ಸೋಮವಾರ, ನವೆಂಬರ್ 30, 2020
20 °C
ಎಂಬಸ್ಸಿ ಕಂಪನಿಯಿಂದ ನೆರವು

ಕರ್ನಾಟಕ ಪಬ್ಲಿಕ್‌ ಶಾಲೆಗೆ ಹೊಸ ರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ಎಂಬಸ್ಸಿ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ನಡೆಯುತ್ತಿರುವ ಬಾಣಸವಾಡಿಯ ಪಬ್ಲಿಕ್ ಶಾಲೆಯ ಕಾಮಗಾರಿಯನ್ನು ಕೆ.ಜೆ.ಜಾರ್ಜ್ ಪರಿಶೀಲನೆ ನಡೆಸಿದರು.

ಶಾಲೆಯ ನವೀಕರಣ ಕೆಲಸವು ಸುಮಾರು ₹3.10 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಎಂಬಸ್ಸಿ ಕಂಪನಿಯು 12 ತರಗತಿ ಕೊಠಡಿಗಳು, ಒಂದು ಸಿಬ್ಬಂದಿ ಕೊಠಡಿ, ಪ್ರಾಂಶುಪಾಲರ ಕೊಠಡಿ ಹಾಗೂ ಬಾಲಕ ಬಾಲಕಿಯರಿಗೆ ಮತ್ತು ಶಿಕ್ಷಕರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣದ ಜೊತೆಗೆ ಊಟದ ಕೊಠಡಿ ಪಡಸಾಲೆಯನ್ನು ನಿರ್ಮಿಸಿಕೊಡುತ್ತಿದೆ. 

ಸೌರಶಕ್ತಿ ಸೌಲಭ್ಯ, ಮಳೆನೀರು ಸಂಗ್ರಹ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳನ್ನು ಎಂಬಸ್ಸಿ ಕಂಪನಿಯ ಸಿಬ್ಬಂದಿ ಜೊತೆಗೆ ಪರಿಶೀಲನೆ ನಡೆಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ತಾಯಣ್ಣರೆಡ್ಡಿ ಮಾತನಾಡಿ, ‘ಇಪ್ಪತ್ತು ವರ್ಷಗಳ ಪರಿಶ್ರಮದ ಫಲವಾಗಿ ಎಂಬಸ್ಸಿ ಕಂಪನಿಯು ಶಾಲೆ ಅಭಿವೃದ್ಧಿ ಪಡಿಸಿದೆ. ಮುಂದಿನ ದಿನಗಳಲ್ಲಿ ಪದವಿ ಕಾಲೇಜು ವಿಸ್ತರಿಸಲು ನಿರ್ಧರಿಸಲಾಗಿದೆ. ಹೊಸದಾಗಿ ಕಟ್ಟಡ ನಿರ್ಮಿಸಲಾಗಿದೆ. 1 ರಿಂದ 8 ನೇ ತರಗತಿವರೆಗೆ ಇದ್ದ ತರಗತಿಗಳನ್ನು ಪಿಯುಸಿಯವರೆಗೆ ತೆರೆಯಲು ಉದ್ದೇಶಿಸಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಯ ಎಲ್ಲ ಕಾಮಗಾರಿಗಳು ಪೂರ್ಣಗೊಂಡ ನಂತರ ಆದಷ್ಟು ಬೇಗ ಶಾಸಕ ಕೆ.ಜೆ.ಜಾರ್ಜ್ ಅವರಿಂದ ಉದ್ಘಾಟಿಸಲಾಗುವುದು’ ಎಂದರು.

ಎಂಬಸ್ಸಿ ಗ್ರೂಪ್ ಕಮ್ಯುನಿಟಿ ಮುಖ್ಯಸ್ಥೆ ಶೈನಾ ಗಣಪತಿ ಮಾತನಾಡಿ, ಶಾಲಾ ಕಟ್ಟಡ ಹಳೆಯದಾಗಿತ್ತು. ಸಿಎಸ್ಆರ್ ಅನುದಾನದಲ್ಲಿ ಶಾಲೆ ಅಭಿವೃದ್ಧಿಪಡಿಸಲಾಗಿದೆ‌’ ಎಂದರು. 

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ರಘು ದೇವರಾಜ್‌, ಬಿಇಒ ಕೃಷ್ಣ, ಮುಖ್ಯ ಶಿಕ್ಷಕಿ ಮಂಗಳಗೌರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು