಿಸಿ, ಇತರ ರಾಜ್ಯಗಳಿಗೆ ಮಾದರಿಯಾಗಿದ್ದಾರೆ. ಕರ್ನಾಟಕ ಹೊರತುಪಡಿಸಿದರೆ ಬೇರೆ ಯಾವುದೇ ರಾಜ್ಯದಲ್ಲಿ ಪ್ರತ್ಯೇಕ ಲೇಖಕಿಯರ ಸಂಘವಿಲ್ಲ. ಈ ವಿಚಾರದಲ್ಲಿ ನನಗೆ ಹೆಮ್ಮೆಯಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾಂಗ್ರೆಸ್ ನಾಯಕಿ ರಾಣಿ ಸತೀಶ್, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶಾಶ್ವತ ಸಂಘ–ಸಂಸ್ಥೆಗಳಿಗೆ ವಾರ್ಷಿಕ ಅನುದಾನವನ್ನು ನಿಯಮಿತವಾಗಿ ನೀಡಬೇಕು. ಲೇಖಕಿಯರ ಸಂಘಕ್ಕೆ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗುವುದು. ಸಮಾಜ ಸುಧಾರಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯದಿಂದ ಆದಾಯ, ಸಂಪತ್ತು ಬರುವುದಿಲ್ಲ. ಆದರೆ, ಸಾಹಿತ್ಯ, ಸಾಹಿತಿಗಳೇ ನಾಡಿನ ಸಂಪತ್ತು’ ಎಂದರು. 

ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ‘ಮಹಿಳೆಯರ ಮೇಲಿನ ಹಲ್ಲೆಗಳಿಗೆ ಕೊನೆಯಿಲ್ಲವಾಗಿದೆ. ಒಂದು ಘಟನೆ ಅಂತ್ಯಕಾಣುವ ವೇಳೆಗೆ ಮತ್ತೊಂದು ಘಟನೆ ಘಟಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮಣಿಪುರದಲ್ಲಿ ನಡೆದ ಪ್ರಕರಣ ಖಂಡನೀಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT